ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ ಲಿಂಗ ನಿರ್ಧಾರಿತ ವೀರ್ಯ ನಳಿಕೆಗಳ ಮೂಲಕ ಹೆಣ್ಣು ಕರುಗಳ ಜನನ ಪ್ರಮಾಣ ಹೆಚ್ಚಳಗೊಳಿಸುವ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.ನಜರ್ಬಾದಿನ ಮಿನಿ ವಿಧಾನಸೌಧದಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಶು ವೈದ್ಯಾಧಿಕಾರಿ ಡಾ. ಪೂರ್ಣಾನಂದ ಈ ಮಾಹಿತಿ ನೀಡಿದರು.
ಈ ಯೋಜನೆಯಡಿ ಹಸುಗಳಿಗೆ ಲಿಂಗ ನಿರ್ಧಾರತ ವೀರ್ಯ ನಳಿಕೆಗಳನ್ನು ಬಿಡಲಾಗುವುದು. ಇದಕ್ಕೆ ಫಲಾನುಭವಿಯಿಂದ 250 ರೂ. ಪಡೆಯಲಾಗುತ್ತದೆ. ಇದಕ್ಕೆ ಸರ್ಕಾರ 400 ರೂ. ಸಬ್ಸಿಡಿ ನೀಡುತ್ತದೆ. ಈ ವೀರ್ಯದಿಂದ ಶೇ. 90 ಭಾಗ ಹೆಣ್ಣು ಕರುಗಳೇ ಜನಿಸುತ್ತವೆ. ಶೇ. 10ರಷ್ಟು ಮಾತ್ರ ವಿಫಲವಾಗುವ ಸಾಧ್ಯತೆ ಇದೆ. ಒಮ್ಮೆ ವಿಫಲವಾದರೆ ಅದೇ ಫಲಾನುಭವಿಯ ಹಸುವಿಗೆ ಮತ್ತೊಮ್ಮೆ ವೀರ್ಯ ನಳಿಕೆ ಹಾಕಲಾಗುವುದು. ಇದಕ್ಕೂ ಫಲಾನುಭವಿ 250 ರೂ. ಪಾವತಿಸಬೇಕು. ಇದೂ ವಿಫಲವಾದರೆ ಫಲಾನುಭವಿಗೆ 500 ರೂ. ಹಿಂದಿರುಗಿಸುವುದಾಗಿ ಅವರು ಹೇಳಿದರು.ಈ ಯೋಜನೆಯಡಿ ಶೇ. 116 ರಷ್ಟು ಪ್ರಗತಿ ಸಾಧಿಸಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ನಾಟಿ ಕೋಳಿ ವಿತರಣೆಗೆ ಆಯ್ಕೆನಾಟಿ ಕೋಳಿ ಮರಿಗಳನ್ನು ರೈತರಿಗೆ ವಿತರಿಸುವ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಜು. 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರ ವ್ಯಾಪ್ತಿಯ ಬಿಳಿಗೆರೆಯಲ್ಲಿ ಸಾಂಕೇತಿಕವಾಗಿ ನಾಟಿ ಕೋಳಿ ಮರಿ ವಿತರಿಸುವ ಸಾಧ್ಯತೆ ಇದೆ. ಒಟ್ಟಾರೆ ವರುಣ ಕ್ಷೇತ್ರ ವ್ಯಾಪ್ತಿಯ ಮೈಸೂರು, ನಂಜನಗೂಡು ಮತ್ತು ಟಿ. ನರಸೀಪುರ ಸೇರಿಸಿ ಒಟ್ಟು 2 ಸಾವಿರ ಮಂದಿ ಫಲಾನುಭವಿಗಳ ಆಯ್ಕೆ ಮಾಡಬೇಕು. ಈ ಪೈಕಿ ಮೈಸೂರು ತಾಲೂಕಿನಿಂದ 550 ಮಂದಿ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.
5 ವಾರದ 20 ಕೋಳಿ ಮರಿಗಳನ್ನು ಫಲಾನುಭವಿಗೆ ವಿತರಿಸಲಾಗುತ್ತದೆ. ಕುಕ್ಕಟ ಮಹಾಮಂಡಳವು ಇದಕ್ಕೆ ನೆರವಾಗಿದ್ದು, ರೈತ ಫಲಾನುಭವಿಗಳು ಇದರ ಲಾಭ ಪಡೆಯಬಹುದು ಎಂದರು.ಉಳಿದಂತೆ ಗರ್ಭ ತಪಾಸಣೆ, ಕಾಲುಬಾಯಿ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಕಾಲುಬಾಯಿ ರೋಗಕ್ಕೆ ಲಸಿಕೆ ಕೊರತೆ ಇತ್ತು. ಕಳೆದ ವರ್ಷದಿಂದ ಲಸಿಕೆ ಪೂರೈಕೆ ಆಗುತ್ತಿದ್ದು, ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ. ಅಂತೆಯೇ ಚರ್ಮಗಂಟು ರೋಗಕ್ಕೂ ಅಗತ್ಯವಿರುವ ಲಸಿಕೆ ವಿತರಿಸುತ್ತಿರುವುದಾಗಿ ಅವರು ವಿವರಿಸಿದರು.
ಪ್ರಸಕ್ತ ಸಾಲಿನ ಆಯವ್ಯಯಕ್ಕೆ ಒಪ್ಪಿಗೆ2024-25ನೇ ಸಾಲಿನ ಆಯವ್ಯಯಕ್ಕೆ ಮೈಸೂರು ತಾಪಂ ಅನುಮೋದನೆ ನೀಡಿತು. ಶಿಕ್ಷಣ, ಆರೋಗ್ಯ, ಆಯುಷ್, ನೀರು ಪೂರೈಕೆ ಮತ್ತು ನೈರ್ಮಲ್ಯ, ಪ.ಜಾತಿ, ಪ.ಪಂಗಡ ಕಲ್ಯಾಣ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಮುಂತಾದವುಗಳಿಗೆ ಒಟ್ಟು 291.33 ಕೋಟಿ ಬಜೆಟ್ ಗೆ ಅನುಮೋದನೆ ನೀಡಲಾಯಿತು. ಸಹಾಯಕ ಲೆಕ್ಕಾಧಿಕಾರಿ ಪ್ರೇಮಾ ವಿಷಯ ಪ್ರಸ್ತಾಪಿಸಿದರು.
ಗೊಬ್ಬರ, ಬೀಜದ ಕೊರತೆ ಇಲ್ಲತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೆಸರು, ಉದ್ದು ಮುಂತಾದ ಬೆಳೆಯನ್ನು 10,413 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ ಗೊಬ್ಬರ ನೀಡಲಾಗಿದೆ. ಬಿತ್ತನೆ ಬೀಜದ ಕೊರತೆ ಇಲ್ಲ. ಕೀಟ ಬಾಧೆಗೆ ಬೇಕಾದ ಸೌಲಭ್ಯವನ್ನೂ ನೀಡಿರುವುದಾಗಿ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಸವಿತಾ ಸಭೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಎಂ.ಎಸ್. ಗಿರೀಧರ್, ತಾಲೂಕು ಯೋಜನಾಧಿಕಾರಿ ಸುರೇಶ್ ಇದ್ದರು.---
ಬಾಕ್ಸ್ ಸುದ್ದಿಸಭೆ ನೀರಸವಾಗಿತ್ತು
ತಾಪಂ ಸಮಾನ್ಯ ಸಭೆ ಒಂದರ್ಥದಲ್ಲಿ ಔಪಚಾರಿಕವಾಗಿ ನಡೆಯಿತು. ಸಭೆ ಅಷ್ಟು ಗಂಭೀರವಾಗಿ ನಡೆಯಲಿಲ್ಲ. ಅಧಿಕಾರಿಗಳು ತಮ್ಮಷ್ಟಕ್ಕೆ ತಾವು ಮಾತನಾಡುತ್ತ ಕುಳಿತಿದ್ದರು. ತಮ್ಮ ಇಲಾಖೆಯ ವಿಷಯ ಬಂದಾಗ ಒಂದಷ್ಟು ಮಾಹಿತಿ ಹೇಳಿ ಕೆಲವರು ಹೋದರು.10.30ಕ್ಕೆ ಆರಂಭವಾಗಬೇಕಿದ್ದ ಸಭೆ, ಹೆಚ್ಚು ಕಡಿಮೆ 11.30ಕ್ಕೆ ನಾಡಗೀತೆಯೊಂದಿಗೆ ಆರಂಭವಾಯಿತು.