ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ ಎಂದು ನಂಬಿದ್ದ ಡಾ. ಅಂಬೇಡ್ಕರ್: ಮಕಾಂದಾರ್

KannadaprabhaNewsNetwork | Published : Jan 21, 2024 1:30 AM

ಸಾರಾಂಶ

ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ-ಸಾಧನೆ ಕುರಿತು ವಿದ್ಯಾರ್ಥಿಗಳು ಓದಿ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಮೋಕಾ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಮಕಾಂದರ್ ಸಲೆಹ ನೀಡಿದ್ದಾರೆ. ಕಾಲೇಜಿನಲ್ಲಿ ನಡೆದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಳ್ಳಾರಿ: ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮನುಷ್ಯರ ಒಡನಾಟಕ್ಕಿಂತ ಪುಸ್ತಕಗಳ ಒಡನಾಟವೇ ಹೆಚ್ಚಾಗಿ ಆನಂದ ಕೊಡುತ್ತಿತ್ತು. ಅವರ ಓದಿನ ಕ್ರಮವೂ ಭಿನ್ನವಾಗಿತ್ತು. ನಿರಂತರ ಅಧ್ಯಯನದಿಂದಾಗಿಯೇ ಅವರು ನಮ್ಮ ಸಂವಿಧಾನವನ್ನು ಸರ್ವಶ್ರೇಷ್ಠವಾಗಿಸಿದರು ಎಂದು ಮೋಕಾ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಮಕಾಂದರ್ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ "ಅಂಬೇಡ್ಕರ್ ಓದು " ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಅಪಾರವಾಗಿ ನಂಬಿದ್ದರು. ಹೀಗಾಗಿಯೇ ಅವರು ಶಿಕ್ಷಣಕ್ಕೆ ಆದ್ಯತೆ ನೀಡಿದರು. ಅವರ ಹೋರಾಟ ಹಾಗೂ ಜನ ಸಮುದಾಯದಲ್ಲಿ ಮೂಡಿಸಿದ ಜಾಗೃತ ಫಲಿತವಾಗಿಯೇ ಅವಕಾಶ ವಂಚಿತ ಸಮುದಾಯಗಳಿನ ವ್ಯಕ್ತಿಗಳು ಮುಖ್ಯವಾಹಿನಿಗೆ ಬಂದರು. ಜತೆಗೆ ಪ್ರತಿಯೊಬ್ಬರೂ ಆತ್ಮಾಭಿಮಾನದ ಜಾಗೃತಿ ಮೂಡಿತು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಚೈತನ್ಯ ಹೆಚ್ಚಾಯಿತು ಎಂದರಲ್ಲದೆ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ-ಸಾಧನೆ ಕುರಿತು ವಿದ್ಯಾರ್ಥಿಗಳು ಓದಿ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ.ಜಿ. ಕಲಾವತಿ ಮಾತನಾಡಿ, ನಿರಂತರ ಓದು ವ್ಯಕ್ತಿಯಲ್ಲಿ ವೈಚಾರಿಕ ಪ್ರಜ್ಞೆ, ಪ್ರಶ್ನಿಸುವ ಮನೋಭಾವ ಬೆಳೆಸುತ್ತದೆ. ಅಂಬೇಡ್ಕರ್ ಅವರು ಭಾರತಕ್ಕಷ್ಟೇ ಅಲ್ಲ; ವಿಶ್ವಮಾನ್ಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅನೇಕ ರಾಷ್ಟ್ರಗಳ ಸಾಧಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರಲ್ಲದೆ, ಅಂಬೇಡ್ಕರ್ ಓದು ನಮ್ಮಲ್ಲಿರುವ ಪ್ರಜ್ಞೆಯನ್ನು ಎಚ್ಚರಗೊಳಿಸುತ್ತದೆ. ವೈಚಾರಿಕ ಚಿಂತನೆ ಹೆಚ್ಚುತ್ತದೆ ಎಂದು ಹೇಳಿದರು.

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಇತಿಹಾಸ/ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ ಅವರು ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳು ಕುರಿತು ಉಪನ್ಯಾಸ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ಅಂಬೇಡ್ಕರ್ ಓದು ಕುರಿತು ಇಲಾಖೆಯಿಂದ ಹಮ್ಮಿಕೊಂಡಿರುವ ವಿಶೇಷ ಉಪನ್ಯಾಸ ಮಾಲಿಕೆಯ ಮಹತ್ವ ಕುರಿತು ವಿವರಿಸಿದರು.

ಕಾಲೇಜಿನ ಅಧ್ಯಾಪಕರಾದ ಅಮಲ್, ಪ್ರವೀಣ ಎ.ಎಂ.ಪಿ., ಕೆ.ಎನ್. ಆದರ್ಶ, ಮಹ್ಮದ್ ಅಸ್ಲಾಂ, ಡಾ. ಮಂಜುನಾಥ್, ಡಾ. ಹರೀಶ್, ಶ್ರೀನಿವಾಸ್, ಜಗದೀಶ್, ನವೀನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಬಕಾಡೆ ಪಂಪಾಪತಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಅವರ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ಪುಸ್ತಕ ಬಹುಮಾನಗಳನ್ನು ವಿತರಿಸಿದರು.

Share this article