ಡಾ. ಅಂಬೇಡ್ಕರ್‌ ಜಯಂತಿ: ಭೀಮ ಚಿಂತನ ಕಾರ್ಯಕ್ರಮ

KannadaprabhaNewsNetwork | Published : Apr 15, 2024 1:24 AM

ಸಾರಾಂಶ

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಭೀಮ ಚಿಂತನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜಾತಿಗಳು ಆಡಳಿತ ವ್ಯವಸ್ಥೆಗೆ ತಕ್ಕಂತೆ ನಿರ್ಣಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೊಡಗು ಜಿಲ್ಲಾ ಅಖಿಲ ಭಾರತೀಯ ಸಂತ ಸಮಿತಿ ಅಧ್ಯಕ್ಷ ಶ್ರೀ ರಾಜೇಶ್ ನಾಥ್ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ಭೀಮ ಚಿಂತನ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಒಗ್ಗಟ್ಟಿನ ಕೊರತೆ ಕಂಡು ಬಂದ ಸಂದರ್ಭ ಸಮಸ್ಯೆಗಳು ಹೆಚ್ಚಳವಾಗುತ್ತದೆ. ಪ್ರತಿಯೊಬ್ಬರನ್ನೂ ಸಮಾನತೆಯಿಂದ ಕಾಣುವ ವ್ಯವಸ್ಥೆ ಆಗಬೇಕು ಪ್ರತಿಯೊಬ್ಬರೂ ವಿಶಾಲ ಹೃದಯವಂತರಾಗಬೇಕು ಎಂದು ಅವರು ಹೇಳಿದರು.

ಪರಮಾತ್ಮ ಸ್ವರೂಪ ಡಾ ಬಿ.ಆರ್ ಅಂಬೇಡ್ಕರ್ ಅವರ ಅಂದಿನ ಚಿಂತನೆಗಳ ಮೂಲಕ ನಿರ್ಮಾಣಗೊಂಡ ಸಂವಿಧಾನ ದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಯ ಅಗತ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಂವಿಧಾನ ತಜ್ಞರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿಲಯದ ಪ್ರಾದೇಶಿಕ ನಿರ್ದೇಶಕರಾದ ಡಾ.ಸುಧಾಕರ್ ಹೊಸಹಳ್ಳಿ ಅವರು ಅಂಬೇಡ್ಕರ್ ಅವರ ಅಂತರಂಗದ ಅಭಿಲಾಷೆಯ ವಿಷಯದ ಬಗ್ಗೆ ಮಾತನಾಡಿ, ವಿಶ್ವದಲ್ಲಿ ಯಾವುದೇ ನೂತನ ರಾಷ್ಟ್ರ ನಿರ್ಮಾಣಗೊಂಡ ಸಂದರ್ಭ ಭಾರತದ ಸಂವಿಧಾನವನ್ನು ಮಾದರಿ ಸಂವಿಧಾನವಾಗಿ ಪರಿಗಣನೆ ಮಾಡುತ್ತಿದೆ. ನಮ್ಮ ದೇಶದಲ್ಲಿ ಸಂವಿಧಾನದ ಬಳಕೆ ಮಾಡುವ ಸಂದರ್ಭ ರಾಜಕೀಯ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳು ಕಂಡುಬರುತ್ತಿರುವುದು ವಿಷಾದನೀಯ ಎಂದರು. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಸ್ಥರಾದ ಹೆಚ್ ಬಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಮರಸ್ಯ ವೇದಿಕೆಯ ಜಿಲ್ಲಾ ಸಂಯೋಜಕರಾದ ಹರೀಶ್ ತಮ್ಮಯ್ಯ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ನಡೆಯಿತು. ಜಿಲ್ಲಾ ಸಂಸ್ಕೃತ ಭಾರತಿ ಸಂಯೋಜಕರಾದ ಮಧುಸೂದನ್ ಪರ್ಯಾವರಣ ವಿಭಾಗದ ಜಿಲ್ಲಾ ಸಂಯೋಜಕ ಜನಾರ್ಧನ್ ಮತ್ತೆ ಇತರರು ಇದ್ದರು. ಕಾರ್ಯಕ್ರಮದ ನಂತರ ಪ್ರಮುಖರು ಮತ್ತು ಸಭಿಕರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.ರಾಷ್ಟ್ರೀಯ ಸ್ವಯಂಸೇವಕ ತಾಲೂಕು ಪ್ರಮುಖರಾದ ಮಹೇಂದ್ರ ಅವರು ಸ್ವಾಗತಿಸಿದರು. ಹರೀಶ್ ತಮ್ಮಯ್ಯ ಅವರು ಪ್ರಸ್ತಾವನೆ ಮಾತುಗಳಾಡಿದರು. ಶಿಕ್ಷಕಿ ಕೃತಿಕಾ ಅವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೋಭಾಭಟ್ ಸಾಮರಸ್ಯ ಗೀತೆ ಹಾಡಿದರು. ಮಹೇಶ್ ಅಮೀನ್ ವಂದಿಸಿದರು.

Share this article