ಬದುಕಿನ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಬೇಕು: ಡಾ. ಕಲ್ಯಾಣಸಿರಿ ಬಂತೇಜಿ

KannadaprabhaNewsNetwork | Published : Mar 18, 2024 1:45 AM

ಸಾರಾಂಶ

ಬದುಕಿನಲ್ಲಿ ಹುಟ್ಟು, ದುಃಖ, ರೋಗ, ಮುಪ್ಪು ಇರುತ್ತವೆ. ಇವುಗಳ ನಡುವಿನ ಬದುಕೇ ಜೀವನ. ಸವಾಲುಗಳನ್ನು ಎದುರಿಸಿ ಬದುಕಿದಾಗ ಮನುಷ್ಯ ಸಾಧನೆ ಮಾಡಲು ಸಾಧ್ಯ. ಲೋಭ- ಮೋಹ, ದ್ವೇಷಕ್ಕೆ ಅಂಟಿಕೊಂಡಿರುವ ಮನುಷ್ಯನಿಗೆ ಹತಾಶೆ, ಅತೃಪ್ತಿ ಕಾಡುತ್ತದೆ. ಸತ್ಯ, ಪ್ರಾಮಾಣಿಕತೆ, ಸನ್ಮಾರ್ಗದಿಂದ ಜೀವನ ನಡೆಸಿದಾಗ ಮಾತ್ರ ಸಂತೃಪ್ತಿ ಜೀವನ ಕಂಡುಕೊಳ್ಳಬಹುದು. ಪ್ರತಿಯೊಬ್ಬರೂ ಬುದ್ಧ, ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಜೀವನದಲ್ಲಿ ಯಾವ ವ್ಯಕ್ತಿ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತಾನೋ ಅವನು ಬದುಕನ್ನು ಕಟ್ಟಿಕೊಳ್ಳುತ್ತಾನೆ ಎಂದು ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಬಂತೇಜಿ ತಿಳಿಸಿದರು.

ಮೈಸೂರಿನ ಕುವೆಂಪುನಗರದ ಬುದ್ಧ ಕುಟೀರದಲ್ಲಿ ಭಾನುವಾರ ನಡೆದ ಬುದ್ಧ ವಂದನಾ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧರು ಹಾಗೂ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಾಂಸಾರಿಕ ಜೀವನದಲ್ಲಿ ಕಲ್ಲು- ಮುಳ್ಳುಗಳು, ಏರುಪೇರುಗಳು ಇದ್ದೆ ಇರುತ್ತವೆ. ಮರಣವನ್ನು ಬಚ್ಚಿಟ್ಟಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಬದುಕಿನಲ್ಲಿ ಹುಟ್ಟು, ದುಃಖ, ರೋಗ, ಮುಪ್ಪು ಇರುತ್ತವೆ. ಇವುಗಳ ನಡುವಿನ ಬದುಕೇ ಜೀವನ. ಸವಾಲುಗಳನ್ನು ಎದುರಿಸಿ ಬದುಕಿದಾಗ ಮನುಷ್ಯ ಸಾಧನೆ ಮಾಡಲು ಸಾಧ್ಯ. ಲೋಭ- ಮೋಹ, ದ್ವೇಷಕ್ಕೆ ಅಂಟಿಕೊಂಡಿರುವ ಮನುಷ್ಯನಿಗೆ ಹತಾಶೆ, ಅತೃಪ್ತಿ ಕಾಡುತ್ತದೆ. ಸತ್ಯ, ಪ್ರಾಮಾಣಿಕತೆ, ಸನ್ಮಾರ್ಗದಿಂದ ಜೀವನ ನಡೆಸಿದಾಗ ಮಾತ್ರ ಸಂತೃಪ್ತಿ ಜೀವನ ಕಂಡುಕೊಳ್ಳಬಹುದು. ಪ್ರತಿಯೊಬ್ಬರೂ ಬುದ್ಧ, ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಹೇಳಿದರು.

ಟಿ. ನರಸೀಪುರ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ಧ್ಯಾನದಿಂದ ಮಾತ್ರ ಏಕಾಗ್ರತೆ ಸಾಧ್ಯ. ಪ್ರತಿಯೊಬ್ಬರೂ ನಿಷ್ಕಲ್ಮಶವಾದ ಬದುಕನ್ನು ಸಾಗಿಸಲು ಧಮ್ಮದ ಮಾರ್ಗ ಅನಿವಾರ್ಯ. ಬುದ್ಧರ ಬೋಧನೆಗಳನ್ನು ಅಳವಡಿಸಿಕೊಳ್ಳುವುದರಿಂದ ಶಾಂತಿ ನೆಲೆಸುತ್ತದೆ ಎಂದರು.

ಚಾಮರಾಜನಗರ ನಳಂದ ಬುದ್ಧ ವಿಹಾರದ ಬೋಧಿದತ್ತ ಬಂತೇಜಿ ಅವರು ಧ್ಯಾನ ನಡೆಸಿಕೊಟ್ಟರು. ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಸುಗತಪಾಲ ಬಂತೇಜಿ, ಲಡಾಖ್‌ ನ ಸೋದೆ ಬಂತೇಜಿ, ಹಿರಿಯರಾದ ಎ. ಮಾದಯ್ಯ, ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಅಧ್ಯಕ್ಷ ಪ್ರೊ.ಡಿ. ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ ಆರ್. ಮಹಾದೇವಪ್ಪ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ನಿವೃತ್ತ ಎಂಜಿನಿಯರ್ ಆರ್. ನಟರಾಜು, ರಾಜು ಹಂಪಾಪುರ, ಎಂ. ಸಾವಕಯ್ಯ, ನಿಸರ್ಗ ಸಿದ್ದರಾಜು, ಪುಟ್ಟಸ್ವಾಮಿ, ಬಿ. ಗಾಯತ್ರಿದೇವಿ, ಅಕ್ಷಯ್, ಲತಾ ನಟರಾಜ್, ರಾಜಮ್ಮ ಪುಟ್ಟಸ್ವಾಮಿ, ಎಂ. ನಾಗಯ್ಯ, ರೂಪೇಶ್, ವಿಶಾಲ್, ವಿಜಯಕುಮಾರ್ ಮೊದಲಾದವರು ಇದ್ದರು.

Share this article