ಕನ್ನಡಪ್ರಭ ವಾರ್ತೆ ಮಂಡ್ಯ
ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸರಳತೆ, ಸಜ್ಜನಿಕೆ ವ್ಯಕ್ತಿತ್ವ ಹಾಗೂ ಅವರ ಕೊಡುಗೆಗಳು ಕನ್ನಡಿಗರ ಜನಮಾನಸದಲ್ಲಿ ಸದಾಕಾಲ ಚಿರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ನಡೆದ ವರನಟ ಡಾ.ರಾಜ್ ಕುಮಾರ್ ಅವರ 97 ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್. ದೈಹಿಕವಾಗಿ ಡಾ.ರಾಜ್ ಕುಮಾರ್ ನಮ್ಮನ್ನು ಆಗಲಿದ್ದರು ಅವರ ಕೊಡುಗೆಗಳು, ಆದರ್ಶಗಳು, ಮೌಲ್ಯ, ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದರು.ಕನ್ನಡ ಭಾಷೆ ಮೇಲೆ ಇದ್ದಂತ ಅಭಿಮಾನ ನಾವ್ಯಾರೂ ಮರೆಯುವಂತಿಲ್ಲ. ಪ್ರತಿಭೆ ಇದ್ದವರು ಯಾವ ಮಟ್ಟದಲ್ಲಿ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ನಿದರ್ಶನ ಡಾ.ರಾಜ್. ಅವರು ನಟಿಸಿದ ಎಲ್ಲಾ ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಹೊಂದಿದ್ದ ಡಾ.ರಾಜ್ ಕುರಿತು ಕನ್ನಡಿಗರಿಗೆ ಹೇಳುವ ಅಗತ್ಯವಿಲ್ಲ ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಗುರುರಾಜ್ ಪ್ರಭು ಮಾತನಾಡಿ, ಕನ್ನಡ ನಾಡು ನುಡಿ ಮತ್ತು ಕನ್ನಡ ಚಲನಚಿತ್ರರಂಗದ ಇತಿಹಾಸ ನೋಡಿದರೆ ಡಾ. ರಾಜ್ ಕುಮಾರ್ ಉತ್ತುಂಗದಲ್ಲಿ ಕಾಣುತ್ತಾರೆ. ಜಗತ್ತಿನ ದೊಡ್ಡ ದೊಡ್ಡ ದೇಶಗಳಲ್ಲಿ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳು ಸಂಘಗಳನ್ನು ಕಟ್ಟಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅಮೆರಿಕಾದ ಅಕ್ಕ ಸಮ್ಮೇಳನದಲ್ಲಿ ಡಾ. ರಾಜ್ ಕುಮಾರ್ ಅವರು ಕುರಿತು ವಿಚಾರಗೋಷ್ಠಿಗಳನ್ನು ನಡೆಯುತ್ತಿವೆ ಎಂದರು.ಕಾಲೇಜು ಇತಿಹಾಸ ಪ್ರಾಧ್ಯಾಪಕ ಕಾಂತರಾಜು ಮಾತನಾಡಿ, ಡಾ.ರಾಜಕುಮಾರ್ ಅಭಿನಯಸದೇ ಇರುವ ಯಾವುದೇ ಪಾತ್ರಗಳಿಲ್ಲ. ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಮೆರಗು ತುಂಬುತ್ತಿದ್ದರು. ಕನ್ನಡ ನಾಡು ನುಡಿ ವಿಚಾರದಲ್ಲಿ ಗಟ್ಟಿತನದ ನಿಲುವು ಗೋಕಾಕ್ ಚಳವಳಿಗೆ ಶಕ್ತಿ ಲಕ್ಷೋಪಲಕ್ಷ ಮಂದಿ ಚಳವಳಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದರು ಎಂದರು.
ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ್ ಮಾತನಾಡಿ, ತಮ್ಮ ಉದ್ಯೋಗವನ್ನು ಶ್ರದ್ಧೆಯಿಂದ ಪ್ರೀತಿಸಿ ಕೆಲಸ ಮಾಡುವವರು ಉನ್ನತ ಸ್ಥಾನ ನ ಅಲಂಕರಿಸಬಹುದು ಎಂಬುದಕ್ಕೆ ನೈಜ ಉದಾಹರಣೆ ಡಾ. ರಾಜಕುಮಾರ್ ಭಿಕ್ಷುಕನಿಂದ ಬಾಂಡ್ ಶೈಲಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದರು.ಅರಿವು ಬೋಧಿ ಫೌಂಡೇಶನ್ ಅಧ್ಯಕ್ಷ ಗಣೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಶ್ಚಯ್ ಜೈನ್, ಮನ್ಸೂರ್ ಪಾಷಾ, ಕೃಷ್ಣೇಗೌಡ ಅವರು ಡಾ. ರಾಜಕುಮಾರ್ ಅಭಿನಯಿಸಿದ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್ ನಿರ್ಮಲ, ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ.ಶಿವರಾಜ್, ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ನಿಂಗರಾಜು, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರವೀಂದ್ರ, ನಗರಸಭೆ ಮಾಜಿ ಸದಸ್ಯ ಆನಂದ್, ಅನನ್ಯ ಆಟ್ಸ್ ನ ಅನುಪಮಾ ಉಪಸ್ಥಿತರಿದ್ದರು.