ಡೆಂಘೀ ಜ್ವರದ ಬಗ್ಗೆ ಭಯ ಬೇಡ; ಎಚ್ಚರವಿರಲಿ

KannadaprabhaNewsNetwork |  
Published : May 17, 2025, 02:46 AM IST
ಬಳ್ಳಾರಿಯಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಡೆಂಘೀ ದಿನಾಚರಣೆ ಕಾರ್ಯಕ್ರಮಕ್ಕೆ ಉಪ ಮೇಯರ್ ಡಿ.ಸುಕುಂ ಚಾಲನೆ ನೀಡಿದರು.  | Kannada Prabha

ಸಾರಾಂಶ

ರಾಷ್ಟ್ರೀಯ ಡೆಂಘೀ ದಿನದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಪೌರ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಪುನರ್ ಮನನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಳ್ಳಾರಿ: ಡೆಂಘೀ ಜ್ವರದ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗ ಲಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶದಲ್ಲಿ ಪ್ರತಿ ವರ್ಷ ಮೇ 16ರಂದು ರಾಷ್ಟ್ರೀಯ ಡೆಂಘೀ ದಿನ ಆಚರಿಸಲಾಗುತ್ತದೆ ಎಂದು ಉಪ ಮೇಯರ್ ಡಿ. ಸುಕುಂ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ “ಡೆಂಘೀ ಸೋಲಿಸಲು ಹೆಜ್ಜೆಗಳು: ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ” ಎಂಬ ಘೋಷವಾಕ್ಯದಡಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಪೌರ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಪುನರ್ ಮನನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡೆಂಘೀ ಜ್ವರದ ಬಗ್ಗೆ ಭಯ ಬೇಡ, ಆದರೆ ಎಚ್ಚರವಿರಲಿ. ಎಲ್ಲರೂ ನಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಂಡು ಡೆಂಘೀ ಹರಡದಂತೆ ತಡೆಯೋಣ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ. ರಮೇಶಬಾಬು ಮಾತನಾಡಿ, ಜಿಲ್ಲೆಯಾದ್ಯಂತ ಡೆಂಘೀ ಜ್ವರ ಹರಡುವುದನ್ನು ಎದುರಿಸಲು ಮತ್ತು ನಿಯಂತ್ರಿಸಲು ಆರೋಗ್ಯ ಇಲಾಖೆ ಮಾಡುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಪ್ರತಿ ವರ್ಷ ಮೇ 16ರಂದು ರಾಷ್ಟ್ರೀಯ ಡೆಂಘೀ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಚೇರಿಯ ವಾರ್ಷಿಕವಾಗಿ ಆಯೋಜಿಸುವ ಈ ದಿನವು ಡೆಂಘೀ (ಸೊಳ್ಳೆಯಿಂದ ಹರಡುವ ವೈರಸ್) ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಡೆಗಟ್ಟುವಿಕೆ, ಶಿಕ್ಷಣ ಮತ್ತು ಆರಂಭಿಕ ಹಸ್ತಕ್ಷೇಪ ತಂತ್ರಗಳ ಮೂಲಕ ಸಾಮೂಹಿಕ ಕ್ರಮವನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ ಹಾಗೂ ಜಿಲ್ಲೆಯಲ್ಲಿ ಯಾವುದೇ ಡೆಂಘೀ ಮರಣ ಪ್ರಕರಣಗಳು ವರದಿಯಾಗದಂತೆ ಸಮಯೋಚಿತರಾಗಿ ಕಾರ್ಯನಿರ್ವಹಿಸಲು ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ ಮಾತನಾಡಿ, ಡೆಂಘೀ ಎಂಬುದು ಸೋಂಕಿತ ಈಡಿಸ್ ಈಜಿಪ್ಟಿ ಸೊಳ್ಳೆಯ ಕಡಿತದಿಂದ ಹರಡುವ ವೈರಸ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಡೆಂಘೀ ಸೊಳ್ಳೆ ಎಂದು ಕರೆಯಲಾಗುತ್ತದೆ. ಈ ರೋಗವು ಸೊಳ್ಳೆಗಳ ಸಂತಾನೋತ್ಪತ್ತಿ ಪರಿಸ್ಥಿತಿಗಳು ಸೂಕ್ತವಾಗಿರುವ ಮಳೆಗಾಲ ಮತ್ತು ಆನಂತರ ಹೆಚ್ಚಾಗುತ್ತದೆ. ಡೆಂಘೀ ತಡೆಗಟ್ಟುವ ಕಾರ್ಯಕ್ರಮಗಳಲ್ಲಿ ಸಮುದಾಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು. ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ನಿಖರವಾದ ಮಾಹಿತಿ ಹರಡುವುದು. ಸರ್ಕಾರದ ಉಪಕ್ರಮಗಳು ಮತ್ತು ಆರೋಗ್ಯ ಸೇವೆಯ ಲಭ್ಯತೆ ಎತ್ತಿತೋರಿಸುವುದು. ಡೆಂಘೀ ಋತುವಿಗೆ ಮುನ್ನ ಮುಂಜಾಗ್ರತಾ ಕ್ರಮಕೈಗೊಳ್ಳಲು ಸ್ಥಳೀಯ ಅಧಿಕಾರಿಗಳನ್ನು ಸಜ್ಜುಗೊಳಿಸುವುದು ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಆರ್. ಅಬ್ದುಲ್ಲಾ ಪ್ರಾಸ್ತಾವಿಕ ಮಾತನಾಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಡೆಂಘೀ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂಬ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಬಳಿಕ ಜಿಲ್ಲಾ ವಿಬಿಡಿಸಿ ಸಮಾಲೋಚಕ ಪ್ರತಾಪ್ ಎಚ್‌. ಅವರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ, ಮೇಲ್ವಿಚಾರಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಈಡೀಸ್ ಲಾರ್ವ ಉತ್ಪತ್ತಿ ತಾಣಗಳ ನಾಶ ಕಾರ್ಯದ ಕುರಿತು ತರಬೇತಿ ನೀಡಿದರು.

ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ, ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ವೀರೇಂದ್ರಕುಮಾರ್, ಆರ್‌ಸಿಎಚ್‌ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ವಿಬಿಡಿಸಿ ಕಾರ್ಯಕ್ರಮ ಅನುಷ್ಠನಾ ಅಧಿಕಾರಿಗಳಾದ ಡಾ. ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ದಾಸಪ್ಪನವರ, ರವೀಂದ್ರ ಜಿನಗಾ, ಮರಿಬಸವನ ಗೌಡ ಚಾನಾಳ್ ಹಾಗೂ ಶಕುಂತಲಾ ಬಿ. ಉಪಸ್ಥಿತರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ