ಡಾ. ಅಂಬೇಡ್ಕರ್ ಎಲ್ಲರಿಗೂ ಮಾದರಿಯಾಗುವ ವ್ಯಕ್ತಿ: ಲೋಕೇಶ್ ಎಸ್.ಆರ್

KannadaprabhaNewsNetwork | Published : Apr 15, 2024 1:36 AM

ಸಾರಾಂಶ

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ, ಪುಷ್ಪಾರ್ಚಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ದೇಶ ಕಂಡ ಮಹಾನ್ ಚೇತನ ಮತ್ತು ಅತಿ ದೊಡ್ಡ ವಿದ್ಯಾವಂತ ಡಾ. ಬಿ.ಆರ್ ಅಂಬೇಡ್ಕರ್. ಅವರು ಎಷ್ಟು ಪದವಿ ಪಡೆದಿದ್ದರು ಎಂಬುದನ್ನು ನಾವು ಲೆಕ್ಕ ಹಾಕಬೇಕಾದೀತು. ಸಮಾಜದ ಪ್ರಗತಿಗಾಗಿ ಹಾಗೂ ಬದುಕಿನ ಚೌಕಟ್ಟಿನ ಸಂವಿಧಾನವನ್ನು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಮಾದರಿಯಾಗುವ ವ್ಯಕ್ತಿ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ಹೇಳಿದರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಓದುವ ಹವ್ಯಾಸವುಳ್ಳ ಅವರು ಹಸಿವು ಆದಾಗ ಮಾತ್ರ ಊಟ ಮಾಡಿ ಉಳಿದ ಹಣದಿಂದ ಪುಸ್ತಕ ಖರೀದಿಸುತ್ತಿದ್ದರು. ಸಂವಿಧಾನ ರಚನೆಗಾಗಿ ಬೇರೆ ಬೇರೆ ದೇಶದ ಸಂವಿಧಾನ ಓದಿ ನಮ್ಮ ದೇಶದಲ್ಲಿ ವಿವಿಧ ಧರ್ಮ, ಜಾತಿ, ಭಾಷೆಗಳಿಗೆ ಅನ್ವಯವಾಗುವಂತೆ ಸಂವಿಧಾನ ಬರೆದರು. ದೇಶ ಯಶಸ್ವಿಯಾಗಿ ಮುನ್ನಡೆಯಲು ಪ್ರಮುಖ ಪಾತ್ರ ನಮ್ಮ ಸಂವಿಧಾನ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ, ಪುಷ್ಪಾರ್ಚಣೆ ಮಾಡಿದರು. ಈ ಸಂದರ್ಭ ಉಪತಹಸೀಲ್ದಾರ್ ರಾಮಣ್ಣ ನಾಯ್ಕ, ನಗರಸಭೆ ಪೌರಾಯುಕ್ತ ಬದ್ರುದ್ದೀನ್ ಸೌದಾಗರ್ ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ ಕುಮಾರ್ ವಂದಿಸಿದರು. ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು.

Share this article