ಯಲ್ಲಾಪುರ: ಪಟ್ಟಣದ ಮಿನಿ ವಿಧಾನಸೌಧದ ಎದುರಿಗೆ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿ ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ತಹಸೀಲ್ದಾರ್ ಎಂ. ಗುರುರಾಜ ಅವರಿಗೆ ಮನವಿ ಸಲ್ಲಿಸಿದರು.
ಬೇರೆ ತಾಲೂಕು, ಜಿಲ್ಲೆಗಳಲ್ಲಿ ಅಂಬೇಡ್ಕರ್ ಮೂರ್ತಿಗಳಿದ್ದರೂ ನಮ್ಮ ತಾಲೂಕಿನಲ್ಲೆಲ್ಲಿಯೂ ಅಂಬೇಡ್ಕರ್ ಮೂರ್ತಿ ಇರದ ಕಾರಣ ತಾಲೂಕಿನ ಮಿನಿ ವಿಧಾನಸೌಧದೆದುರಿಗೆ ಅಂಬೇಡ್ಕರ್ ೧೧ ಅಡಿ ಎತ್ತರದ ಕಂಚಿನ ಮೂರ್ತಿ ನಿರ್ಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.ಸಮಿತಿಯ ಪರವಾಗಿ ಪ್ರಾಸ್ತಾವಿಕ ಮಾತನಾಡಿದ ಸಮಿತಿ ಸಂಚಾಲಕ ಕೇಬಲ್ ನಾಗೇಶ, ಅಂಬೇಡ್ಕರ್ ಅವರು, ದೇಶದ ಪ್ರತಿ ಮನೆಯ ದೇವರು. ಅವರು ನೀಡಿದ ಸಂವಿಧಾನ ಕೇವಲ ಒಂದು ವರ್ಗ, ಜಾತಿ, ಧರ್ಮಕ್ಕೆ ಸೀಮಿತಗೊಳ್ಳದೇ, ಎಲ್ಲರಿಗೂ ಅನ್ವಯವಾಗುವಂತಿದೆ. ಇಂತಹ ವ್ಯಕ್ತಿಯ ಪ್ರತಿಮೆ ಪ್ರತಿ ತಾಲೂಕಿನ ತಹಸೀಲ್ದಾರ್ ಕಚೇರಿ ಎದುರಿಗೆ ಇರಲೇಬೇಕು ಎಂಬ ಈ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿರುವ ಹಿನ್ನೆಲೆ ಯಲ್ಲಾಪುರದಿಂದಲೇ ಪ್ರತಿಮೆ ಸ್ಥಾಪನೆಯ ಕಾರ್ಯ ಆರಂಭವಾಗಲಿ ಎಂದು ಆಶಿಸಿದರು.
ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ರೇವಣಕರ್, ಅಧ್ಯಕ್ಷ ಮಾರುತಿ ಬೋವಿವಡ್ಡರ್, ಉಪಾಧ್ಯಕ್ಷರಾದ ಕಲ್ಲಪ್ಪ ಹೊಳಿ, ಅಶೋಕ ಕೊರವರ್, ಶ್ಯಾಮಿಲಿ ಪಾಟಣ್ಕರ್, ಕಾರ್ಯದರ್ಶಿ ಸಂತೋಷ್ ಪಾಟಣ್ಕರ್, ಸಹ ಕಾರ್ಯದರ್ಶಿ ತೊಳರಾಮ್ ಅತ್ತರವಾಲ, ಮಾರ್ಗದರ್ಶಕ ಬೆನಿತ್ ಸಿದ್ದಿ ಹಾಗೂ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿ ಪ್ರಮುಖರಾದ ಘನಶ್ಯಾಮ ರೇವಣಕರ್, ರೂಪಾ ಪಾಟಣ್ಕರ್, ಇರ್ಷಾದ್ ಕಾಗಲ್ಕರ್, ಬಶೀರ್ ಸೈಯ್ಯದ್, ದ್ಯಾಮಣ್ಣ ಬೋವಿವಡ್ಡರ್, ಹನುಮಂತ ಕೊರವರ್, ಅನಂತ ಸಿದ್ದಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಗುರುರಾಜ್ ಮನವಿಯನ್ನು ಸಂಬಂಧಿಸಿದವರಿಗೆ ತಲುಪಿಸಲಾಗುವುದೆಂಬ ಭರವಸೆ ನೀಡಿದರು.ಗೌರವಾಧ್ಯಕ್ಷ ಜಗನ್ನಾಥ ರೇವಣ್ಕರ್ ಮನವಿ ಪತ್ರ ವಾಚಿಸಿದರು. ಸಂತೋಷ್ ಪಾಟಣ್ಕರ್ ಸ್ವಾಗತಿಸಿದರು.