ಕನ್ನಡಪ್ರಭ ವಾರ್ತೆ ಮೈಸೂರು
ಸಂವಿಧಾನ ಶಿಲ್ಪಿ ಡಾ.ಬಿ.ಆರ್, ಅಂಬೇಡ್ಕರ್ ಅವರು ಸಮ ಸಮಾಜದ ಕನಸುಗಾರ. ಜಾತಿ, ಧರ್ಮ ಮತ್ತು ಲಿಂಗಾಧಾರಿತ ಅಸಮಾನ ಸಮಾಜ ಸಲ್ಲದು, ಎಲ್ಲವನ್ನೂ ಒಳಗೊಳ್ಳುವ ಸಮಾಜ ನಮ್ಮದಾಗಬೇಕು ಎಂಬ ಆಶಯ ಅವರದು ಎಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಛಯಲ್ಲಿ ಮಾತನಾಡಿದ ಅವರು, ಗಂಡು- ಹೆಣ್ಣು, ಮೇಲು- ಕೀಳು, ಜಾತಿ- ಧರ್ಮ ಎಂಬುದು ಮಿಥ್ಯ. ಎಲ್ಲರೂ ಒಂದೇ ಎಂಬುದೇ ಸತ್ಯ. ಹೀಗಾಗಿ, ಎಲ್ಲಾ ತಾರತಮ್ಯಗಳನ್ನು ಮೀರಿ ಬದುಕುವುದೇ ನಿಜ ಧರ್ಮ. ಅದನ್ನೇ ಸಂವಿಧಾನದ ಮೂಲಕ ಡಾ. ಅಂಬೇಡ್ಕರ್ ಸಾರಿದರು ಎಂದರು.
ಸಮಾಜದ ಅಭಿವೃದ್ಧಿಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಮಾಜವೇ ಪ್ರಯೋಗಾಲಯವಾಗಬೇಕು. ಯಾರನ್ನೂ ನೋಯಿಸದೇ, ನೈತಿಕವಾಗಿ ಬದುಕು ಕಟ್ಟಿಕೊಳ್ಳಲು ಸಂವಿಧಾನ ಎಡೆ ಮಾಡಿಕೊಡುತ್ತದೆ. ಧರ್ಮ ಮನುಷ್ಯನ ಕಲ್ಯಾಣಕ್ಕೆ, ಆದರೆ ಅದು ಈಗ ಮನುಷ್ಯ ಮನುಷ್ಯರ ನಡುವೆ ದ್ವೇಷ ಬಿತ್ತಲಾಗುತ್ತಿದೆ ಎಂದು ಅವರು ವಿಷಾದಿಸಿದರು.ಮನುಷ್ಯ ಮನುಷ್ಯರ ನಡುವೆ ಸಮನ್ವಯಕ್ಕೆ ಅಂಬೇಡ್ಕರ್ ಕೊಡುಗೆ ಹೆಚ್ಚು. ಅಂಬೇಡ್ಕರ್ ವಾದ ಸದಾ ಜೀವಂತ. ಏಕೆಂದರೆ, ಅದು ಮಾನವೀಯ ಸಂಬಂಧ ಮತ್ತು ಸಮಾನತೆಗೆ ಮಿಡಿಯುತ್ತದೆ. ಒಂದು ಮತ್ತೊಂದು ಸಮಾಜ ಕೊಂಡಿಯಾಗಿ ಬೆಳೆದುಕೊಂಡು, ಒಳಗೊಳ್ಳುವ ಸಮಾಜ ನಿರ್ಮಾಣ ಮಾಡಲು ಇದು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಜಾತಿ ಪದ್ಧತಿಯು ದೇಶದ ಬಹುದೊಡ್ಡ ಮೂಢನಂಬಿಕೆ. ಹೀಗಾಗಿ, ಸಮಾಜದಲ್ಲಿ ಒಡಕು, ಅಶಾಂತಿ ಇದ್ದು, ಸಮನ್ವಯತೆ ಕೊರತೆ ಇದೆ. ಇದು ಕೊನೆಯಾಗಬೇಕು. ಅಸಮಾನತೆ ವಿರುದ್ಧ ಹೋರಾಟದ ಪರಿಣಾಮಕಾರಿ ಹೆಜ್ಜೆ ಇಟ್ಟವರು ಅಂಬೇಡ್ಕರ್. ಈ ದೇಶದಲ್ಲಿ ಸಾಮಾಜಿಕ ಸಮಾನತೆಯ ನೆಲೆಗಟ್ಟಿನಲ್ಲಿ ಚಿಂತನೆ ಮಾಡಿ, ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿ ಕೊಟ್ಟರು. ಆಧುನಿಕ ಕಾಲಗಟ್ಟದಲ್ಲಿ ಶೋಷಣೆ ಹೆಚ್ಚಾಗಿದೆ. ಇದರ ನಿರ್ಮೂಲನೆ ಅಂಬೇಡ್ಕರ್ ವಾದವೇ ಸಿದ್ಧೌಷದ ಎಂದು ಅವರು ತಿಳಿಸಿದರು.ಮಹಿಳೆಯರ ಬಗ್ಗೆ ಕಾಳಜಿ ಇದ್ದ ಅವರು ಸಮಾನ ಉದ್ಯೋಗಕ್ಕೆ ಸಮಾನ ವೇತನ ಎಂಬ ಅವಕಾಶವನ್ನು ಒದಗಿಸಿದರು. ಅಲ್ಲದೆ, ಸಂಬಳ ಸಹಿತ ಹೆರಿಗೆ ರಜೆ ನೀಡಲು ನಾಂದಿ ಹಾಡಿದರು. ನಿರ್ಲಕ್ಷಿತ ಸಮುದಾಯ ಮತ್ತು ಲಿಂಗಗಳಿಗೆ, ಅವಕಾಶ ನಿರಾಕರಿಸಿದಾಗ, ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡಿ ಮಾನವ ಕಲ್ಯಾಣಕ್ಕೆ ಕೊಡುಗೆ ನೀಡಿದರು. ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಾಗಿ ಪ್ರಜಾಪ್ರಭುತ್ವ ಮಾದರಿಯನ್ನು ತಂದು ಸಮಾಜ ಕಟ್ಟಲು, ರಾಷ್ಟ್ರದ ನಿರ್ಮಾಣಕ್ಕೆ ಅನುವು ಮಾಡಿ ಕೊಟ್ಟವರು ಅಂಬೇಡ್ಕರ್ ಎಂದರು.
ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ. ಲಲಿತಾ, ಅಧ್ಯಾಪಕ, ಅಧ್ಯಾಪಕೇತರರು ಇದ್ದರು. ವಿದ್ಯಾರ್ಥಿನಿಯರಾದ ಮೇಘನಾ ಸ್ವಾಗತಿಸಿದರು. ವಿದ್ಯಾಶ್ರೀ ವಂದಿಸಿದರು. ಪುಣ್ಯ ನಿರೂಪಿಸಿದರು.