ಧಾರವಾಡ: ರಾಜಕುಮಾರ ಕೇವಲ ವ್ಯಕ್ತಿ, ನಟ ಅಷ್ಟೆ ಅಲ್ಲ. ಅವರೊಬ್ಬ ಪರಿಪೂರ್ಣ ವ್ಯಕ್ತಿತ್ವದ ಆದರ್ಶ ಮುನುಷ್ಯ. ಕನ್ನಡ ನಾಡು, ನುಡಿ, ಭಾಷೆ, ಭೂಮಿಯ ರಕ್ಷಣೆಗಾಗಿ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.
ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತವು ಗುರುವಾರ ಆಯೋಜಿಸಿದ್ದ ವರನಟ ಡಾ. ರಾಜಕುಮಾರ ಅವರ 97ನೇ ಜನ್ಮದಿನಾಚರಣೆ ಉದ್ಘಾಟಿಸಿದ ಅವರು, ಗೋಕಾಕ ಚಳುವಳಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ನಟ ಸಾರ್ವಭೌಮ, ರಾಜಕುಮಾರ ಅವರ ಭಾಷಾಭಿಮಾನ ನಮಗೆಲ್ಲ ಸ್ಪೂರ್ತಿಯ ಚಿಲುಮೆ ಎಂದರು.ಡಾ. ರಾಜ್ ಜೀವನದುದ್ದಕ್ಕೂ ಕನ್ನಡ ಚಿತ್ರ ಹೊರತುಪಡಿಸಿ ಬೇರೆ ಸಿನಿಮಾ ಮಾಡಿಲ್ಲ. ಇದು ಅವರ ಭಾಷಾಭಿಮಾನ ತೋರಿಸುತ್ತದೆ. ಅಪಹರಣ ಘಟನೆ ಜರುಗದಿದ್ದರೆ ಅವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರುತ್ತಿದ್ದರು ಎಂದರು.
ಹಿರಿಯ ನ್ಯಾಯವಾದಿ, ಕಲಾವಿದ ಸೋಮಶೇಖರ ಜಾಡರ ವಿಶೇಷ ಉಪನ್ಯಾಸ ನೀಡಿ, ರಾಜ್ಯ ಸರ್ಕಾರ ಡಾ. ರಾಜಕುಮಾರ ಅವರ ಜಯಂತಿ ಆಚರಿಸುವುದು ಶ್ಲಾಘನೀಯ ಎಂದರು. ವರ್ಷಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ನೆನಪಿಸಿಕೊಳ್ಳುವ ವ್ಯಕ್ತಿ ಡಾ. ರಾಜ್ ಅವರು ಅಲ್ಲ. ಅವರು ನಟಿಸಿದ ಪಾತ್ರಗಳು, ಚಿತ್ರಗಳು, ಗೀತೆಗಳು, ಪದೇ ಪದೇ ನೆನಪಿಗೆ ಬರುತ್ತವೆ. ಅವರ ಸರಳ ಸ್ವಭಾವ, ಸಜ್ಜನಿಕೆ, ಪ್ರಾಮಾಣಿಕತೆ ಎಲ್ಲ ಸಮುದಾಯದ ಪ್ರೀತಿಗೆ ಪಾತ್ರವಾಗಿತ್ತು ಎಂದರು.
ಈ ನಿಮಿತ್ತ ಆಯೋಜಿಸಿದ್ದ ಡಾ. ರಾಜಕುಮಾರ ಗೀತ ಗಾಯನ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಭುವನೇಶ ಪಾಟೀಲ ಡಾ. ರಾಜಕುಮಾರ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ಹಾಡು ಹಾಡುವ ಮೂಲಕ ಚಾಲನೆ ನೀಡಿದರು. ಪ್ರೌಢಶಾಲಾ ಶಿಕ್ಷಕ ಬಾಬಾಜಾನ್ ಮುಲ್ಲಾ, ಬಿಆರ್‌ಪಿ ಜಯಲಕ್ಷ್ಮಿ ಎಚ್, ಯುವ ಗಾಯಕಿ ಅಕ್ಸಾ ಮುಲ್ಲಾ ಹಾಗೂ ಕಂದಾಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಸೊಲಗಿ ಡಾ. ರಾಜಕುಮಾರ ಗೀತೆಗಳಾದ ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ ಹಾಲಿನ ಮಳೆಯೋ, ಸನಾದಿ ಅಪ್ಪಣ್ಣ ಚಿತ್ರದ ಕರೆದರು ಕೇಳದೆ ಸುಂದರನೆ, ದೇವತಾ ಮನುಷ್ಯ ಚಿತ್ರದ ಹೃದಯದಲ್ಲಿ ಇದೇನಿದು, ಕವಿರತ್ನ ಕಾಳಿದಾಸ ಚಿತ್ರದ ಓ. ಪ್ರಿಯತಮಾ ಸೇರಿದಂತೆ ಅನೇಕ ಚಿತ್ರಗೀತೆಗಳ ಹಾಡಿ ಗಾನದ ಸುಧೆ ಹರಿಸಿದರು.