ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಟರು ಡಾ. ಅಂಬೇಡ್ಕರ್: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

KannadaprabhaNewsNetwork | Published : Apr 15, 2024 1:21 AM

ಸಾರಾಂಶ

ಡಾ. ಅಂಬೇಡ್ಕರ್ ಬಡವರ ಬೆಳಕು, ಶೋಷಿತರ ಸಂತ, ಧಮನಿತರ ಧ್ವನಿ, ನೊಂದವರಿಗೆ ಅಸರೆ, ಅಕ್ಷರ ನೀಡಿದ ಕರುಣಾಕರ. ಇಷ್ಟೆಲ್ಲ ನೀಡಿದ ಮಹಾತ್ಮನನ್ನು ದಲಿತ ಎಂಬ ಕಾರಣಕ್ಕೆ ಉದಾಸಿನ ಭಾವ ತೋರುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಟರು ಡಾ.ಬಿ.ಆರ್. ಅಂಬೇಡ್ಕರ್ ಎಂದು ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬಣ್ಣಿಸಿದರು.

ಶ್ರಿ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿಯು ಭಾನುವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಭಾರತ ಸ್ವತಂತ್ರವಾದರಷ್ಟೇ ಸಾಲದು, ಧಾರ್ಮಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಭರತಖಂಡದಲ್ಲಿ ಜನಿಸಿದವರೆಲ್ಲ ಸಮಾನ ಹಕ್ಕುಳ್ಳವರಾಗಬೇಕು ಎಂಬ ದೃಢಸಂಕಲ್ಪದಿಂದ ಕುರುಡನಿಗೆ ಕಣ್ಣಿನಂತೆ ಮೂಕನಿಗೆ ದನಿಯಂತೆ ಅಬಲರಿಗೆ ಪ್ರಬಲ ಅಸ್ತ್ರದಂತೆ ಶಕ್ತಿಯಾದವರು ಅಂಬೇಡ್ಕರ್ ಅವರು ಎಂದು ತಿಳಿಸಿದರು.

ಡಾ. ಅಂಬೇಡ್ಕರ್ ಬಡವರ ಬೆಳಕು, ಶೋಷಿತರ ಸಂತ, ಧಮನಿತರ ಧ್ವನಿ, ನೊಂದವರಿಗೆ ಅಸರೆ, ಅಕ್ಷರ ನೀಡಿದ ಕರುಣಾಕರ. ಇಷ್ಟೆಲ್ಲ ನೀಡಿದ ಮಹಾತ್ಮನನ್ನು ದಲಿತ ಎಂಬ ಕಾರಣಕ್ಕೆ ಉದಾಸಿನ ಭಾವ ತೋರುವುದು ಸರಿಯಲ್ಲ. ಕಲಿಯುಗದಲ್ಲಿ ಎಲ್ಲಾ ಭಾರತೀಯರ ಧರ್ಮಗ್ರಂಥ ಸಂವಿಧಾನ. ತನ್ನ ಪರಿಶ್ರಮದಿಂದ ಅವಮಾನ, ಅನುಮಾನ ಮೆಟ್ಟಿ ನಿಂತ ಧೀರ, ಶಿಕ್ಷಣವೇ ದೊಡ್ಡ ಅಸ್ತ್ರ ಎಂಬುದನ್ನು ಸಾಧಿಸಿ ತೋರಿದ ಮಾರ್ಗದರ್ಶಕ ಅಂಬೇಡ್ಕರ್ ಎಂದು ಅವರು ಹೇಳಿದರು.

ಅವಮಾನಗಳ ಪಂಕದಿಂದ ಎದ್ದು, ಜಗತ್ತಿನಾದ್ಯಂತ ಸಮ್ಮಾನದ ಗೌರವ ಪಡೆದ ಸರ್ವೋತ್ಕೃಷ್ಠ ಸರ್ವಜ್ಞ. ಸಮಷ್ಠಿ ಭಾರತೀಯರ ಸಮೃದ್ಧ ಭಾರತ ನಿರ್ಮಾಣದ ದಿಕ್ಸೂಚಕ. ನೊಂದವರ ಬಂಧು, ಸರ್ವರಿಗೂ ಸಮಬಾಳು ಸಮಪಾಲು ಧ್ಯೇಯದೊಂದಿಗೆ ಭಾರತೀಯರ ಹಣೆಬರಹ ಬರೆದ ಸಂವಿಧಾನ ಭಾಷ್ಯಕಾರ ಡಾ. ಅಂಬೇಡ್ಕರ್ ಅವರನ್ನು ಕೇವಲ ಓರ್ವ ಸಂವಿಧಾನ ತಜ್ಞ, ಕಾನೂನು ತಜ್ಞ ಅಂತ ಬಿಂಬಿಸುತ್ತಿರುವುದು ವಿಷಾದನೀಯ. ಅವರ ಬಹುಮುಖೀ ಪ್ರತಿಭೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕು ಎಂದರು.

ಅಂಬೇಡ್ಕರ್ ಸಮ ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ. ಅವರ ಆರಾಧನೆ ಮಾಡಿದರೆ ಸಾಲದು, ಅವರ ವಿಚಾರಗಳನ್ನು ಮತ್ತು ಪ್ರಸ್ತುತತೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ನಮಗೆ ಅಗತ್ಯವಾಗಿರುವ ಜಾತ್ಯಾತೀತ ಮೌಲ್ಯಗಳುಳ್ಳ ಜೀವಂತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬೇಕಾದ ಚಳವಳಿಯ ವಿಸ್ತಾರವನ್ನು ಪಡೆಯಲು ಅವರ ಸಮಗ್ರ ಚಿಂತನೆಯ ಮರುಮಂಥನ ನಡೆಯಬೇಕಿದೆ ಎಂದು ಅವರು ತಿಳಿಸಿದರು.

ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮ್, ಉದ್ಯಮಿ ದಾಸಣ್ಣ, ಸಮಿತಿಯ ಕಾರ್ಯದರ್ಶಿ ಮಲ್ಲಣ್ಣ, ಸಂಘಟನಾ ಕಾರ್ಯದರ್ಶಿ ಬಿ. ಮಾದಪ್ಪ, ಎಂ. ಸ್ವಾಮಿ, ರಾಮಸ್ವಾಮಿ, ರಾಮಲಿಂಗ, ಸೋಮಣ್ಣ, ವೆಂಕಟೇಶ್, ಕಂದಸ್ವಾಮಿ, ನಾಗರಾಜು, ಬಸಪ್ಪ, ವಿಜಯ್ ಕುಮಾರ್ ಮೊದಲಾದವರು ಇದ್ದರು.

Share this article