ಭಾಷೆ ಬಳಸುವುದು ಮುಖ್ಯವೇ ಹೊರತು ಅದರ ಶುದ್ಧ, ಅಶುದ್ಧತೆಯಲ್ಲ

KannadaprabhaNewsNetwork | Published : Jul 20, 2024 12:56 AM

ಸಾರಾಂಶ

ಭಾಷೆ ಎಂಬುದು ಬದುಕು, ಅನುಭವದ ಸಾರ, ವಿವೇಕದ ಮೊತ್ತ, ಒಟ್ಟಾರೆ ಹೇಳುವುದಾದರೆ ಜನಜೀವನದ ಸಾರಾಂಶ.

ಕನ್ನಡಪ್ರಭ ವಾರ್ತೆ ಮೈಸೂರು

ಭಾಷೆಯನ್ನು ಬಳಸುವುದು ಮುಖ್ಯವೇ ಹೊರತು ಅದರ ಶುದ್ಧ, ಅಶುದ್ಧತೆಯಲ್ಲ. ಶ್ರೇಷ್ಠತೆ ಎನ್ನುವುದೇ ಭಾಷೆಯನ್ನು ಕುಗ್ಗಿಸುವಿಕೆಯ ಮೂಲವಾಗಿದೆ. ಉಪಕರಣಗಳನ್ನು ಉಪಯೋಗಿಸುವ ಮಾದರಿಯಲ್ಲಿ ಭಾಷೆಯನ್ನು ಬಳಸಬೇಕೇ ಹೊರತು ಶ್ರೇಷ್ಠ ಮಾದರಿಯಾಗಿ ಬಳಸಬಾರದು ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆಯು ಶುಕ್ರವಾರ ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಕನ್ನಡ ರಾಷ್ಟ್ರೀಯತೆ: ಇಂದಿನ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಭಾಷೆ ಎಂಬುದು ಬದುಕು, ಅನುಭವದ ಸಾರ, ವಿವೇಕದ ಮೊತ್ತ, ಒಟ್ಟಾರೆ ಹೇಳುವುದಾದರೆ ಜನಜೀವನದ ಸಾರಾಂಶ. ಭಾಷೆಯನ್ನು ಬಳಸುವಾಗ ನಮ್ಮಲ್ಲಿ ಕೀಳಿರಿಮೆ ಭಾವನೆ ಬರಬಾರದು. ಭಾಷೆ ಮನುಷ್ಯನಿಗೆ ವ್ಯವಹಾರಿಕವಾಗಿ ಅನಿವಾರ್ಯ, ಅಗತ್ಯ. ಅಂದರೆ ಶ್ರೇಷ್ಠತೆ ಮತ್ತು ಘನತೆ ಎಂಬುದಲ್ಲ ನಮ್ಮ ನಮ್ಮ ಅನುಕೂಲ, ಅಂತಸ್ತಿಗಾಗಿ ಭಾಷೆಯಲ್ಲಿ ಪೈಪೋಟಿಯೊಂದಿಗೆ ಕೀಳಿರಿಮೆಯಿಂದ ಭಾವಿಸುವುದು ಎಂದಿಗೂ ಸಲ್ಲದು. ಭಾಷೆ ಎಂಬುದನ್ನು ಬಳಸಿದಾಗ ಸಾಂಸ್ಕೃತಿಕ ವಿಶ್ವಾಸ ಹೆಚ್ಚುವುದರ ಜೊತೆಗೆ ಅದರ ಮಹತ್ವ ಹೆಚ್ಚುತ್ತದೆ ಹಾಗೂ ಪೂರ್ವ ಪರಂಪರೆ ತಿಳಿಯುತ್ತದೆ ಎಂದು ಅವರು ಹೇಳಿದರು.

ಕರ್ನಾಟಕದ ಪರಿಕಲ್ಪನೆಯೂ ಜನರಲ್ಲಿ ಮೂಡಿಬಂದ ಭಾವನೆ ಎಂಬುದನ್ನು ನಾವು ಮರೆಯುವಂತಿಲ್ಲ. ಭಾಷೆಯಲ್ಲಿ ಸಹಜತೆ ಇದೆ, ಉತ್ಪಾದನಾಂಶವಿದೆ, ಸಹಜವಾದ ವ್ಯವಹಾರಿಕ ಸಂಬಂಧದಿಂದ ಕನ್ನಡ ಭಾಷೆ ಎಲ್ಲರಿಗೂ ಹೃದಯದ ಭಾಷೆಯಾಗಿ ಮೂಡಿ ಬಂದಿದೆ. ಅಖಿಲ ಭಾರತದ ನಾಯಕರು ಮೊದಲು ಆಯಾಯ ಪ್ರದೇಶದ ಪ್ರಾದೇಶಿಕ ಭಾಷೆಯ ನೆಲ, ಜಲ, ಸಂಸ್ಕೃತಿಯಿಂದ ಅರಿತು ಬಂದವರೇ ಆಗಿರುತ್ತಾರೆ ಹೊರತು ದಿಢೀರ್ ನಾಯಕರಾಗಲು ಎಂದಿಗೂ ಸಾಧ್ಯವಾಗಲಿಲ್ಲ ಎಂದರು.

ಭಾಷೆಯನ್ನು ಸಮುದಾಯದ ಜೊತೆ ವ್ಯವಹರಿಸುವುದು ಮುಖ್ಯ, ಒತ್ತಡದಿಂದಲ್ಲ, ಶುದ್ಧವಾದ ಭಾಷೆಯನ್ನು ಬಿಟ್ಟು ಕೊಡಬೇಕು ಎನ್ನುವುದೇ ಸಾಂಸ್ಕೃತಿಕ ದಾಸ್ಯದ ಒಂದು ರೂಪ. ಕನ್ನಡದ ಶಾಲೆಗಳನ್ನು ಬೇಡ ಎನ್ನುವುದೇ ಅಂತಿಮ ಶರಣಾಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ. ಮರಿಸ್ವಾಮಿ ಮಾತನಾಡಿ, ಫಲಿತಾಂಶಕ್ಕೆ ಪೂರಕವಾಗಿ ಇಂತಹ ಪುನಶ್ಚೇತನ ಕಾರ್ಯಾಗಾರ ಅಗತ್ಯತೆ ಇದೆ. ಇದರ ಅನುಕೂಲವನ್ನು ಎಲ್ಲಾ ಉಪನ್ಯಾಸಕರು ಭಾಗವಹಿಸಿ ವಿಚಾರಗಳನ್ನು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಿ, ಫಲಿತಾಂಶವನ್ನು ಉತ್ತಮ ಪಡಿಸಬೇಕು ಎಂದು ತಿಳಿಸಿದರು.

ಕವಿ ಸಂತೋಷ್‌ ಚೊಕ್ಕಾಡಿ, ಮಹಾಜನ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ಮುರಳಿಧರ್, ಮಹಾಜನ ಪಿಯು ಕಾಲೇಜಿನ ಪ್ರಾಂಶುಪಾಲ ವಿಷಕಂಠಮೂರ್ತಿ, ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಎಂ. ಮಹೇಶ್, ಪ್ರಧಾನ ಕಾರ್ಯದರ್ಶಿ ಪಿ. ಕೆಂಪಯ್ಯ, ಖಜಾಂಚಿ ಡಾ. ಉಮೇಶ್ ಬೇವಿನಹಳ್ಳಿ, ಡಾ. ಚಿಕ್ಕಮಾದು, ಪ್ರಾಂಶುಪಾಲರಾದ ಪುಟ್ಟಗೌರಮ್ಮ, ಎನ್.ಜಿ. ರಮೇಶ್, ಇಂದ್ರ ಇದ್ದರು. ಪರಮೇಶ್‌ ತಂಡದವರು ಪ್ರಾರ್ಥಿಸಿದರು. ಸುಧಾಕರ್ ಸ್ವಾಗತಿಸಿದರು. ಎಚ್.ಟಿ. ಹರೀಶ್ ವಂದಿಸಿದರು.

----

ಕೋಟ್...

ಪ್ರತಿ ಭಾಷೆಯಲ್ಲೂ 60 ಕಿ.ಮೀ ಅಂತರದಲ್ಲಿ ಭಾಷಾ ಬಳಕೆಯಲ್ಲಿ ಮತ್ತು ಉಚ್ಛಾರಣೆಯಲ್ಲಿ ವ್ಯತ್ಯಾಸ ಕಾಣುತ್ತೆವೆಯೇ ಹೊರತು ಅರ್ಥ ವ್ಯತ್ಯಾಸದಿಂದಲ್ಲ. ಭಾಷೆ ನಿಂತ ನೀರಾಗದೆ ಹರಿಯುವ ನದಿಯಂತೆ ಸದಾ ಕಾಲ ಬಳಸಿದಾಗ ಜೀವಂತವಾಗಿ ಉಳಿಯುತ್ತದೆ. ಇಂದಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.

- ಡಾ. ಬಂಜಗೆರೆ ಜಯಪ್ರಕಾಶ್, ಸಾಹಿತಿ

Share this article