ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ. 6 ಮತ್ತು 7ರಂದು ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಹಾಗೂ ಹೋರಾಟಗಾರರಾಗಿರುವ ಡಾ. ಕೆ.ಎಸ್. ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ಶನಿವಾರ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.ಮಾ. 6 ಮತ್ತು 7ರಂದು ಧಾರವಾಡದ ಜೆಎಸ್ಎಸ್ ಸಂಸ್ಥೆಯ ಆವರಣದಲ್ಲಿನ ಸನ್ನಿಧಿ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ತಿಳಿಸಿದ್ದಾರೆ.
ಸರ್ವಾಧ್ಯಕ್ಷರ ಪರಿಚಯ;ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೆ.ಎಸ್. ಶರ್ಮಾ ಅವರನ್ನು ಆಯ್ಕೆಮಾಡಲಾಗಿದೆ. 1934ರಲ್ಲಿ ಜನಿಸಿರುವ ಶರ್ಮಾ ಅವರು, ಇಂಗ್ಲೀಷ್, ರಾಜ್ಯಶಾಸ್ತ್ರ ಹಾಗೂ ಕಾನೂನು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ ಡಿ ಮಾಡಿರುವ ಶರ್ಮಾ, ಮೂರು ವಿಷಯಗಳ ಪ್ರಾಧ್ಯಾಪಕರಾಗಿಯೂ ಕೆಲವರ್ಷ ಸೇವೆ ಸಲ್ಲಿಸಿದವರು.
ಸಾಹಿತ್ಯ ಸೇವೆ;ಮಾರ್ಕ್ಸ್- ಮಾರ್ಕ್ಸವಾದಿ, ಗಾಂಧಿ- ಲೇನಿನ್, ಲೇನಿನವಾದ- ಗಾಂಧಿವಾದ, ಮಹಿಳಾ ವಿಮೋಚನೆ ಸೇರಿದಂತೆ 9ಕ್ಕೂ ಹೆಚ್ಚು ಸೈದ್ಧಾಂತಿಕ ಕೃತಿಗಳನ್ನು, ಕುವಲಾಯ ಸಮಗ್ರ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 10 ಕೃತಿಗಳನ್ನು, ಕವನ ಸಂಕಲನ, ಕಥಾ ಸಂಕಲನ ಹರಟೆ ಹೀಗೆ ಹತ್ತಾರು ಬಗೆಯ ಕನ್ಮಡ ಕೃತಿಗಳನ್ನು ರಚಿಸಿದ್ದಾರೆ. ಜತೆಗೆ ವಿವಿಧ ವಿಷಯಗಳ ಕುರಿತು ಆಂಗ್ಲ ಭಾಷೆಗಳಲ್ಲೂ ಕೃತಿ ರಚಿಸಿದ ಹಿರಿಮೆ ಇವರದು.
ಹೋರಾಟಗಾರ;ದಿನಗೂಲಿ ನೌಕರರ ಸಂಘ ಸೇರಿದಂತೆ ಹತ್ತು ಹಲವು ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿಯೂ ಕಾರ್ಮಿಕರ ಧ್ವನಿಯಾಗಿ ಹೋರಾಟ ನಡೆಸಿ ನ್ಯಾಯ ಕೊಡಿಸಿದ್ದಾರೆ. ಕೆ.ಎಸ್.ಶರ್ಮಾ, ನೊಂದ, ಬೆಂದ, ಶೋಷಿತರ ಧ್ವನಿಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಇವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಮಾಡಿರುವುದು ಸಾಹಿತ್ಯಿಕ ವಲಯದಲ್ಲಿ ಸಂತಸವನ್ನುಂಟು ಮಾಡಿದೆ.