ಡಾ.ಅಂಬೇಡ್ಕರ್ ಮಹಾನ್ ಶಕ್ತಿ : ನಿರಂಜನ್ ಬಣ್ಣನೆ

KannadaprabhaNewsNetwork | Published : Jul 17, 2024 12:46 AM

ಸಾರಾಂಶ

ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಕೇವಲ ವ್ಯಕ್ತಿಯಲ್ಲ, ಅವರೊಬ್ಬ ಮಹಾನ್‌ ಶಕ್ತಿ ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ. ಎ. ನಿರಂಜನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಅವರೊಬ್ಬಮಹಾನ್ ಶಕ್ತಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನದ ಮೂಲಕ ಅವರು ನೀಡಿರುವ ಕೊಡುಗೆ ಮರೆಯುವಂತಿಲ್ಲ ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಬಣ್ಣಿಸಿದ್ದಾರೆ.

ಜಿಲ್ಲಾ ಬುದ್ಧ ಪ್ರತಿಷ್ಠಾಪನ ಶಾಖೆ ವತಿಯಿಂದ ಮಡಿಕೇರಿಯ ಶಕ್ತಿ ವೃದ್ಧಾಶ್ರಮದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರು ವಕೀಲ ವೃತ್ತಿಗೆ ಸೇರ್ಪಡೆಗೊಂಡ ದಿನದ ಅಂಗವಾಗಿ ಜಿಲ್ಲೆಯ ವಕೀಲರಿಗೆ ಗೌರವ ಸಮರ್ಪಣೆ ಹಾಗೂ ಬುದ್ಧ ಪೂರ್ಣಿಮೆ ಪ್ರಯುಕ್ತ ನಗರದ ಶಕ್ತಿ ಆಶ್ರಮದ ಹಿರಿಯ ನಾಗರಿಕರಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್ ಅವರು ವ್ಯಕ್ತಿಯಲ್ಲ, ದೊಡ್ಡ ಶಕ್ತಿ. ಅವರು ವಕೀಲರಾಗಿ ಮಾಡಿದ ಕೆಲಸ, ಪ್ರಜಾತಂತ್ರ ವ್ಯವಸ್ಥೆಗೆ ನೀಡಿದ ಸಂವಿಧಾನದ ಕೊಡುಗೆ ಯಾರೂ ಮರೆಯುವಂತಿಲ್ಲ. ಅಂಬೇಡ್ಕರ್ ಅವರ ಆಶಯ ಮತ್ತು ಚಿಂತನೆ ಇನ್ನೂ ಸಕಾರಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯರನ್ನು ಹಾಗೂ ಪೋಷಕರನ್ನು ಗೌರವಿಸುವ ಮತ್ತು ಪ್ರೀತಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಪೋಷಕರನ್ನು ಆಶ್ರಮದಲ್ಲಿರಿಸಿದರೆ ಮುಂದಿನ ದಿನಗಳಲ್ಲಿ ಆ ಪರಿಸ್ಥಿತಿ ನಮಗೂ ಬರಬಹುದು ಎಂಬ ಪರಿಜ್ಞಾನ ಇರಬೇಕು. ಆಧುನಿಕ ಜೀವನಕ್ಕೆ ಹೊಂದಿಕೊಳ್ಳುವ ವೇಗದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಅವಿಭಕ್ತ ಕುಟುಂಬ ವ್ಯವಸ್ಥೆ ಮರೆಯಾಗುತ್ತಿರುವುದು ವಿಷಾದನೀಯ ಎಂದು ನಿರಂಜನ್ ಹೇಳಿದರು.

ಕುಟುಂಬದಿಂದ ದೂರವಾದ ಹಿರಿಯರಿಗೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ನೆಮ್ಮದಿಯ ಬದುಕು ರೂಪಿಸಲು ಶಕ್ತಿ ಆಶ್ರಮ ನೀಡುತ್ತಿರುವ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಮಾತನಾಡಿ, ತಂದೆ-ತಾಯಿಯರನ್ನು ದೂರ ಇಡುವವರಿಗೆ ಕಾಲವೇ ಪಾಠ ಕಲಿಸಲಿದೆ. ಮುಂದೊಂದು ದಿನ ತಿರುಗುಬಾಣವಾಗಿ ಪರಿಣಮಿಸುವುದು ನಿಶ್ಚಿತ. ಎಲ್ಲರು ಇದ್ದು ಇಲ್ಲದಂತೆ ಇರುವುದು ಅತ್ಯಂತ ಬೇಸರ ತರುವ ವಿಚಾರ. ನೊಂದವರಿಗೆ ಗೆೆ ಆಶ್ರಮ ಆಸರೆಯಾಗಿರುವುದು ಅಷ್ಟೇ ನೆಮ್ಮದಿಯ ವಿಷಯ ಎಂದರು.

ಡಾ.ಅಂಬೇಡ್ಕರ್ ಅವರ ಜೀವನವೇ ಹೋರಾಟದಿಂದ ಕೂಡಿತ್ತು. ನೋವುಂಡು ಸಮಾಜಕ್ಕೆ ಒಳಿತು ಬಯಸಿದ ಆದರ್ಶ ವ್ಯಕ್ತಿ ಅವರು ಎಂದು ಬಣ್ಣಿಸಿದರು.

ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ವಕೀಲ ಕೆ.ಆರ್.ವಿದ್ಯಾಧರ್ ಗೌತಮ ಬುದ್ಧ ಎಲ್ಲವನ್ನೂ ಬಿಟ್ಟು ನೆಮ್ಮದಿಯ ಬದುಕು ಕಟ್ಟಿಕೊಂಡಿದಲ್ಲದೆ ಸಮಾಜದ ಹಿತ ಕಾಯುವ ನಿಟ್ಟಿನಲ್ಲಿ ಧರ್ಮ ಸ್ಥಾಪಿಸಿ ಸಾಂಘಿಕ ಬದುಕು ರೂಪಿಸುವ ಮಹತ್ತರ ಹೆಜ್ಜೆ ಇಟ್ಟರು. ಯುದ್ಧದಿಂದ ಶಾಂತಿ ಸಾಧ್ಯವಿಲ್ಲ ಎಂಬ ಪ್ರತಿಪಾದನೆಯೊಂದಿಗೆ ಸಮಾಜಕ್ಕೆ ದಾರಿದೀಪವಾಗಿದ್ದ ಅವರ ಆದರ್ಶ ಇಂದಿಗೂ ಜೀವಂತ ಎಂದು ಅಭಿಪ್ರಾಯಪಟ್ಟರು.

ಡಾ.ಅಂಬೇಡ್ಕರ್ ಅವರು ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂವಿಧಾನವೇ ನಮ್ಮೆಗೆಲ್ಲರಿಗೂ ಶ್ರೇಷ್ಠ ಗ್ರಂಥ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬುದ್ಧ ಪ್ರತಿಷ್ಠಾನದ ಜಿಲ್ಲಾ ಧಮ್ಮಾಚಾರಿ ಹೆಚ್. ಪಿ. ಶಿವಕುಮಾರ್, ಸಮಾಜದ ಪರಿವರ್ತನೆಯಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ. ಸಾಮಾಜಿಕ ಚಿಂತನೆಗಳಡಿ ಪ್ರತಿಷ್ಠಾನ ಕಾರ್ಯೋನ್ಮುಖಗೊಂಡಿದ್ದು, ಕಳೆದ 27 ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ವಕೀಲರಾದ ಕೆ.ಆರ್.ವಿದ್ಯಾಧರ್, ನಾಗೇಶ್ ಕುಮಾರ್, ಬಿ.ಇ.ಜಯೇಂದ್ರ, ಎಚ್.ಎನ್.ಜಾನಕಿ, ದಿವ್ಯ ನಂಜಪ್ಪ ಹಾಗೂ ತುಳಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಶ್ರಮದಲ್ಲಿ ನೆಲೆಸಿರುವ 29 ವಯೋವೃದ್ಧರಿಗೆ ಬಟ್ಟೆಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಮುಖ ಪಳನಿ ಪ್ರಕಾಶ್, ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್, ಬುದ್ಧ ಪ್ರತಿಷ್ಠಾನದ ರವಿ, ರವೀಂದ್ರ, ನಾಗಪ್ಪ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Share this article