ಕನ್ನಡಪ್ರಭ ವಾರ್ತೆ ಮೈಸೂರುಡಾ.ಎಚ್.ಎನ್. ಶುಭದಾ ಅವರು ''''''''ದೇವಿ ಕುರುಬತಿ''''''''- ದಂತಕಥೆಯಾದ ಈಜಿಪ್ಟ್ ರಾಣಿ ಅನೆಪ್ ಕುರಿತು ಐತಿಹಾಸಿಕ ಕಾದಂಬರಿಯನ್ನು ರಚಿಸಿದ್ದಾರೆ.ಸಾವಿರಾರು ವರ್ಷಗಳ ಹಿಂದೆಯೇ ಅನೆಪ್ ಎಂಬ ಸ್ತ್ರೀಯೊಬ್ಬರು ಐಗುಪ್ತದಂತಹ ಸಿರಿವಂತ ರಾಷ್ಟ್ರದ ಪಟ್ಟದ ರಾಣಿಯಾಗಿ ಅಲಂಕಾರ, ಆಭರಣ, ಸುಖ ಭೋಗಗಳಲ್ಲಿ ಮೈಮರೆಯದೇ ಜನತೆಗಾಗಿ ಮಿಡಿದದ್ದು ಇಲ್ಲಿ ದಾಖಲಾಗಿದೆ. ಸ್ಪಾರ್ಥಿಯಾಗದೆ. ಅಳುಕದೆ ಹಂತ ಹಂತವಾಗಿ ಆಡಳಿತದಲ್ಲಿ ಸುಧಾರಣೆ ತಂದಿದ್ದು, ಆ ಮೂಲಕ ಜನಜೀವನದ ಗುಣಮಟ್ಟದಲ್ಲಿ ಉತ್ತಮಿಕೆಯನ್ನು ಸಾಧಿಸಿದ್ದನ್ನು ಇಲ್ಲಿ ದಾಖಲಿಸಿದ್ದಾರೆ. ಅನೆಪ್ ಅವರು ಪ್ರಾಚೀನ ಈಜಿಪ್ಟಿನ ವಾಣಿಜ್ಯ, ವ್ಯವಹಾರ, ವಿದೇಶಾಂಗ ನೀತಿಯಲ್ಲಿ ಮೌಲ್ಯಯುತ ಬದಲಾವಣೆ ತಂದು, ಆ ಮೂಲಕ ಕುರುಬರ, ನೇಕಾರರ, ಗಣಿಕೆಯರ, ಶ್ರಮಿಕರ ಜೀವನವನ್ನು ಬೆಳಗಿದವರು. ಆಕೆ ಈಜಿಪ್ಟ್ ನ ಮಗಳಾಗಿ, ತಾಯಿಯಾಗಿ, ಕಡೆಗೆ ಅವರ ದೇವಿಯಾಗಿ ಅರಳಿದ ಕಥೆ ಇದು.ಶುಭದಾ ಅವರು ಈಜಿಪ್ಟ್ ದೇಶದಲ್ಲಿ ಪ್ರವಾಸ ಮಾಡುವುದಕ್ಕೂ ಮೊದಲು ''''''''ಈಜಿಪ್ಟಾಲಜಿ'''''''' ಅಧ್ಯಯನ ಮಾಡಿದ್ದರು. ಅಲ್ಲಿನ ಪ್ರವಾಸಿ ಮಾರ್ಗದರ್ಶಿ ಮಹಮದ್ ಗಾಬ್ರಿ ಅವರು ಮೂರು ಸಾವಿರ ವರ್ಷಗಳ ಹಿಂದೆಯೇ ಕುರುಬ ವಂಶದ ಪೆರೋಗಳು ಮುನ್ನೂರು ವರ್ಷಗಳಿಗೂ ಅಧಿಕ ಕಾಲ ದೇಶವಾಳಿದ್ದಾರೆಂದೂ, ಹಾಗಾಗಿ ಕುರುಬರ ಆಡಳಿತದ ಹೆಜ್ಜೆಗಳು ಚರಿತ್ರೆಯಲ್ಲಿ ಮೂಡಿವೆ ಎಂಬುದನ್ನು ಗಮನಕ್ಕೆ ತಂದರು.
ಪುರುಷ ಪ್ರಧಾನ ಸಮಾಜದಲ್ಲೂ ಕೆಲವು ರಾಣಿಯರು ಪರೋಕ್ಷವಾಗಿ ರಾಜಕಾರಣ, ಆಡಳಿತ, ಅಂತಃಪುರ, ಸೆರೆಮನೆ, ಯುದ್ಧ ಹಾಗೂ ನ್ಯಾಯಸ್ಥಾನಗಳನ್ನು ನಿಯಂತ್ರಿಸುತ್ತಿದ್ದರೂ ಸಿಂಹಾಸನವೇರಲಾಗಿರಲಿಲ್ಲ. ಇಂತಹುವುದರ ನಡುವೆ ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಪೆರೋ ದೊರೆಗಳ ರೂಢಿಗತ ಆಡಳಿತ ವಿನ್ಯಾಸವನ್ನು ಮುರಿದು,ರಚನಾತ್ಮಕ, ಗುಣಾತ್ಮಕ ಆಡಳಿತ ಮಾದರಿ ಅಳವಡಿಸಿಕೊಂಡು ಪ್ರಜೆಗಳ ಮನಸೂರೆಗೊಂಡು ದಂತಕಥೆಯಾದ ಅನೆಪ್ ಎಂಬ ರಾಣಿಯ ಕಥೆ ಅವರನ್ನು ಆಕರ್ಷಿಸಿತು. ಹೀಗಾಗಿ ಶಾಸನಗಳ ಅಧ್ಯಯನ, ಈಜಿಪ್ಟಿನ ಕಡಲು, ನೈಲ್ ನದಿ, ಪಿರಮಿಡ್‌ಗಳು, ಮಮ್ಮಿಗಳು, ಮ್ಯೂಸಿಯಂ. ಫಿಲೆ ದ್ವೀಪ, ಆಸ್ವಾನ್ ಅಣೆಕಟ್ಟು, ಎಡ್ಭುವಿನ ಮಂದಿರ, ಕೈರೋ ಮೊದಲಾದ ಕಡೆ ಭೇಟಿ ನೀಡಿ, ಮಾಹಿತಿ ಕಲೆಹಾಕಿ ಈ ಐತಿಹಾಸಿಕ ಕಾದಂಬರಿ ರಚಿಸಿದ್ದಾರೆ.ಪೆರೋನ ಉಪಪತ್ನಿಯೊಬ್ಬಳ ಮಗಳು ಅನೆಪ್. ಅಂದಿನ ರೂಢಿಗತ ಸಂಪ್ರದಾಯದಂತೆ ಪೆರೋಗಳ ಪಟ್ಟದರಸಿಯರು ಅವರ ಸಹೋದರಿ ಇಲ್ಲವೇ ಮಗಳೇ ಆಗಬೇಕಿತ್ತು. ಪೆರೋ ಪೇಪಿ ತನ್ನ ಮಲ ಸಹೋದರಿಯನ್ನು ಪಟ್ಟದರಸಿಯಾಗಿ ಸ್ವೀಕರಿಸುತ್ತಾನೆ. ಇಂತಹ ವಿಷಮ ವಿವಾಹದಿಂದ ತಳಮಳ, ಮುಜುಗರಕ್ಕೊಳಗಾಗಿ ಚಡಪಡಿಸಿದರೂ ತನ್ನ ವ್ಯಕ್ತಿತ್ವದ ಬಲದಿಂದ ಅದನ್ನೆಲ್ಲಾ ಮೀರಿ ದೇಶದ ಒಳಿತಿಗಾಗಿ ತನ್ನದೇ ಸಮರ್ಪಿಸಿಕೊಂಡ ಅನೆಪ್ ರಾಣಿ ಸ್ರ್ರೀಕುಲದ ಪ್ರತಿಭೆ, ಶಕ್ತಿ ಹಾಗೂ ಘನತೆಯ ಮಾದರಿ. ಕುರುಬ ಕುಲದ ರಾಣಿಯೊಬ್ಬಳು ಸನ್ನಿವೇಶಗಳಿಗೆ ತಕ್ಕಂತೆ ಸ್ಪಂದಿಸುತ್ತಾ, ತಾನೂ ವಿಕಾಸವಾಗಿ, ಸ್ವತಃ ಸಿಂಹಾಸನವನ್ನೇರುತ್ತಾಳೆ. ಜಡ್ಡುಗಟ್ಟಿದ ಆಡಳಿತಕ್ಕೆ ತನ್ನ ಪ್ರೀತಿಯ, ವಿಶ್ವಾಸದ ಸ್ವರ್ಶ ನೀಡುತ್ತಾಳೆ. ಧರ್ಮದ ಚೌಕಟ್ಟಿನಲ್ಲಿಯೇ ಕ್ರಾಂತಿಕಾರಿ ಸುಧಾರಣೆಗಳನ್ನು ತರುತ್ತಾಳೆ. ಇದರಿಂದ ಈಜಿಪ್ಟಿನ ಸಂಪ್ರದಾಯಶೀಲ ಸಮಾಜದ ಮನಸೂರೆಗೊಂಡು ''''''''ದೇವಿ ಕುರುಬತಿ'''''''' ಎಂಬ ಬಿರುದು ಪಡೆಯುತ್ತಾಳೆ.ಭಾರತದಲ್ಲೂ ಅನೇಕ ಕುರುಬ ವಂಶದ ದೊರೆಗಳು, ಅಶೋಕನಂತಹ ಚಕ್ರವರ್ತಿಗಳು, ಅಹಲ್ಯಾಬಾಯಿಯಂತಹ ಸೃಜನಶೀಲ ಆಡಳಿತಗಾರರು ಮಾಡಿದ ಕೆಲಸಗಳು ಕಣ್ಮುಂದೆ ಇವೆ. ಸ್ಕಾಟ್ಲೆಂಡ್, ಇಸ್ರೇಲ್, ಆಫ್ರಿಕಾ, ಮಧ್ಯಪ್ರಾಚ್ಯದ ಕೆಲವೆಡೆಯೂ ಕುರುಬ ಕುಲದವರು ಆಡಳಿತ ನಡೆಸಿದ್ದಾರೆ. ಈ ಸಾಲಿನಲ್ಲಿ ದೇವಿ ಕುರುಬತಿ ಅವರ ಚರಿತ್ರೆ ದಾಖಲಾಗಿದೆ. ಈಜಿಪ್ಟಿನ ಚರಿತ್ರೆಯಲ್ಲಿ ಕುರುಬ ವಂಶದ ರಾಣಿಯ ಆಡಳಿತ ತಿಳಿಯಲು ಈ ಕೃತಿಯು ಉಪಯುಕ್ತವಾಗಿದೆ.ಆಸಕ್ತರು ಲೇಖಕಿ ಡಾ.ಎಚ್.ಎನ್. ಶುಭದಾ, ಮೊ.92050 87905 ಅಥವಾ ಪ್ರಕಾಶಕಿ ಸೃಷ್ಟಿ ಆಶಾ ನಾಗೇಶ್, ಮೊ. 94484 39998 ಸಂಪರ್ಕಿಸಬಹುದು.