ಡಾ.ಎಚ್ಸಿಎಂ, ಧ್ರುವ ಪುತ್ರ ಜೊತೆಗೆ ಡಾ.ಮೋಹನ್‌ ಎಂಟ್ರಿ!

KannadaprabhaNewsNetwork | Updated : Mar 16 2024, 03:46 PM IST

ಸಾರಾಂಶ

ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮೈಸೂರು, ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಸಮಾಲೋಚನೆ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಮೈಸೂರು/ ಚಾಮರಾಜನಗರ

ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮೈಸೂರು, ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಸಮಾಲೋಚನೆ ಮುಂದುವರಿದಿದೆ.

ಮೈಸೂರು ಕ್ಷೇತ್ರದಿಂದ ಬಿಜೆಪಿಯು ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ನಂತರ ಕಾಂಗ್ರೆಸ್ಸಿನಲ್ಲಿ ವಿಭಿನ್ನ ರೀತಿಯ ಲೆಕ್ಕಾಚಾರ ನಡೆಯುತ್ತಿದೆ. ಈಗಾಗಲೇ ಇರುವ ಆಕಾಂಕ್ಷಿಗಳ ಜೊತೆಗೆ ಯದುವೀರ ಅವರನ್ನು ಮಣಿಸಲು ಯಾರು ಶಕ್ತರು ಎಂಬ ಬಗ್ಗೆ ಮಂತ್ರಾಲೋಚನೆ ಮಾಡುತ್ತಿದ್ದಾರೆ.

ಇದರ ಜೊತೆಗೆ ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ವರುಣ, ನಂಜನಗೂಡು, ಟಿ. ನರಸೀಪುರ, ಎಚ್.ಡಿ. ಕೋಟೆ ಸೇರಿ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳು ಸೇರಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿ ಮಾಡಿದರೆ ಸೂಕ್ತ ಎಂಬ ಬಗ್ಗೆಯೂ ಸಮಾಲೋಚನೆ ನಡೆಯುತ್ತಿದೆ.

ಚಾಮರಾಜಗರಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಪ್ರಬಲ ಆಕಾಂಕ್ಷಿ. ಇದರ ಜೊತೆಗೆ ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡ ಸ್ವಾಮಿ ಇದ್ದಾರೆ. 

ಇದಲ್ಲದೇ ಎರಡು ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಆರ್. ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ದರ್ಶನ್ ಪ್ರಸ್ತುತ ನಂಜನಗೂಡು ವಿಧಾನಸಭಾ ಸದಸ್ಯರಾಗಿದ್ದಾರೆ. 

ಈ ಪಟ್ಟಿಗೆ ಹೊಸ ಸೇರ್ಪಡೆ ಚಾಮರಾಜನಗರ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ.ಎಚ್.ಎಸ್. ಮೋಹನ್ ಅವರದ್ದು.

ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ಇಲ್ಲಿನ ಟಿ.ಕೆ. ಬಡಾವಣೆಯ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೋಹನ್ ಇವತ್ತು ಬೆಳಗ್ಗೆ ಭೇಟಿ ಮಾಡಿದ್ದಾರೆ. 

ಈ ಭೇಟಿಯ ಕಾಲಕ್ಕೆ ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಕೂಡ ಇದ್ದರು. ಇದಲ್ಲದೇ ಎಚ್.ಡಿ. ಕೋಟೆಯ ಮಾಜಿ ಶಾಸಕ, ಮಾಜಿ ಸಚಿವ, ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ. ಶಿವಣ್ಣ ಅವರು ಕೂಡ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. 

ಶಿವಣ್ಣ ಅವರು ಈ ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದವರು. ಎರಡು ಬಾರಿ ಶಾಸಕರಾಗಿ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಐದು ಖಾತೆಯ ಸಚಿವರಾಗಿ, ಮಂಡ್ಯ ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು.

ಚಾಮರಾಜನಗರ ಕ್ಷೇತ್ರದಿಂದ ಮಹದೇವಪ್ಪ ಅವರು ಸ್ಪರ್ಧಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಯಕೆ. 

ಆದರೆ ಮಹದೇವಪ್ಪ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ತಮ್ಮ ಪುತ್ರ ಸುನಿಲ್ ಬೋಸ್ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದು, ಟಿ. ನರಸೀಪುರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಈವರೆಗೆ ಅವಕಾಶ ಸಿಕ್ಕಿಲ್ಲ. 

ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ, ಗೆಲ್ಲಿಸಿಕೊಂಡು ಬರುವುದು ತಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಆದರೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಆರ್. ಧ್ರುವನಾರಾಯಣ ಅವರು ಎರಡು ಬಾರಿ ಚಾಮರಾಜನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಸಂತೇಮರಹಳ್ಳಿ ಹಾಗೂ ಕೊಳ್ಳೇಗಾಲದಿಂದ ವಿಧಾನಸಭೆಗೂ ಆಯ್ಕೆಯಾಗಿದ್ದರು. ಅವರು ನಿಧನರಾಗಿ, ಒಂದು ವರ್ಷ ಕಳದರೂ ಇನ್ನೂ ಕೂಡ ಕ್ಷೇತ್ರದ ಜನಮಾನಸದಲ್ಲಿ ಅವರ ಹೆಸರು ಪ್ರಚಲಿತವಾಗಿದೆ. 

ಹೀಗಾಗಿ ಹಾಲಿ ನಂಜನಗೂಡು ಶಾಸಕರಾಗಿರುವ ಅವರ ಪುತ್ರ ದರ್ಶನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲವು ಸುಲಭ ಎಂಬುದು ಕೆಲವರ ಲೆಕ್ಕಾಚಾರ.

ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾದ ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರು ಕೂಡ ಟಿಕೆಟ್ ಆಕಾಂಕ್ಷಿ.

ಅಳಿಯನಿಗಾಗಿ ಮತ್ತೆ ಕಾಂಗ್ರೆಸ್ ಕದ ತಟ್ಟಿರುವ ಶ್ರೀನಿವಾಸ್ ಪ್ರಸಾದ್: ಚಾಮರಾಜನಗರದಿಂದ 1980, 1984, 1989, 1991 (ನಾಲ್ಕು ಬಾರಿಯೂ ಕಾಂಗ್ರೆಸ್), 1999([ಜೆಡಿಯು), 2018([ಬಿಜೆಪಿ)- ಹೀಗೆ ಆರು ಬಾರಿ ಆಯ್ಕೆಯಾಗಿರುವ, 1996 ರಲ್ಲಿ ಪಕ್ಷೇತರ, 1998 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡು ಬಾರಿ ಸೋತಿರುವ ಶ್ರೀನಿವಾಸಪ್ರಸಾದ್ ಅವರು ನಂಜನಗೂಡಿನಿಂದ 2008, 2013 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು, ಕೇಂದ್ರದಲ್ಲಿ ವಾಜಪೇಯಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. 75 ವರ್ಷ ದಾಟಿರುವ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ.

 ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ತಮ್ಮ ಅಳಿಯ ಡಾ.ಎಚ್.ಎಸ್. ಮೋಹನ್ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಯತ್ನ ನಡೆಸಿದ್ದರು. ಆದರೆ ಹೈಕಮಾಂಡ್ ಮಣೆ ಹಾಕಿಲ್ಲ. 

ಬದಲಿಗೆ ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಬಾಲರಾಜ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಡಾ.ಮೋಹನ್ ನಿನ್ನೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಇವತ್ತು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಟಿಕೆಟ್ ಕೇಳಿದ್ದಾರೆ.

ರಾಜಕಾರಣದಲ್ಲಿ ಕಾಯಂ ಮಿತ್ರರೂ ಇಲ್ಲ, ಶತ್ರುಗಳು ಇಲ್ಲ ಎಂಬ ಮಾತಿದೆ. ಹೀಗಾಗಿ ಚಾಮರಾಜನಗರದ ಟಿಕೆಟ್ ಮಹದೇವಪ್ಪ ಅಥವಾ ಧ್ರುವನಾರಾಯಣ ಪುತ್ರನಿಗೋ? ಅಥವಾ ಶ್ರೀನಿವಾಸ ಪ್ರಸಾದ್ ಅಳಿಯನಿಗೋ? ಎಂಬ ಕುತೂಹಲ ಉಂಟಾಗಿದೆ.

Share this article