ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸಾಹಿತ್ಯ ಕೃಷಿಯಲ್ಲಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಿದ ಶ್ರೇಷ್ಠಕವಿ ಡಾ.ಪುತಿನ ಎಂದು ಡಾ.ಚಿಂತಾಮಣಿ ಕೂಡ್ಲೆಕೆರೆ ಬಣ್ಣಿಸಿದರು.ಮೇಲುಕೋಟೆ ಪುತಿನ ಕಲಾ ಮಂದಿರದಲ್ಲಿ ಕವಿ ಪುತಿನ ಪುಣ್ಯಸ್ಮರಣೆ ಅಂಗವಾಗಿ ಟ್ರಸ್ಟ್ ಹಮ್ಮಿಕೊಂಡಿದ್ದ ಕವಿ ಕನ್ನಡಿ ಪುಸ್ತಕ ಲೋಕಾರ್ಪಣೆ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮೇಲುಕೋಟೆಯ ಪರಿಸರ, ಸಂಸ್ಕೃತಿ, ಆಚಾರ-ವಿಚಾರಗಳು, ಧಾರ್ಮಿಕ ಅನುಷ್ಠಾನಗಳು, ಉತ್ಸವಗಳು ಕವಿ ಪುತಿನರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಆಚಾರ ವಿಚಾರ ಹಾಗೂ ಪರಂಪರೆ ಅನಾವರಣದ ಜೊತೆ ಕವಿಯ ಸಾಹಿತ್ಯದಲ್ಲಿ ಮಾನವೀಯ ಮೌಲ್ಯವನ್ನು ಹೆಚ್ಚಾಗಿ ಕಾಣಬಹುದು ಎಂದರು.ನಾಡಿನ ಮಹೋನ್ನತ ಕವಿಯ ಸಾಹಿತ್ಯದ ಸಾರಭೂತವಾಗಿ ಕವಿಯ ಕನ್ನಡಿ ರಚಿಸುವ ಅವಕಾಶ ದೊರೆತು ಕೃತಿ ಲೋಕಾರ್ಪಣೆಯಾಗಿರುವುದು ನನಗೆ ದೊರೆತ ಬಹುದೊಡ್ಡ ಸೌಭಾಗ್ಯವೆಂದೇ ಭಾವಿಸಿದ್ದೇನೆ. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಕವಿ ಪುತಿನ ಬಗ್ಗೆ ತಿಳಿದುಕೊಳ್ಳಬೇಕು. ಅವರ ಸರಳ ಸಾಹಿತ್ಯ ಕೃತಿಗಳನ್ನು ಓದಿ, ಕವನಗಳನ್ನು ಕೇಳಬೇಕು. ಇದರಿಂದ ಮಾನವೀಯ ಮೌಲ್ಯ ಹಾಗೂ ಪರಂಪರೆಯ ಬಗ್ಗೆ ಅಭಿಮಾನ ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಪುತಿನ ಟ್ರಸ್ಟ್ ಅಧ್ಯಕ್ಷ ವಿದ್ವಾನ್ ಡಿ.ಬಾಲಕೃಷ್ಣ ಮಾತನಾಡಿ, ಸಾಹಿತ್ಯಾಸಕ್ತರು ಕವಿ ಪು.ತಿ.ನರ ರಸಗ್ರಂಥ ಮತ್ತು ಕವಿಯ ಕನ್ನಡಿ ಪುಸ್ತಕ ಓದಬೇಕು. ಕವಿಯ ಪರಿಚಯ ಇಂದಿನ ಜನಾಂಗಕ್ಕೆ ಅದರಲ್ಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಲುಪಬೇಕು ಎಂದರು.ಇದೇ ಪ್ರಥಮ ಬಾರಿಗೆ ಪ್ರೌಢಶಾಲಾ ಮಕ್ಕಳಿಗೆ ಪುತಿನ ಕುರಿತು ಭಾಷಣ ಹಾಗೂ ಭಾವಗೀತೆಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಪುತಿನ ದಹನ ಸ್ಥಳವನ್ನು ಸರ್ಕಾರಿ ಶಾಲೆ ಸಹಯೋಗದಲ್ಲಿ ನೆನಪಿನ ಸ್ಮರಣೆಯಾಗಿ ಉಳಿಸಿಕೊಳ್ಳಲಾಗುತ್ತದೆ. ಕವಿ ಬದುಕಿದ್ದಾಗಲೇ ರಚಿತವಾದ ಪುತಿನ ಟ್ರಸ್ಟ್ ಮೇಲುಕೋಟೆ ಮನೆಯನ್ನು ಸಾಂಸ್ಕೃತಿಕ ಸ್ಮರಣೆಯಾಗಿ ಉಳಿಸಿಕೊಂಡು ರಂಗಮಂದಿರ ಸಹ ನಿರ್ಮಿಸಿದೆ ಎಂದರು.
ಈವರೆಗೆ ಪುತಿನರ 14 ಪುಸ್ತಕಗಳು 6 ದ್ವನಿಸುರಳಿಗಳನ್ನು ಬಿಡುಗಡೆ ಮಾಡಿದೆ. ಈಚೆಗೆ ಕಲಾಮಂದಿರವನ್ನು ನವೀಕರಣ ಮಾಡಲಾಗಿದೆ. ಒಟ್ಟಾರೆ ಪುತಿನ ಆಶಯ ಈಡೇರಿಸಲು ಶಕ್ತಿಮೀರಿ ಶ್ರಮಿಸಲಾಗುತ್ತಿದೆ. ಮುಂಬರುವ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಪುತಿನರ ಕೃತಿಗಳನ್ನು ರಿಯಾಯ್ತಿ ದರದಲ್ಲಿ ಸಾಹಿತ್ಯಾಸಕ್ತರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.ಟ್ರಸ್ಟ್ ಗೌರವಾಧ್ಯಕ್ಷ ಕವಿ ಡಾ.ಎಚ್.ಎಸ್.ವಿ ಅವರ ಆಶಯದಂತೆ ಸರಳವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ.ಆನಂದರಾಮ ಉಪಾಧ್ಯ, ಸದಸ್ಯರಾದ ಡಾ.ಎಚ್.ವಿ. ರವೀಶ್, ರಂಗಕರ್ಮಿ ಡಾ.ಬಿ.ವಿ. ರಾಜಾರಾಂ, ಕೆ.ಎನ್ ರವಿ, ಟ್ರಸ್ಟ್ ವ್ಯವಸ್ಥಾಪಕ ಸಂಜಯ್, ಸ್ಥಳೀಯ ಕಲಾಮಂದಿರ ವ್ಯವಸ್ಥಾಪಕ ವೆಂಕಟೇಶ್, ಪರಿಸರ ತಜ್ಞ ಸಂತೋಷ್ ಕೌಲಗಿ, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್ ಭಾಗವಹಿಸಿದ್ದರು.
ಇದೇ ವೇಳೆ ಪುತಿನ ಕುರಿತ ಕವಿಯ ಕನ್ನಡಿ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಭಾಷಣ ಸ್ಪರ್ಧೆಯಲ್ಲಿ ಮಹದೇಶ್ವರ ಅಂಬೇಡ್ಕರ್ ವಸತಿಶಾಲೆ ವಿದ್ಯಾರ್ಥಿನಿ ಮೌಲ್ಯಶ್ರೀ ಪ್ರಥಮ, ಯದುಶೈಲ ಪ್ರೌಢಶಾಲೆಯ ಖುಷ್ಬು ದ್ವೀತಿಯ, ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಚರಣ ತೃತೀಯ ಬಹುಮಾನ ಪಡೆದರೇ, ಭಾವಗೀತೆಯಲ್ಲಿ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರಥಮ ಜಲಜಾಕ್ಷಿ, ಅಭಿಲಾಷ್ ತೃತೀಯ, ಮಹದೇಶ್ವರ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿನಿ ಸಿಂಚನ ದ್ವಿತೀಯ ಬಹುಮಾನ ಪಡೆದರು. ವಿಜೇತರಿಗೆ ಕವಿಯ ಕನ್ನಡಿ ಕೃತಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.