ದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಿದ್ದ ಡಾ.ಸಿಂಗ್

KannadaprabhaNewsNetwork | Published : Dec 28, 2024 1:02 AM

ಸಾರಾಂಶ

ದೇಶದ ಆರ್ಥಿಕತೆ ಸುಧಾರಿಸಿ, ದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಿದ್ದ ಸಿಂಗ್ ಅವರನ್ನು ಕಳೆದು ಕೊಂಡಿರುವ ಭಾರತ ದೇಶಕ್ಕೆ ತುಂಬಲಾರದ ಹಾನಿಯಾಗಿದೆ

ಕನ್ನಡಪ್ರಭ ವಾರ್ತೆ ಜಮಖಂಡಿ

ದೇಶದ ಆರ್ಥಿಕತೆ ಸುಧಾರಿಸಿ, ದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಿದ್ದ ಸಿಂಗ್ ಅವರನ್ನು ಕಳೆದು ಕೊಂಡಿರುವ ಭಾರತ ದೇಶಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಸ್.ಸಿಂಧೂರ ಹೇಳಿದರು.

ನಗರದ ಹನುಮಾನ್‌ ಚೌಕ್‌ನಲ್ಲಿ ಶುಕ್ರವಾರ ಸಂಜೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, 10 ವರ್ಷಗಳ ಕಾಲ ಪ್ರಧಾನಿಯಾಗಿದ್ದ ಸಿಂಗ್‌ರು ದೇಶವನ್ನುಅಭಿವೃದ್ಧಿ ಪಥದಲ್ಲಿ ಸಾಗಿಸಿದರು. ಗ್ರಾಪಂಗೆ ವಿಶೇಷ ಬಲ ತುಂಬುವ ಮೂಲಕ ಗ್ರಾಮೀಣ ಭಾರತದ ಅಭಿವೃದ್ಧಿಗೆ ಮುಂದಾದರು ಎಂದರು.

ನ್ಯಾಯವಾದಿ ಎನ್.ಎಸ್.ದೇವರವರ ಮಾತನಾಡಿ, ವಿಶ್ವಮೆಚ್ಚಿದ ಆರ್ಥಿಕ ತಜ್ಞ, ಮನಮೋಹನ್ ಸಿಂಗ್ ಅವರನ್ನು ಕಳೆದು ಕೊಂಡಿದ್ದು ತುಂಬಲಾರದ ನಷ್ಟವಾಗಿದೆ. ಸಾಧಾರಣ ಕುಟುಂಬದಿಂದ ಬಂದ ಸಿಂಗ್ ಅವರು, ಗವರ್ನರ್‌ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರು, ಪ್ರಧಾನಿಗಳ ಆರ್ಥಿಕ ಸಲಹೆಗಾರರಾಗಿ ಅನೇಕ ಹುದ್ಧೆ ನಿಭಾಯಿಸಿದ್ದರು. ದೇಶ ಕಂಡ ಅತ್ಯಂತ ಪ್ರಭಾವಿ ಪ್ರಧಾನ ಮಂತ್ರಿಗಳಾಗಿದ್ದರು. ಇವರ ಆರ್ಥಿಕ ನೀತಿಗಳನ್ನು ಇಂದಿನ ಸರ್ಕಾರ ಅನುಸರಿಸುತ್ತಿದೆ. ಪ್ರಧಾನಿ ಮೋದಿ ರವರು ಹಲವು ಬಾರಿ ಸಿಂಗ್‌ರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುತ್ತಿದ್ದರು ಇಂಥಹ ಮಹಾನ್ ಶಾಸ್ತ್ರಜ್ಞರನ್ನು ಕಳೆದುಕೊಂಡಿದ್ದು ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಹೇಳಿದರು.

ರವಿ ಅಡವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮನಮೋಹನ ಸಿಂಗ್ ಅವರನ್ನು ಮೌನಿ ಎಂದು ವಿಪಕ್ಷಗಳು ಟೀಕಿಸಿದರು. ತಮ್ಮ ಕೆಲಸಗಳ ಮೂಲಕ ತಕ್ಕ ಉತ್ತರ ನೀಡಿದ ಧೀಮಂತ ತಜ್ಞ ಎಂದು ಬಣ್ಣಿಸಿದರು. ಮಾಜಿ ಪ್ರಧಾನಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮೇಣದ ಬತ್ತಿ ಬೆಳಗಿಸಿ ಮನಮೋಹನ ಸಿಂಗ್ ಅಮರ ರಹೆ ಎಂದು ಘೋಷಣೆ ಕೂಗುವ ಮೂಲಕ ಸಂತಾಪ ಸೂಚಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಸದಸ್ಯರಾದ ಈಶ್ವರ ವಾಳೆಣ್ಣವರ, ಸಿದ್ದು ಮೀಸಿ, ದಿಲಾವರ ಶಿರೋಳ, ರಫೀಕ್ ಬಾರಿಗಡ್ಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಶ ಕೋಳಿ, ದಶರಥ ವಗ್ಗೆಣ್ಣವರ, ಬಾಳು ಮುಚ್ಚಂಡಿ, ಆಜಮ ಮಹಾತ್, ಬಸವರಾಜ ಹರಕಂಗಿ, ಪ್ರಹಲ್ಲಾದಕುಲಕರ್ಣಿ, ಅಬುಬಕರ ಕುಡಚಿ, ವಿಶಾಲ, ಪ್ರೇಮ ಸೇರಿದಂತೆ ಹಲವರಿದ್ದರು.

Share this article