ಧಾರವಾಡ: ಡಾ. ಆರ್.ಸಿ. ಹಿರೇಮಠ ಒಬ್ಬ ಶ್ರೇಷ್ಠ ಭಾಷಾ ವಿಜ್ಞಾನಿಗಳು ಮಾತ್ರವಲ್ಲ, ಶರಣ ಸಂಸ್ಕೃತಿಯ ಚಿಂತಕರೂ ಆಗಿದ್ದರು. ಒಂದು ರೀತಿ ಅವರು ನಡೆದಾಡುವ ವಿಶ್ವಕೋಶದಂತಿದ್ದರು. ಅವರು ಆಧುನಿಕ ಕನ್ನಡ ಸಾಹಿತ್ಯದ ಸೀಮಾಪುರುಷರು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪುರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಡಾ. ಆರ್.ಸಿ. ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಡಾ. ಆರ್.ಸಿ. ಹಿರೇಮಠ ಅವರ ಬದುಕು-ಬರಹ’ ವಿಷಯ ಕುರಿತು ಉಪನ್ಯಾಸ ನೀಡಿದರು.ಅವರದು ಬಡತನದಲ್ಲಿ ಬೆಂದು ಅರಳಿದ ಬದುಕು. ಬೋಧನೆಯನ್ನು ಒಂದು ದೊಡ್ಡ ಸಾಧನೆಯನ್ನಾಗಿ ಮಾಡಿದವರು. ಭಾಷಾ ವಿಜ್ಞಾನದಲ್ಲಿ ಪ್ರಖಾಂಡ ಪಂಡಿತರು. ಅವರ ಸಂಪಾದನೆ, ಅನುವಾದ, ಸಂಶೋಧಿತ ಸೃಜನಶೀಲ ಕೃತಿಗಳ ಸಂಖ್ಯೆ 70ಕ್ಕೂ ಅಧಿಕ. ಅವರ ಆತ್ಮಕಥೆ ‘ಉರಿ ಬರಲಿ-ಸಿರಿ ಬರಲಿ’ ಕನ್ನಡದ ಅತ್ಯುತ್ತಮ ಆತ್ಮಕಥೆಯಾಗಿ ಹೆಗ್ಗಳಿಕೆ ಹೊಂದಿದೆ. ಅವರೊಬ್ಬ ತತ್ವನಿಷ್ಠ, ಸತ್ಯನಿಷ್ಠ, ನಿಗರ್ವಿಯಾದ ಸಂಶೊಧಕರಾಗಿದ್ದರು ಎಂದರು..
ಯಾರ ಪ್ರಭಾವಕ್ಕೂ ಒಳಗಾಗದ ಡಾ. ಆರ್.ಸಿ. ಹಿರೇಮಠರು ಕವಿವಿಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿದವರು. ಕನ್ನಡ ಅಧ್ಯಯನ ಪೀಠ ಕಟ್ಟಿ ಬೆಳೆಸುವಲ್ಲಿ ಅವರ ಶ್ರದ್ಧೆ ಪ್ರಾಮಾಣಿಕತೆಯು ಅನನ್ಯ. ಸುಮಾರು 40ಕ್ಕೂ ಹೆಚ್ಚು ಪಿ.ಎಚ್.ಡಿ. ಪ್ರಬಂಧಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಸಂಶೋಧನೆ ಸಂಪಾದನೆ ಅವರ ಆಸಕ್ತಿ ಕ್ಷೇತ್ರಗಳಾಗಿದ್ದವು. ಅಧ್ಯಾಪನದ ಜೊತೆ ಅಧ್ಯಯನಶೀಲತೆ ಅವರ ವಿಶೇಷ ಗುಣ. ಕುಲಪತಿಗಳಾಗಿ ಕವಿವಿಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದರು. ಯಾವ ಟಿಪ್ಪಣಿ ಇಲ್ಲದೇ ಕನ್ನಡ ಸಾಹಿತ್ಯದ ಬಗ್ಗೆ ನಿರರ್ಗಳವಾಗಿ ಮಾತಾಡಬಲ್ಲ ಪಾಂಡಿತ್ಯ ದ್ರುವತಾರೆಯಾಗಿದ್ದರು ಎಂದು ಸ್ಮರಿಸಿದರು.ಅಧ್ಯಕ್ಷತೆ ವಹಿಸಿದ್ದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಡಾ. ಆರ್.ಸಿ. ಹಿರೇಮಠರ ಸಾಧನೆಗೆ ಬಡತನ ಎಂದೂ ಅಡ್ಡಿ ಬರಲಿಲ್ಲ. ಬಹುಮುಖ ಪ್ರತಿಭಾ ಸಂಪನ್ನರಾದ ಅವರು ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದರು. ಹಸ್ತಪ್ರತಿ ಭಂಡಾರ ಸ್ಥಾಪಿಸಿ 10 ಸಾವಿರಕ್ಕೂ ಹೆಚ್ಚು ಹಸ್ತಪ್ರತಿ ಸಂಗ್ರಹಿಸಿದರು ಎಂದು ಹೇಳಿದರು. ಸಹ ಕಾರ್ಯದರ್ಶಿ ಶಂಕರ ಕುಂಬಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ದತ್ತಿ ದಾನಿ ಡಾ. ಶಶಿಕಲಾ ಹಿರೇಮಠ, ಬಸಯ್ಯ ಶಿರೋಳ, ನಿಂಗಣ್ಣ ಕುಂಟಿ, ಎಂ.ಎಂ. ಚಿಕ್ಕಮಠ, ಇಂದುಧರ ಹಿರೇಮಠ, ಸೀತಾರಾಮ ಶೆಟ್ಟಿ, ಮಹಾಂತೇಶ ನರೇಗಲ್, ಅಶೋಕ ನಿಡವಣಿ, ಎಸ್.ಕೆ. ಕುಂದರಗಿ, ರಾಮಚಂದ್ರ ಗೆದ್ದೆಣ್ಣವರ, ಸಂಗಪ್ಪ ಗಾಳಿ ಇದ್ದರು.