ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎನ್ .ಮಂಜುನಾಥ್ ರವರು ಉಮೇದುವಾರಿಕೆ ಸಲ್ಲಿಸಿದ ನಂತರ ಸಹಸ್ರಾರು ಜನರೊಂದಿಗೆ ಮೆರವಣಿಗೆ ನಡೆಸುವ ಮೂಲಕ ಬಿಜೆಪಿ - ಜೆಡಿಎಸ್ ಮೈತ್ರಿ ಶಕ್ತಿ ಪ್ರದರ್ಶನ ಮಾಡಿದರು.
ರಾಮನಗರಕ್ಕೆ ಆಗಮಿಸುವುದಕ್ಕೂ ಮುನ್ನ ಬೆಂಗಳೂರು ನಿವಾಸದಲ್ಲಿ ಬೆಳಗ್ಗೆ ಹಿತೈಷಿಗಳು ಡಾ.ಸಿ.ಎನ್.ಮಂಜುನಾಥ್ ಅವರಿಗೆ ಆರತಿ ಬೆಳಗಿ, ತಿಲಕವಿಟ್ಟು ಶುಭ ಕೋರಿದರು. ಬಳಿಕ ಮಂಜುನಾಥ್ ಬೆಂಗಳೂರಿನಿಂದ ನೇರವಾಗಿ ರಾಮನಗರಕ್ಕೆ ಆಗಮಿಸಿದರು.ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಪತ್ನಿ ಅನುಸೂಯ ಅವರೊಂದಿಗೆ ಮಂಜುನಾಥ್ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಮಾಜಿ ಸಚಿವ ಮುನಿರತ್ನ ಮತ್ತಿತರ ನಾಯಕರು ಸಾಥ್ ನೀಡಿದರು.
ಪಿಡಬ್ಲ್ಯೂಡಿ ವೃತ್ತದಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದವರೆಗೆ ಹಮ್ಮಿಕೊಂಡಿದ್ದ ರ್ಯಾಲಿಯನ್ನು ಸಮಯ ಮೀರಿದ ಕಾರಣ ಮಂಜುನಾಥ್ ರವರು ರದ್ದುಪಡಿಸಿ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು. ಅಲ್ಲಿ ನೆರೆದಿದ್ದ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಹ ಜಿಲ್ಲಾಧಿಕಾರಿಗಳ ಕಚೇರಿಯತ್ತ ತೆರಳಿ ಜಮಾಯಿಸಿದರು.ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎನ್ .ಮಂಜುನಾಥ್ ಚುನಾವಣಾಧಿಕಾರಿ ಅವಿನಾಶ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಪತ್ನಿ ಅನುಸೂಯ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವ ಮುನಿರತ್ನ, ಬೆಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಹಾಜರಿದ್ದರು.
ನಾಮಪತ್ರ ಸಲ್ಲಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರ ಬಂದ ಡಾ.ಸಿ.ಎನ್ .ಮಂಜುನಾಥ್ ಅವರು ಕಾರ್ಯಕರ್ತರತ್ತ ಕೈ ಬೀಸಿ ನಮಸ್ಕರಿಸಿದರು. ನಂತರ ಚಾಮುಂಡೇಶ್ವರಿ ಸ್ಕಿಲ್ ಮಿಲ್ ಗ್ರೌಂಡ್ ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದತ್ತ ಹೊರಟರು.ಈ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರ ಹರ್ಷೋದ್ಗಾರ, ಜೈಕಾರದ ನಡುವೆ ಮೆರವಣಿಗೆ ಜನಸಾಗರದ ನಡುವೆ ಸಾಗಿತು. ಜೆಡಿಎಸ್ - ಬಿಜೆಪಿ ಪಕ್ಷದ ಶಲ್ಯ ಧರಿಸಿದ್ದ ಕಾರ್ಯಕರ್ತರು ಮೋದಿ, ಮಂಜುನಾಥ್ ಭಾವಚಿತ್ರವಿರುವ ಭಿತ್ತಿ ಪತ್ರ, ಪಕ್ಷದ ಬಾವುಟ ಹಿಡಿದು ಪ್ರಧಾನಿ ಮೋದಿ ಹಾಗೂ ಡಾ.ಸಿ.ಎನ್ .ಮಂಜುನಾಥ್ ಪರ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು.
ಮೆರವಣಿಗೆ ವೇಳೆ ಅಭಿಮಾನಿಯೊಬ್ಬ ಬಲಗೈಯಲ್ಲಿ ಪ್ರಧಾನಿ ಮೋದಿ, ಎಡಗೈನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಭಾವಚಿತ್ರದ ಅಚ್ಚೆ ಹಾಕಿಸಿರುವುದನ್ನು ಪ್ರದರ್ಶಿಸಿ ಗಮನ ಸೆಳೆದನು.ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಪಟ ಕುಣಿತ, ಗಾರುಡಿ ಬೊಂಬೆ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಕ್ಷೇತ್ರದ ವಿವಿಧಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿ ಬಂದರು.
ಕೋಟ್ ..............ಅಭ್ಯರ್ಥಿ ಹೆಸರಿನವರನ್ನು ಕಣಕ್ಕಿಳಿಸುವುದು ಹಿಂದೆಯಿಂದಲೂ ಬಂದಿರುವ ತಂತ್ರಗಳು. ಆದರೆ, ಮತದಾರರು ಯಾರಿಗೆ ಮತ ಹಾಕಬೇಕೊ ಅವರಿಗೇ ಹಾಕುತ್ತಾರೆ. ಮತದಾರರಿಗೆ ಆಮಿಷವೊಡ್ಡುತ್ತಿರುವುದನ್ನು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ. ಕ್ಷೇತ್ರದಲ್ಲಿ ನಮಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಬಿಜೆಪಿ ನಾಯಕ ಅಮಿತ್ ಶಾ ಅವರ ರೋಡ್ ಶೋ ಉತ್ಸಾಹ ತಂದಿದ್ದು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
-ಡಾ.ಸಿ.ಎನ್ .ಮಂಜುನಾಥ್ , ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಕೋಟ್ ............ಡಾ.ಸಿ.ಎನ್ .ಮಂಜುನಾಥ್ ಅವರ ಸೇವೆ ಗುರುತಿಸಿ ಜನ ಮತದಾನ ಮಾಡಬೇಕು. ಸೇವೆ ಮೊದಲು ಹಣ ಪಾವತಿ ಆಮೇಲೆ ಅನ್ನುತ್ತಿದ್ದವರು. ಹೃದಯವಂತ ಮಂಜುನಾಥ್ ಅವರಿಗೆ ಹೃದಯವಂತರಾಗಿ ಮತದಾನ ಮಾಡಿ. ಮತ ಮೊದಲು ಸೇವೆ ನಿರಂತರವಾಗಿ ನಿಮಗೆ ಸಿಗಲಿ. ಹೆಚ್ಚಿನ ಜನರು ಅವರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಈಗ ಅವರು ನಿಮ್ಮ ಬಳಿ ಬಂದಿದ್ದಾರೆ. ಮತ ಕೊಟ್ಟು ಸೇವೆ ಮಾಡಿಸಿಕೊಳ್ಳಿ.
-ಅನುಸೂಯ, ಡಾ.ಸಿ.ಎನ್.ಮಂಜುನಾಥ್ ಪತ್ನಿ4ಕೆಆರ್ ಎಂಎನ್ 1,2.ಜೆಪಿಜಿ1.ಬೆಂಗಳೂರು ನಿವಾಸದಲ್ಲಿ ಹಿತೈಷಿಗಳು ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಆರತಿ ಬೆಳಗಿದರು.
2.ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ರವರು ಚುನಾವಣಾಧಿಕಾರಿ ಅವಿನಾಶ್ ಅವರಿಗೆ ನಾಮಪತ್ರ ಸಲ್ಲಿಸಿದರು.