ಪ್ರವಾಹದಿಂದ ಮನೆ ಸಂಪೂರ್ಣ ಹಾನಿಯಾಗಿದ್ದರೆ ವಸತಿ ಯೋಜನೆ

KannadaprabhaNewsNetwork | Published : Aug 4, 2024 1:16 AM

ಸಾರಾಂಶ

ಪ್ರವಾಹದಿಂದ ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ತೊಂದರೆ ಸಿಲುಕಿದ್ದು, ಕಾಳಜಿ ಕೇಂದ್ರಗಳನ್ನು ತೆರೆದು ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಪ್ರವಾಹದಿಂದ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು ರಾಜೀವ್ ಗಾಂಧಿ ವಸತಿ ನಿಗಮದಿಂದ 1.20 ಲಕ್ಷ ವೆಚ್ಚದ ವಸತಿ ಯೋಜನೆಯನ್ನು ಪರಿಹಾರವಾಗಿ ನೀಡಲಾಗುವುದು ಎಂದು ಸಮಾಜ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ಹಳೇ ತಿರುಮಕೂಡಲು ಹಾಗೂ ತಾಲೂಕಿನ ಮಾಲಂಗಿ ಗ್ರಾಮದಲ್ಲಿ ಶನಿವಾರ ಸಂಜೆ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲಾಡಳಿತದೊಂದಿಗೆ ಭೇಟಿ ನೀಡಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಪ್ರವಾಹದಿಂದ ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ತೊಂದರೆ ಸಿಲುಕಿದ್ದು, ಕಾಳಜಿ ಕೇಂದ್ರಗಳನ್ನು ತೆರೆದು ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ. 254 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ತಾತ್ಕಾಲಿಕ ದುರಸ್ತಿಗೆ 6,500 ರು. ಗಳ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಬಿನಿ ಮತ್ತು ಕೆ.ಆರ್.ಎಸ್. ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಎರಡು ನದಿಗಳಲ್ಲಿ ಹೆಚ್ಚಿನ ನೀರು ಹರಿಸಿದ್ದರಿಂದ ಪ್ರವಾಹ ಉಂಟಾಗಿದ್ದು, ನಂಜನಗೂಡು, ವರುಣ ಹಾಗೂ ಟಿ. ನರಸೀಪುರ ವಿಧಾನಸಭಾ ಕ್ಷೇತ್ರಗಳ ನದಿ ತೀರದ ಪ್ರದೇಶಗಳಲ್ಲಿ ರೈತರ ಬೆಳೆ ಹಾಗೂ ಮನೆ ಹಾನಿ ಉಂಟಾಗಿದೆ. ಜಿಲ್ಲಾಡಳಿತ ಹಲವು ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಕಡಿಮೆ ಪ್ರಮಾಣದ ಹಾನಿಯಾಗಿದೆ. ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು. ಹಾನಿ ಆಗಿರುವ ಮನೆ ಹಾಗೂ ಬೆಳೆ ಹಾನಿ ಕುರಿತು ಅಧಿಕಾರಿಗಳಿಂದ ವರದಿ ಪಡೆದು ಪರಿಹಾರ ನೀಡಲಾಗುವುದು ಎಂದರು.

ತಾಲೂಕಿನ ಮಾಲಂಗಿ ಗ್ರಾಮದಲ್ಲಿ ಪ್ರವಾಹದಿಂದ ನದಿ ತೀರದ 27 ಮನೆಗಳು ನಿರಂತರವಾಗಿ ನೀರು ನುಗ್ಗುತ್ತಿರುವುದರಿಂದ ಸರ್ವೇ ನಂ.77 ಮತ್ತು 78 ರಲ್ಲಿ ಕಾಯ್ದಿರಿಸಿರುವ 9.20 ಎಕರೆ ಜಮೀನಿನಲ್ಲಿ ನೆರೆ ಸಂತ್ರಸ್ತರಿಗೆ ಪರ್ಯಾಯ ನಿವೇಶನವನ್ನು ನೀಡುವಂತೆ ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿದರು. ಶಾಲೆಯ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದ್ದನ್ನು ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.

ಸಿಎಂ ಅವರ ಯಾವುದೇ ಪಾತ್ರವಿಲ್ಲ

ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಮುಂದಿನ ಐದು ವರ್ಷಗಳ ಅವಧಿಯನ್ನು ಅವರೇ ಪೂರೈಸಲಿದ್ದಾರೆ. ವರುಣಕ್ಕೆ ಸೇರುವ ನರಸೀಪುರ ಸಿಎಂ ಕ್ಷೇತ್ರವಾದ್ದರಿಂದ ಸಿದ್ದರಾಮಯ್ಯ ಅವರ ದಿನಾಂಕ ನೀಡಿದ ಬಳಿಕ ಉದ್ಘಾಟನೆಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ಎನ್. ವಿಷ್ಣುವರ್ಧನ್, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ನಟರಾಜು, ಉಪ ವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಸುರೇಶ್ ಆಚಾರ್, ಇಒ ಕೃಷ್ಣ, ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ಯ, ಮನೋಜ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಬಸವರಾಜು, ಮುದ್ದೇಗೌಡ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ಪುರಸಭೆ ಸದಸ್ಯ ಪ್ರಕಾಶ್, ದಸಂಸ ಸಂಚಾಲಕ ಆಲಗೂಡು ಶಿವಕುಮಾರ್, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮಾಲಂಗಿ ಜೆ. ಶಿವಸ್ವಾಮಿ, ಎಂ.ಕೆ. ಗಣೇಶ್ ಮೂರ್ತಿ, ತಾಪಂ ಮಾಜಿ ಸದಸ್ಯರಾದ ಗಣೇಶ, ರಾಮಲಿಂಗಯ್ಯ, ಗ್ರಾಪಂ ಸದಸ್ಯ ಮಾದೇಶ್, ಅಧಿಕಾರಿಗಳು ಇದ್ದರು.

Share this article