ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರಿ ವಸತಿ ಶಾಲೆಗಳಲ್ಲಿ ಕುವೆಂಪು ಅವರ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯ ಬದಲಾಯಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆಯವರು ನಗರದ ಚಾಮರಾಜ ವೃ-ವೃತ್ತದ ಬಳಿಯ ಡಾ. ರಾಜ್ ಕುಮಾರ್ ಉದ್ಯಾನವನದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ಧ್ಯಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದು ಬದಲಾಯಿಸಿ, ಈ ನೆಲದ ಸಂಸ್ಕೃತಿಯಾದ ವಿದ್ಯಾಮಂದಿರದ ಪಾವಿತ್ರ್ಯ ಹಾಳು ಮಾಡಲು ಹೊರಟಿರುವ ಐಎಎಸ್ ಅಧಿಕಾರಿ ಮಣಿವಣ್ಣನ್ ನಡೆ ಖಂಡನಿಯ ಎಂದು ಅವರು ಕಿಡಿಕಾರಿದರು.
ನಮ್ಮ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಡುವ ಮೂಲಕ ಕುವೆಂಪು ರಾಜ್ಯದ ಆಸ್ತಿಯಾಗಿದ್ದಾರೆ. ಅವರ ಘೋಷವಾಕ್ಯ, ದಶಕಗಳಿಂದ ಕೋಟ್ಯಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪ್ರೇರಣೆಯಾಗಿದೆ. ಕೈಮುಗಿದು ಒಳಗೆ ಬಾ ಎಂದರೆ, ಅಹಂಕಾರ ತೊರೆದು, ವಿನಯಶೀಲನಾಗಿ ವಿದ್ಯೆಯನ್ನು ಶ್ರದ್ಧೆಯಿಂದ ಕಲಿ ಎಂಬುದಾಗಿದೆ. ಆದರೆ, ಅದನ್ನೇ ಬದಲಿಸಲು ಮುಂದಾಗಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.ಕೂಡಲೇ ಘೋಷವಾಕ್ಯ ಬದಲಿಸಿರುವುದನ್ನು ಸರಿಪಡಿಸಬೇಕು. ನಮ್ಮ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅರಿವಿಲ್ಲದೆ ಘೋಷವಾಕ್ಯ ಬದಲಾವಣೆಗೆ ಮೌಖಿಕ ಆದೇಶ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರನ್ನು ವಜಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಕುಮಾರ್ ಬಸಪ್ಪ, ಮಹದೇವಸ್ವಾಮಿ, ಹನುಮಂತಯ್ಯ, ರಾಮಕೃಷ್ಣೇಗೌಡ, ರಾಧಾಕೃಷ್ಣ, ವಿಷ್ಣು, ದರ್ಶನ್ ಗೌಡ, ಸ್ವಾಮಿಗೌಡ, ಪ್ರದೀಪ್, ಗುರುಮಲ್ಲಪ್ಪ, ತ್ಯಾಗರಾಜ್ ಮೊದಲಾದವರು ಇದ್ದರು.