ಕನ್ನಡಪ್ರಭ ವಾರ್ತೆ ಔರಾದ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಬುಧವಾರ ಔರಾದ್ ಪಟ್ಟಣದಲ್ಲಿರುವ ಅಲೆಮಾರಿ ಕಾಲೋನಿಗೆ ಭೇಟಿ ನೀಡಿ ಅವರ ಸಮಸ್ಯೆಗಳು ಆಲಿಸಿದರು.ಬೆಳಿಗ್ಗೆ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ಮಹಿಳೆಯರು ತಾವು ಪ್ರತಿನಿತ್ಯ ಅನುಭವಿ ಸುತ್ತಿರುವ ನೂರಾರು ಸಮಸ್ಯೆಗಳ ಕುರಿತು ತಮ್ಮ ಅಳಲು ತೊಡಿಕೊಂಡರು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕುತ್ತಿರುವ ನಮಗೆ ನ್ಯಾಯ ಸಿಗುವುದು ಯಾವಾಗ ಎಂದು ಪ್ರಶ್ನಿಸಿದರು.
ವಸತಿಗಾಗಿ 2018ರಲ್ಲಿ ಮಂಜೂರಾದ ಸ್ಥಳವನ್ನು ವಿವಿಧ ಕಾರಣಗಳು ಹೇಳಿ ಇಂದಿಗೂ ವಿತರಿಸದೇ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಔರಾದ್ ಪಟ್ಟಣದಿಂದ 10 ಕಿಮೀ ದೂರದಲ್ಲಿ ಸ್ಥಳ ನೀಡುತ್ತೆವೆ ಎನ್ನುತ್ತಿರುವ ಅಧಿಕಾರಿಗಳು ನಮ್ಮ ಬದುಕಿನ ಹಕ್ಕಿಗೂ ಸಹ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ.ಅಲೆಮಾರಿ ಸಮೂಹದ ಅಧ್ಯಕ್ಷ ನಾಗನಾಥ ವಾಕೋಡೆ ಮಾತನಾಡಿ, ಎಲ್ಲ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಬಂದು ಆಶ್ವಾಸನೆ ನೀಡಿ ಹೋಗು ತ್ತಾರೆ, ಆದರೆ ಇಂದಿಗೂ ಯಾರೂ ಸ್ಪಂದಿಸುವ ಚಿಕ್ಕ ಪ್ರಯತ್ನ ಕೂಡ ಮಾಡಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕೊಳಚೆ ನೀರಿನಲ್ಲಿಯೇ ವಾಸ ಮಾಡುತ್ತಿರುವ ನಮಗೆ ಸೌಜನ್ಯಕ್ಕಾದರೂ ನೋಡುವ ಯೋಚನೆ ಅಧಿಕಾರಿಗಳು ಮಾಡಿಲ್ಲ. ಕೆಲ ತಿಂಗಳುಗಳ ಹಿಂದೆಯೇ ಇದೇ ಕೊಳಚೆ ನೀರಿನಲ್ಲಿ ವಾಸಿಸುತ್ತಿರುವ ನಮ್ಮ ಅಲೆಮಾರಿ ಸಮೂಹದ ಬಾಣಂತಿ ಮಹಿಳೆ ಸೋಂಕಿಗೆ ಬಲಿಯಾಗಿದ್ದರೂ ಸಹ ಇತ್ತ ಯಾರು ನೋಡುತ್ತಿಲ್ಲ ಎಂದು ಅಳುತ್ತಲೇ ಮಹಿಳೆಯೋರ್ವಳು ಹೇಳಿಕೊಂಡರು.ಕೆಳಗಡೆ ಮಹಿಳೆಯರೊಂದಿಗೆ ಕುಳಿತು ಸಮಸ್ಯೆ ಆಲಿಸಿದ ಅವರು, ಅಧಿಕಾರಿಗಳು ಬೇಜವಾಬ್ದಾರಿಯಿಂದ ಈ ಸಮಸ್ಯೆ ಉಂಟಾಗಿದೆ. ನಾನು ಬರುವ ವಿಚಾರ ಗೊತ್ತಿದ್ದು ಕೆಲ ಅಧಿಕಾರಿಗಳು ಬರದಿರುವ ಕುರಿತು ಬೇಸರ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಜೊತೆ ಅಲೆಮಾರಿ ಸಮುದಾಯದ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಸೂಚಿಸಲಾಗುವುದು ಎಂದರು.ಬಳಿಕ ಪೊಲೀಸ್ ಠಾಣೆ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ಸರ್ಕಾರಿ ಆಸ್ಪತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬ್ರಿಮ್ಸ್ ಆಸ್ಪತ್ರೆಗಿಂತ ಉತ್ತಮ ವ್ಯವಸ್ಥೆ ಇಲ್ಲಿ ಕಂಡಿದೆ. ಅಲ್ಪಸಂಖ್ಯಾತ ಇಲಾಖೆಯ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ ವಾರ್ಡನ್ ವಿರುದ್ಧ ಹರಿಹಾಯ್ದ ಅವರು, ಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಖಡಕ್ಕಾಗಿ ಸೂಚಿಸಿದರು.ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒ ಮಾಣಿಕರಾವ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ ಡಿಕೆ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಬಿಸಿಎಂ ಅಧಿಕಾರಿ ರವೀಂದ್ರ ಮೇತ್ರೆ, ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ಐ ವಸೀಂ ಪಟೇಲ್, ರೇಣುಕಾ ಭಾಲೇಕರ್, ಡಾ. ಶಂಕರರಾವ ದೇಶಮುಖ ಸೇರಿದಂತೆ ಇನ್ನಿತರರು ಇದ್ದರು.