ಕನ್ನಡಪ್ರಭ ವಾರ್ತೆ ಮೈಸೂರು
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿದ್ದರಾಮಯ್ಯ ಅವರನ್ನು ಹೋಲಿಸಿದ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಭೀಮ್ ಸೇನೆ ಪದಾಧಿಕಾರಿಗಳು ನಗರದ ಪುರಭವನ ಆವರಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಭಾನುವಾರ ಪ್ರತಿಭಟಿಸಿದರು.ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿರೋಧ ಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಅವರನ್ನು ತುಳಿದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ನಾಲ್ವಡಿಯವರಿಗೆ ಯಾವುದೇ ರೀತಿಯಲ್ಲಿ ಸರಿಸಾಟಿಯಾಗಬಲ್ಲ ಯೋಗ್ಯತೆ ಇಲ್ಲ ಎಂದು ಅವರು ಟೀಕಿಸಿದರು.
1906 ರಲ್ಲಿ ಇಂಗ್ಲೆಂಡಿನ ಪ್ರತಿಕೆಯೊಂದು ನಾಲ್ವಡಿ ಅವರ ಆಡಳಿತವನ್ನು ಭಾರತದಲ್ಲೇ ಮಾದರಿ ಸಂಸ್ಥಾನವೆಂದು ಹೊಗಳಿದೆ. 1938 ರಲ್ಲಿ ಬ್ರಿಟಾನಿಕ ಗ್ರಂಥದಲ್ಲಿ ದಾಖಲಾಗಿರುವ ಪ್ರಕಾರ ಭರತ ಖಂಡದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿ ಮುಂದುವರಿದ ಸಂಸ್ಥಾನ ಮೈಸೂರು ಎಂದು ಹೇಳಿರುವುದು ನಾಲ್ವಡಿ ಅವರ ಆಡಳಿತವನ್ನು. ಇದನ್ನು ಅರ್ಥ ಮಾಡಿಕೊಳ್ಳಬೇಕು.ಹಿಂದುಳಿದ ಜನಾಂಗವನ್ನು ತುಳಿದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಹೋಲಿಕೆ ಮಾಡಿರುವುದು ಅಕ್ಷಮ್ಯ. ನಾಲ್ವಡಿ ಅವರು ಕೆ.ಆರ್.ಎಸ್ ಕಟ್ಟಲು ತಮ್ಮ ಮನೆಯಲ್ಲಿದ್ದ ಆಭರಣಗಳನ್ನು ಮಾರಾಟ ಮಾಡಿದ್ದರು. ಆದರೆ ನೀವು ಎಸ್‌ಇಪಿ, ಟಿ.ಎಸ್.ಪಿಯ ಸುಮಾರು 5 ಸಾವಿರ ಕೋಟಿ ಹಣವನ್ನು 3 ವರ್ಷದಲ್ಲಿ ಚುನಾವಣಾ ತಂತ್ರಕ್ಕಾಗಿ ಗ್ಯಾರಂಟಿಗಳಿಗೆ ಕೊಟ್ಟಿದ್ದೀರಿ. ಬೆಂಗಳೂರು, ಕೋಲಾರ, ತುಮಕೂರು ಭಾಗದ ಲಕ್ಷಾಂತರ ರೈತರಿಗೆ ನಾಲ್ವಡಿ ಅವರು ಬದುಕು ಕಟ್ಟಿಕೊಳ್ಳಲು ಎಕರೆಗಟ್ಟಲೆ ಭೂಮಿಯನ್ನು ದಾನವಾಗಿ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರು ನಿಗಮಗಳಿಗೆ ಭೂ ಖರೀದಿ ಯೋಜನೆಗೆ ಹಣವನ್ನೇ ನೀಡದೆ ಹಿಂದುಳಿದ ವರ್ಗ ಸ್ವಾಭಿಮಾನದ ಬದುಕು ನಡೆಸದಂತೆ ಮಾಡಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ಎಸ್. ಸರ್ವೇಶ್, ಬಿ.ಡಿ. ಮಾದೇಶ, ಶಿವಣ್ಣ, ಡಿ. ರವಿಚಂದ್ರ, ಕೆ.ಸಿ. ಸಿದ್ದರಾಜು, ಮಲ್ಲೇಶ್ ಮೊದಲಾದವರು ಇದ್ದರು.