ಆರೋಗ್ಯ ಕೇಂದ್ರಕ್ಕೆ ನ್ಯಾ.ಚಂದ್ರಶೇಖರ ದಿಡ್ಡಿ ಭೇಟಿ, ಪರಿಶೀಲನೆ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಕಲಾದಗಿ ಆರೋಗ್ಯ ಕೇಂದ್ರ ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಸದ್ದು ಮಾಡಿದ ಸುದ್ದಿಯನ್ನು ಕನ್ನಡಪ್ರಭ ಪತ್ರಿಕೆಯಲ್ಲಿ ಡಿ.18ರಂದು ಪ್ರಕಟಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕಲಾದಗಿ

ಇಲ್ಲಿನ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಗಲಕೋಟೆ ನ್ಯಾಯಾಧೀಶರಾದ ಚಂದ್ರಶೇಖರ ದಿಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ.ಡಿ.ಎನ್ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.

ಕಲಾದಗಿ ಆರೋಗ್ಯ ಕೇಂದ್ರ ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಸದ್ದು ಮಾಡಿದ ಸುದ್ದಿಯನ್ನು ಕನ್ನಡಪ್ರಭ ಪತ್ರಿಕೆಯಲ್ಲಿ ಡಿ.18ರಂದು ಪ್ರಕಟಿಸಲಾಗಿತ್ತು. ವರದಿ ಪರಿಣಾಮ ಬುಧವಾರ ಬೆಳಗ್ಗೆ ಆರೋಗ್ಯ ಕೇಂದ್ರಕ್ಕೆ ಅವರು ಭೇಟಿ ನೀಡಿ, ಅಲ್ಪ ಮಳೆಯಾದರೆ ಸೋರುವ ಮೇಲ್ಛಾವಣಿ, ಒಳ ರೋಗಿಗಳ ಕೊಠಡಿ ವೀಕ್ಷಿಸಿದರು. ಸದ್ಯ ಮೇಲ್ಛಾವಣಿ ನಿರ್ಮಾಣ ಕಾರ್ಯ ಮಾಡುತ್ತಿರುವುದನ್ನು ಗಮನಿಸಿ ಕಿಟಕಿಗಳನ್ನು ಬಂದ್ ಮಾಡಿ ಧೂಳು ಬರದಂತೆ ಮುನ್ನಚ್ಚರಿಕೆ ವಹಿಸಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿ ಎಂದರು.ಆವರಣ ವೀಕ್ಷಣೆ:

ಆಸ್ಪತ್ರೆ ಹಿಂಬದಿ ಮುಳ್ಳು ಕಂಟಿಗಳಿಂದ ಆವರಿಸಿದ, ಕಸ ಕಡ್ಡಿ ಮಧ್ಯ ಬಾಟಲಿ ಪ್ಲಾಸ್ಟಿಕ್ ಹಾಳಿಗಳಿಂದ ಅಸ್ವಚ್ಛತೆಯಿಂದ ಕೂಡಿದ ಆವರಣ ಸ್ವಚ್ಛತೆಯಿಂದ ಇಟ್ಟುಕೊಳ್ಳಲು ತಿಳಿಸಿದರು. ಕಲಾದಗಿ ಪಂಚಾಯಿತಿ ಪಿಡಿಒರನ್ನು ಸ್ಥಳಕ್ಕೆ ಕರೆಯಿಸಿ ಪಂಚಾಯಿತಿಯಿಂದ ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ ಮಾಡಿ ಕೊಡಲು ಸೂಚನೆ ನೀಡಿದರು.ಮನೆಯಂತೆ ಭಾವಿಸಿ:

ಸದ್ಯ ಒಳರೋಗಿಗಳ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ನಮ್ಮ ಮನೆಯ ಮೇಲ್ಚಾವಣಿ ನಿರ್ಮಾಣ ಕಾರ್ಯದಂತೆ ಭಾವಿಸಿ ಕಾಮಗಾರಿ ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಮನೆಯ ರೀತಿ ಭಾವಿಸಿಸಬೇಕು. ನಮ್ಮ ಸೇವಾ ಅವಧಿ ಮುಗಿದ ಮೇಲೆ ನಾವೆಲ್ಲರೂ ಹೋಗುತ್ತೇವೆ. ಆದರೆ ನಾವುಗಳು ಮಾಡಿಸಿದ ಕಾಮಗಾರಿ ಸದಾ ಕಾಲ ಉಳಿಯುತ್ತವೆ ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ಕಾಂಕ್ರಿಟ್‌ ಹಾಕುವ ವೇಳೆ ವಾಟರ್ ಪ್ರೂಫ್‌ ಕೆಮಿಕಲ್ ಒಂದು ಲೀಟರ್ ಹೆಚ್ಚಿಗೆ ಬಳಸಿ ಹಾಕಿ ಕಾಂಕ್ರಿಟ್ ಗಟ್ಟಿಯಾಗಿ ಹೆಚ್ಚು ಬಾಳಿಕೆ ಬರುತ್ತದೆ ಎಂದು ಗುತ್ತಿಗೆದಾರ ಪಾಠ ಮಾಡಿದಂತೆ ತಿಳಿಸಿ ಹೇಳಿದ್ದು ಎಲ್ಲರ ಗಮನ ಸೆಳೆಯಿತು.ವರದಿ ನೀಡಲು ಸೂಚನೆ:

ಈ ಹಿಂದೆ ₹20 ಲಕ್ಷ ಮೊತ್ತದದಲ್ಲಿ ಕೈಗೊಂಡ ದುರಸ್ತಿ ಕಾಮಗಾರಿ ವರದಿ ಹಾಗೂ ಸದ್ಯ ಆರೋಗ್ಯ ಕೇಂದ್ರ ಒಳರೋಗಿಗಳ ಕೊಠಡಿ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ವರದಿ ನೀಡಲು ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ.ಡಿ.ಎನ್ ಅವರಿಗೆ ದಿಡ್ಡಿ ಸೂಚಿಸಿದರು.

Share this article