ಕನ್ನಡಪ್ರಭ ವಾರ್ತೆ, ತುಮಕೂರು ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಸಾಹಿತ್ಯ ಕೃತಿಗಳು ಹೆಚ್ಚು ಹೊರಬರಬೇಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಸಲಹೆ ನೀಡಿದರು.ತುಮಕೂರಿನ ಕನ್ನಡ ಭವನದಲ್ಲಿ ಬಹುಮುಖಿ ಗೆಳೆಯರ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಡಾ.ಅಮ್ಮಸಂದ್ರ ಸುರೇಶ್ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಸಮುದಾಯದ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಲೇಖಕರು ಚಿಂತಿಸಬೇಕಿದೆ ಎಂದರು. ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಕೊಡುಗೆಗೆ ಹಳ್ಳಿಗಳು ಮಹತ್ತರ ಪಾತ್ರ ನೀಡಿವೆ. ಆದರೆ ಹಳ್ಳಿಗಳಲ್ಲಿ ಈಗ ಸಂಸ್ಕೃತಿ ಮರೆಯಾಗುತ್ತಿದೆ. ಇಡೀ ಸಮಾಜ ಮತ್ತು ರಾಜಕಾರಣ ವ್ಯವಸ್ಥೆ ಅತ್ಯಂತ ಸಂಕುಚಿತ ಮತ್ತು ಸಂಕೀರ್ಣವಾಗುತ್ತಿದೆ.ಜನಸಾಮಾನ್ಯರ ಸ್ಥಿತಿಗತಿಗಳ ಬಗ್ಗೆ ಚಿಂತಿಸುವವರು ಕಡಿಮೆಯಾಗುತ್ತಿದ್ದಾರೆ. ಗ್ರಾಮೀಣ ಸಮುದಾಯದ ಕಲೆಗಳು ಮೂಲೆಗುಂಪಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಗಳ ಜ್ಞಾನವನ್ನು ಪುನರ್ ಸ್ಥಾಪಿಸುವ ಮಹತ್ವದ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.
ಹಿರಿಯ ಲೇಖಕಿ ಬಾ.ಹ.ರಮಾಕುಮಾರಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಬರಹಗಾರರಿಗೆ ತಮ್ಮ ಸುತ್ತಲಿನ ಸಂದರ್ಭಗಳು ಪ್ರೇರಣೆಯಾಗಬೇಕು. ಆಗ ನಿಜವಾದ ಸಾಹಿತ್ಯ ಹೊರಬರಲು ಸಾಧ್ಯವಾಗುತ್ತದೆ ಸಮಾಜವನ್ನು ತಿದ್ದುವ ಕೆಲಸ ಸಾಹಿತಿಗಳಿಂದ, ಲೇಖಕರಿಂದ ಆಗಬೇಕಿದೆ ಎಂದರು. ಕಸಾಪ ಅಧ್ಯಕ್ಷ ಕೆ,ಎಸ್. ಸಿದ್ದಲಿಂಗಪ್ಪ ಮಾತನಾಡಿ ಜೀವಂತ ಉದಾಹರಣೆಗಳನ್ನಿಟ್ಟುಕೊಂಡು ಬರವಣಿಗೆ ಮಾಡಿದರೆ ಆ ಕೃತಿಗೆ ವಿಶೇಷ ಮಹತ್ವ ಇರುತ್ತದೆ. ಬಹುಮುಖಿ ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ರೈತರು, ಕಾರ್ಮಿಕರ ಕುರಿತು ಹೊರಬಂದಿರುವ ಲೇಖನಗಳು, ಕೃತಿಗಳು ಕಡಿಮೆಯೇ. ಲೇಖಕರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.ಡಾ.ಅಮ್ಮಸಂದ್ರ ಸುರೇಶ್ ಅವರ ನಾಲ್ಕು ಕೃತಿಗಳನ್ನು ಪರಿಚಯಿಸಿ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಬಿ.ಟಿ.ಮುದ್ದೇಶ್ ಅವರು ಸುರೇಶ್ ಮಾತನಾಡಿದರು. ಸಾಮಾಜಿಕ ಹೋರಾಟಗಾರ ಸಾ.ಚಿ.ರಾಜಕುಮಾರ ಮಾತನಾಡಿ ಮಾನವ ಹಕ್ಕುಗಳ ಪರ ಹೋರಾಡುವ ಶಕ್ತಿಗಳು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಪರ ಧ್ವನಿ ಎತ್ತುವ ಬರಹಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಹೊರಬರಬೇಕು. ದೇವಸ್ಥಾನ ನಿರ್ಮಾಣಕ್ಕೆ ಲಕ್ಷ ಲಕ್ಷ ಹಣ ಕೊಡುವ ಜನ ಗ್ರಾಮಗಳ ಅಭಿವೃದ್ಧಿಯ ಕಡೆಗೆ ಚಿಂತಿಸುವುದಿಲ್ಲ. ನಶಿಸುತ್ತಿರುವ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನೂ ಮಾಡುತ್ತಿಲ್ಲ. ಈಗ ಈ ಎಲ್ಲ ಕ್ಷೇತ್ರ ಮೂಲೆಗುಂಪಾಗುತ್ತಿದ್ದು ಕಲೆ ಮತ್ತು ಕಲಾವಿದರುಗಳಿಗೆ ಸರ್ಕಾರಗಳು ನಿರ್ಲಕ್ಷ್ಯ ಮಾಡದೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ನಮ್ಮ ಗ್ರಾಮೀಣ ಸಂಸ್ಕೃತಿ, ಬದುಕು ಮತ್ತು ಬರಹ ಉಳಿಯಲು ಸಾಧ್ಯವಾಗುತ್ತದೆ ಎಂದರು.ಬಹುಮುಖಿ ಗೆಳೆಯರ ಬಳಗದ ಸಂಚಾಲಕರು ಹಾಗೂ ಲೇಖಕರಾದ ಹಡವನಹಳ್ಳಿ ವೀರಣ್ಣಗೌಡ ಮಾತನಾಡಿ, ಸಮಾಜವಿಂದು ಜಾತಿ ಧರ್ಮಗಳ ಹೆಸರಿನಲ್ಲಿ ವಿಘಟನೆಯಾಗುತ್ತಿವೆ. ಎಲ್ಲೋ ನಡೆಯುವ ಘಟನೆಗಳಿಗೆ ಇಲ್ಲಿ ಪ್ರತಿಭಟನೆಗಳಾಗುತ್ತವೆ. ಇಂತಹ ಪ್ರತಿಭಟನೆಗಳು ನಮ್ಮೊಳಗಿನ ಶಾಂತಿಯನ್ನು ಕದಡುತ್ತಿವೆ. ನಾವುಗಳು ಜಾತಿ, ಧರ್ಮ ಮೀರಿದ ಮಾನವೀಯ ಶಾಂತಿಯ ಕಡೆಗೆ ಗಮನ ಹರಿಸಬೇಕಿದೆ. ಅಂತಹ ವಾತಾವರಣ ಸೃಷ್ಟಿಯಾಗಬೇಕಿದೆ ಎಂದರು. ಸಾಮಾಜಿಕ ಹೋರಾಟಗಾರ್ತಿ ಜಯಲಕ್ಷ್ಮಮ್ಮ ಮಾತನಾಡಿದರು. ಮೈಸೂರಿನ ಡಾ.ಪ್ರಸನ್ನ, ಬಹುಮುಖಿ ಗೆಳೆಯರ ಬಳಗದ ದಂಡಿನಶಿವರ ಮಂಜುನಾಥ್ ಮಾತನಾಡಿದರು. ಎಂ.ವೈ.ಗಂಗಣ್ಣ ಸಂಗಡಿಗರು ಪ್ರಾರ್ಥಿಸಿದರು. ವಸಂತಕುಮಾರ್ ಹೆಚ್.ಎಂ. ಸ್ವಾಗತಿಸಿ, ಜಯಣ್ಣ ವಂದಿಸಿದರು. ವಿವೇಕ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.