- ಆಧಾರ್ ಕಾರ್ಡ್ ತೋರಿಸಿ ಪ್ರಚಾರ ನಡೆಸಿದ ಶತ ಕೋಟ್ಯಧೀಶರ ಮನೆ ಸೊಸೆ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ನಗರದಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ ಏರುವ ಮೂಲಕ ವಿನೂತನ ಪ್ರಚಾರ ಮಾಡಿ ಗಮನ ಸೆಳೆದರು.ನಗರದಲ್ಲಿ ಕೆಎಸ್ಸಾರ್ಟಿಸಿ ನಗರ ಸಾರಿಗೆಯ ಚೇತನ ಕಾಲೇಜು- ಅರಳಿಮರ ವೃತ್ತದ ಮಾರ್ಗದಲ್ಲಿ ಸಾಗುವ ಬಸ್ಸಿನಲ್ಲಿ ತಮ್ಮ ಆಧಾರ್ ಕಾರ್ಡ್ ದಾಖಲೆ ತೋರಿಸಿ, ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮೊದಲ ಬಾರಿಗೆ ಸರ್ಕಾರಿ ಬಸ್ಸನ್ನೇರಿ, ಶಕ್ತಿ ಯೋಜನೆಯ ಟಿಕೆಟ್ ನಡಿ ಉಚಿತವಾಗಿ ಪ್ರಯಾಣ ಮಾಡಿದರು.
ಬಸ್ಸಿನಲ್ಲಿದ್ದ ಮಹಿಳೆಯೊಬ್ಬರ ಪಕ್ಕ ಕುಳಿತ ಡಾ.ಪ್ರಭಾ ಮಲ್ಲಿಕಾರ್ಜುನ, ಸರ್ಕಾರದ ಯೋಜನೆಗಳ ಬಗ್ಗೆ, ಶಕ್ತಿ ಯೋಜನೆ ಬಗ್ಗೆ ವಿಚಾರಿಸಿದರು. ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ದಾವಣಗೆರೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಗೆ ಬೆಂಬಲಿಸಿ, ಮತ ನೀಡುವಂತೆ ಮನವಿ ಮಾಡಿದರು. ನಂತರ ಬಸ್ಸು ಸ್ಟಾಪ್‌ನಲ್ಲಿ ಇಳಿದ ಡಾ.ಪ್ರಭಾ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿನಿಯರ ಜೊತೆಗೆ ಸಂವಾದ ನಡೆಸಿದರು.ಇದೇ ಮೊದಲ ಬಾರಿಗೆ ಮತ ಚಲಾಯಿಸುವ ಉತ್ಸಾಹದಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಮತದಾನದ ಮಹತ್ವ ಸಾರಿದ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ತಾವೆಲ್ಲರೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ, ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ತಮ್ಮನ್ನು ದಾವಣಗೆರೆ ಕ್ಷೇತ್ರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಅನಂತರ ಅಲ್ಲಿಂದ ಮತ್ತೊಂದು ಕೆಎಸ್ಸಾರ್ಟಿಸಿ ನಗರ ಸಾರಿಗೆ ಬಸ್ಸನ್ನೇರಿದ ಡಾ.ಪ್ರಭಾ ಮಲ್ಲಿಕಾರ್ಜುನ ಬಸ್ಸಿನಲ್ಲಿದ್ದ ಯುವಜನರು, ವಿದ್ಯಾರ್ಥಿನಿಯರು, ಮಹಿಳೆಯರು, ಹಿರಿಯರು, ಹಿರಿಯ ನಾಗರಿಕರಿಗೆ ತಮಗೆ ಮತ ನೀಡುವಂತೆ ಮನವಿ ಮಾಡುತ್ತ, ನಗರದ ಹೊರವಲಯದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಕೊನೆ ಸ್ಟಾಪ್‌ನಲ್ಲಿ ಇಳಿದರು. ಅನಂತರ ತಮ್ಮ ಕಾರು ಚಾಲಕ ರಮೇಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆ ವಾರ್ಡ್‌ಗೆ ತೆರಳಿದ ಡಾ.ಪ್ರಭಾ ಮಲ್ಲಿಕಾರ್ಜುನ ಆತನ ಆರೋಗ್ಯ ಹಾಗೂ ಕುಟುಂಬದವರ ಆರೋಗ್ಯ ವಿಚಾರಿಸಿದರು.- - - -5ಕೆಡಿವಿಜಿ9:
ದಾವಣಗೆರೆಯಲ್ಲಿ ಕೆಎಸ್ಸಾರ್ಟಿಸಿ ನಗರ ಸಾರಿಗೆ ಬಸ್ ಏರಲು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ತಮ್ಮ ಆಧಾರ್ ಕಾರ್ಡ್ ಪ್ರದರ್ಶಿಸಿ, ನಿರ್ವಾಹಕರ ಬಳಿ ಉಚಿತ ಶಕ್ತಿ ಟಿಕೆಟ್ ಪಡೆದರು. -5ಕೆಡಿವಿಜಿ10, 11:ದಾವಣಗೆರೆಯಲ್ಲಿ ಕೆಎಸ್ಸಾರ್ಟಿಸಿ ನಗರ ಸಾರಿಗೆ ಬಸ್ಸನ್ನೇರಿ ತಮಗೆ ಬೆಂಬಲಿಸಿ, ಮತ ನೀಡುವಂತೆ ಮಹಿಳೆಯರು, ಪ್ರಯಾಣಿಕರಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದರು.