ಡಾ. ಕಸ್ತೂರಿ ರಂಗನ್ ವರದಿ ರದ್ದುಗೊಳಿಸಲು ಆಗ್ರಹ

KannadaprabhaNewsNetwork | Published : Aug 24, 2024 1:25 AM

ಸಾರಾಂಶ

ಚಿಕ್ಕಮಗಳೂರು, ಬಡವರ ವಿರೋಧಿ ಡಾ. ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು. ಬದುಕಿಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಸಣ್ಣ ರೈತರನ್ನು ಒಕ್ಕಲೆಬ್ಬಿಸದೇ ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಎಂ.ಎಲ್‌.) ಜಿಲ್ಲಾ ಸಮಿತಿ ಮುಖಂಡರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

- ಭಾರತೀಯ ಕಮ್ಯೂನಿಸ್ಟ್ ಜಿಲ್ಲಾ ಸಮಿತಿಯಿಂದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಡವರ ವಿರೋಧಿ ಡಾ. ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು. ಬದುಕಿಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಸಣ್ಣ ರೈತರನ್ನು ಒಕ್ಕಲೆಬ್ಬಿಸದೇ ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಎಂ.ಎಲ್‌.) ಜಿಲ್ಲಾ ಸಮಿತಿ ಮುಖಂಡರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಸಮಿತಿ ರಾಜ್ಯ ಕಾರ್ಯದರ್ಶಿ ರುದ್ರಯ್ಯ ಮಾತನಾಡಿ, ಮಲೆನಾಡಿನ ಭೂಮಿಗೆ ಭೂಮಿತಿ ಕಾಯ್ದೆ ಜಾರಿಗೊಳಿಸಬೇಕು. ದಲಿತರ ಭೂ ಮಂಜೂರಾತಿ ದಾಖಲೆಗಳನ್ನು ನಾಶಪಡಿಸಿರುವ ಬಗ್ಗೆ ತನಿಖೆಯಾಗಬೇಕು ಹಾಗೂ ದಲಿತರ ಮಂಜೂರಾತಿ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತವಾಗಿದ್ದರೂ ಗೋಮಾಳ, ಗೈರಾಣ, ಗ್ರಾಮಠಾಣ, ಊರು ಉಡುಬೆ, ಕೆರೆಯಂಗಳ, ಹುಲ್ಲುಬನ್ನಿ, ಕುರಿಮಂದೆ, ನೆಡುತೋಪಿನಲ್ಲಿ ಸಾವಿರಾರು ಎಕರೆ ಭೂಮಿಇದೆ. ಆದರೆ, ಇವುಗಳು ಬಲಾಢ್ಯ ಭೂ ಮಾಲೀಕರ ಕೈವಶವಾಗಿದೆ. ಜತೆಗೆ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಶೇ.99 ರಷ್ಟು ಮಂದಿ ಭೂರಹಿತರಾಗಿ ಇದ್ದಾರೆ. ಕೂಲಿ ಕಾರ್ಮಿಕರಿಗೆ ನಿವೇಶನ ಮತ್ತು ಸ್ಮಶಾನಗಳಿಗೆ ಜಾಗವಿಲ್ಲ. ನಮೂನೆ 53, 57ರ ಅರ್ಜಿಗೆ ಮಂಜೂರಾತಿ ದೊರೆಯದೇ ಅಕ್ರಮವಾಗಿ ಬಲಾಢ್ಯರಿಗೆ ಭೂಮಿಯನ್ನು ಮಂಜೂರಾತಿ ಮಾಡಿಕೊಡಲಾಗುತ್ತಿದ್ದು, ಇತ್ತೀಚೆಗೆ ಅಧಿಕ ಅಕ್ರಮ ಖಾತೆಗಳು ಮೂಡಿಗೆರೆ ತಾಲೂಕು ಒಂದರಲ್ಲೇ ಕಂಡು ಬಂದಿದೆ ಎಂದರು.

ಶ್ರೀಮಂತರ ಪಾಲಿಗೆ ಚಿಕ್ಕಮಗಳೂರು ಸ್ವರ್ಗವಾದರೆ, ಬಡವರ ಪಾಲಿಗೆ ನರಕವಾಗಿದೆ. ಸರ್ಕಾರ ಮಾಫಿಯಾಗಳನ್ನು ನಿಯಂತ್ರಿಸದೇ ಪುನಃ ಜನವಿರೋಧಿ ಭೂ ಗುತ್ತಿಗೆ ನೀತಿ ಜಾರಿಗೊಳಿಸುತ್ತಿದೆ. ಪಶ್ಚಿಮಘಟ್ಟ ಉಳಿಯಬೇಕಾದರೆ ಎಲ್ಲಾ ಮಾಫಿಯಗಳನ್ನು ನಿಯಂತ್ರಿಸಬೇಕು. ಡಾ. ಮಾಧವ ಗಾಡ್ಗಿಲ್ ವರದಿ ಪುನರ್ ಪರಿಶೀಲಿಸಿ ಜಾರಿಗೊಳಿಸಲು ಸರ್ಕಾರ ಕೂಡಲೇ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿ, ಒತ್ತುವರಿದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜಿಲ್ಲೆಯ ಸಾವಿರಕ್ಕೂ ಅಧಿಕ ಅಕ್ರಮ ಭೂ ಮಂಜೂರಾತಿ ತನಿಖೆ ಪೂರ್ಣಗೊಳಿಸಿ, ಅಕ್ರಮ ಭೂಮಿಯನ್ನು ಭೂಹೀನ ಬಡವರಿಗೆ ವಿತರಿಸಬೇಕು. ಸರ್ಕಾರಿ ಭೂಮಿ ಒತ್ತುವರಿ ಗುತ್ತಿಗೆ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು.

ಸಮಿತಿ ಜಿಲ್ಲಾ ಕಾರ್ಯದರ್ಶಿ ಶೇಖರ್ ಮಾತನಾಡಿ, ಅರಣ್ಯ ಮತ್ತು ಕಂದಾಯ ಜಮೀನಿನ ಜಂಟಿ ಸರ್ವೆ ಕಾರ್ಯ ನಡೆಸಿ ಸಣ್ಣ ರೈತರಿಗೆ ಕೃಷಿಗೆ ಅನುವು ಮಾಡಲು ಕ್ರಮ ಕೈಗೊಳ್ಳಬೇಕು. ಪರಿಸರ ವಿರೋಧಿ, ಜನವಿರೋಧಿ ಕಾನೂನುಬಾಹಿರ ಹೋಂ ಸ್ಟೇ, ರೆಸಾರ್ಟ್ ಸಂಸ್ಕೃತಿ ನಿಲ್ಲಿಸಬೇಕು. ಹಂಗಾಮಿ ಸಾಗುವಳಿ ಚೀಟಿಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ (ಎಂ.ಎಲ್‍)ನ ಮುಖಂಡರಾದ ಶಂಕರ್, ಗೋಪಾಲ್, ಪುಟ್ಟಸ್ವಾಮಿ, ಸಂದೀಪ್, ರೋಜ, ಭಾಗ್ಯ, ವೀಣಾ, ಸಣ್ಣಪ್ಪ ಮಂಜುನಾಥ್, ಜಯಣ್ಣ ಹಾಗೂ ಕಾರ್ಯಕರ್ತರು ಇದ್ದರು.-----

23 ಕೆಸಿಕೆಎಂ 1ಡಾ. ಕಸ್ತೂರಿ ರಂಗನ್ ವರದಿ ರದ್ದುಗೊಳಿಸುವಂತೆ ಆಗ್ರಹಿಸಿ ಸಿಪಿಐ (ಎಂ.ಎಲ್‌.) ಜಿಲ್ಲಾ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Share this article