ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಬೇಡಿ: ನ್ಯಾಯಾಧೀಶೆ ರೇಣುಕಾ ರಾಯ್ಕರ

KannadaprabhaNewsNetwork | Published : Jan 27, 2024 1:15 AM

ಸಾರಾಂಶ

ಮತದಾರರು ಜವಾಬ್ದಾರಿ ಅರಿತು ಮತದಾನ ಮಾಡದೇ ಇದ್ದಲ್ಲಿ ಉತ್ತಮ ಜನಪ್ರತಿನಿಧಿಯ ಆಯ್ಕೆ ಸಾಧ್ಯವಿಲ್ಲ. ಪ್ರತಿ ಮತಕ್ಕೂ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಇದೆ. ಒಂದು ಮತ ಒಬ್ಬ ಅಭ್ಯರ್ಥಿಯ ಭವಿಷ್ಯ ನಿರ್ಧರಿಸಲಿದೆ.

ಕಾರವಾರ:

ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮತದಾರರು ಜವಾಬ್ದಾರಿ ಅರಿತು ಮತದಾನ ಮಾಡದೇ ಇದ್ದಲ್ಲಿ ಉತ್ತಮ ಜನಪ್ರತಿನಿಧಿಯ ಆಯ್ಕೆ ಸಾಧ್ಯವಿಲ್ಲ. ಪ್ರತಿ ಮತಕ್ಕೂ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಇದೆ. ಒಂದು ಮತ ಒಬ್ಬ ಅಭ್ಯರ್ಥಿಯ ಭವಿಷ್ಯ ನಿರ್ಧರಿಸಲಿದೆ. ಮತದಾರರು ಸಂವಿಧಾನ ನೀಡಿರುವ ಮತದಾನದ ಹಕ್ಕು ಯೋಚಿಸಿ ಚಲಾಯಿಸಬೇಕು. ಯುವ ಜನತೆ ಹೆಚ್ಚು ಜಾಗೃತರಾಗಿ, ತಪ್ಪದೆ ಮತದಾನ ಮಾಡಬೇಕು ಹಾಗೂ ಜಿಲ್ಲಾದ್ಯಂತ ಮತದಾನದ ಮಹತ್ವ ಕುರಿತಂತೆ ಹೆಚ್ಚಿನ ಅರಿವು ಕಾರ್ಯಕ್ರಮಗಳು ನಡೆಯಬೇಕು ಎಂದರು.ಜಿಲ್ಲೆಯಲ್ಲಿ ಯುವ ಮತದಾರರನ್ನು ಆಕರ್ಷಿಸಿ, ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರ ವ್ಯಾಪ್ತಿಯಲ್ಲಿ ಸ್ವಚ್ಛತಾ ವಾಹನಗಳಲ್ಲಿ ಜಿಂಗಲ್ ಮೂಲಕ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದೇ ರೀತಿ ಜಿಲ್ಲೆಯ ಪ್ರತಿಯೊಂದು ಗ್ರಾಮಮಟ್ಟದಲ್ಲಿಯೂ ಜಾಗೃತಿ ಮೂಡಿಸುವ ಜತೆಗೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.ಮತದಾರರ ಪ್ರತಿಜ್ಞಾವಿಧಿ ಬೋಧಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ. 90ರಷ್ಟು ಮತದಾನ ಆಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಬಾರಿಯ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆ ಅಧಿಕವಾಗಿದ್ದು , ಎಲ್ಲರು ಹಕ್ಕು ಚಲಾಯಿಸುವ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.ಇದೇ ವೇಳೆ 18 ವರ್ಷ ತುಂಬಿದ ನೂತನ ಮತದಾರರಿಗೆ ಸಾಂಕೇತಿಕವಾಗಿ ಚುನಾವಣಾ ಗುರುತಿನ ಚೀಟಿ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಕನಿಷ್ಕ, ಜಿಪಂ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಡಿಎಚ್‌ಒ ಡಾ. ನೀರಜ್ ಬಿ.ವಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಇದ್ದರು.

Share this article