ಕನ್ನಡಪ್ರಭ ವಾರ್ತೆ ಮೈಸೂರು
ಅತಿಥಿ ಉಪನ್ಯಾಸಕರ ಪರಿಸ್ಥಿತಿಯನ್ನು ಗಮನಿಸಿದರೆ ಕರುಳು ಹಿಂಡಿದಂತಾಗುತ್ತದೆ ಎಂದು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಭಾಷಾ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ಬೇಸರ ವ್ಯಕ್ತಪಡಿಸಿದರು.ನಗರದ ಜೆ.ಎಲ್.ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಸ್ವಜನ್ಯ ಕಲಾ ವೇದಿಕೆ, ಅಮೋಘ ಪ್ರಕಾಶನ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಮಣಿಶ್ರೀ ಅವರ ''ಅತಿಥಿ ದೇವೋಭವ'' ಕಾದಂಬರಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಎಲ್ಲಾ ಕಾಲೇಜುಗಳಲ್ಲಿಯೂ ಅತಿಥಿ ಉಪನ್ಯಾಸಕರು ಇದ್ದಾರೆ. ಆದರೆ, ಅವರಿಗೆ ಸಿಗುತ್ತಿರುವ ಸವಲತ್ತು ಮತ್ತು ಸ್ಥಾನಮಾನವನ್ನು ಗಮನಿಸಿದಾಗ ಬೇಸರವಾಗುತ್ತದೆ. ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಸೇವಾಭದ್ರತೆ ಇಲ್ಲ. ಅವರಿಗೆ ನೀಡುತ್ತಿರುವ ಸಂಬಳ ಜೀವನ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಅವರು ತಿಳಿಸಿದರು.ಡಾ. ಮಣಿಶ್ರೀ ಅವರು ತಮ್ಮ ಅತಿಥಿ ದೇವೋಭವ ಕಾದಂಬರಿಯಲ್ಲಿ ಅತಿಥಿ ಉಪನ್ಯಾಸಕರ ಕಷ್ಟ ಕಾರ್ಪಣ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಪುಸ್ತಕವನ್ನು ಕುರಿತು ಸಾಹಿತಿ ಎಸ್. ಶಿಶಿರಂಜನ್ ಮಾತನಾಡಿ, ಸ್ವಾತಂತ್ರ್ಯ ಹೋರಾಟ, ಏಕೀಕರಣ ಚಳವಳಿ ಸೇರಿದಂತೆ ಎಲ್ಲಾ ಹೋರಾಟದ ಸಂದರ್ಭಗಳಲ್ಲಿಯೂ ಸಾಹಿತಿಗಳು ಪ್ರತಿಭಟನೆಯ ಭಾಗವಾಗಿ ಇರುತ್ತಿದ್ದರು. ಎಲ್ಲಾ ಸಾಮಾಜಿಕ ಬಿಕ್ಕಟ್ಟುಗಳಿಗೂ ತಮ್ಮ ಸಾಹಿತ್ಯದ ಮೂಲಕ ಧ್ವನಿ ಎತ್ತುತ್ತಿದ್ದರು. ಆದರೆ, ಇತ್ತೀಚಿನ ಸಾಹಿತಿಗಳು ಪಸ್ತಕ ಮಾರಾಟದ ಕಡೆ ಗಮನ ಹರಿಸುತ್ತಾರೆಯೇ ಹೊರತು ಸಾಮಾಜಿಕ ಜವಾಬ್ದಾರಿಯನ್ನು ಮರೆತ್ತಿದ್ದಾರೆ ಎಂದು ವಿಷಾದಿಸಿದರು.ಸಾಹಿತಿ ಡಾ. ಸಿದ್ದರಾಮ ಹೊನ್ಕಲ್, ಶಿಕ್ಷಕಿ ಎಸ್. ವನಜಾಕ್ಷಿ, ಹೋಮಿಯೋಪತಿ ವೈದ್ಯ ಡಾ.ಎಂ.ಸಿ. ಮನೋಹರ್, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ, ಮದ್ರಾಸ್ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ. ರಂಗಸ್ವಾಮಿ, ಕೃತಿಕಾರರಾದ ಡಾ. ಮಣಿಶ್ರೀ ಮೊದಲಾದವರು ಇದ್ದರು.