ಕನ್ನಡಪ್ರಭ ವಾರ್ತೆ ಗುರುಮಠಕಲ್
ಗುರುಮಠಕಲ್ ಪಟ್ಟಣದ ಡಾ. ಅಂಬೇಡ್ಕರ್ ಭವನದ ಆವರಣದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 46.65 ಲಕ್ಷ ರು.ಗಳ ಅನುದಾನದಡಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ರವರ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ಸೋಮವಾರ ಜರುಗಿತು."ಗುರುಮಠಕಲ್ ಪಟ್ಟಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ರವರ ಮೂರ್ತಿಗಳ ಸ್ಥಾಪಿಸಬೇಕೆಂಬುದು ತಮ್ಮ ತಂದೆಯವರಾದ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಅವರ ಕನಸಾಗಿತ್ತು. ಈಗ ಈ ಇಬ್ಬರೂ ಮಹಾತ್ಮರ ಪುತ್ಥಳಿಗಳು ಒಂದೆಡೇ ಇರುವುದು ಅಪರೂಪ.. " ಎಂದು ಪುತ್ಥಳಿಗಳ ಅನಾವರಣಗೊಳಿಸಿ ಮಾತನಾಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಶೋಷಿತ ಸಮುದಾಯಗಳ 7 ದಶಕಗಳ ಕನಸು ಈಡೇರಿಸಿದ ತಂದೆಯವರ ಮರೆಯಬೇಡಿ ಎಂದು ಭಾವುಕರಾದರು.
ಯಾರು ನಿಮ್ಮನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳುತ್ತಾರೋ.. ಯಾರು ಸಂವಿಧಾನಕ್ಕೆ ಗೌರವ ಕೊಡುತ್ತಾರೋ.. ಅಂತಹವರನ್ನು ನೀವು ಒಪ್ಪಿಕೊಳ್ಳಬೇಕು ಎಂದು ಪುತ್ಥಳಿಗಳ ಶಂಕುಸ್ಥಾಪನೆಗೆಂದು ಆಗ ಆಗಮಿಸಿದ್ದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಹೇಳಿದ್ದರು. ಅದರಂತೆ, ನೀವು ನನ್ನ ಒಪ್ಪಿಕೊಂಡು ಆಯ್ಕೆ ಮಾಡಿದ್ದೀರಿ, ನಿಮ್ಮ ಭಾವನೆಗಳಿಗೆ ಗೌರವಿಸುತ್ತೇನೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ಮಹಾನ್ ನಾಯಕರುಗಳ ಪುತ್ಥಳಿಗಳ ಸ್ಥಾಪನೆಯ ಉದ್ದೇಶ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ನಾವೂ ಅವರಂತೆ ಬದುಕಿ ಬಾಳಬೇಕು ಎನ್ನುವ ಭಾವನೆ ನಮ್ಮಲ್ಲಿ ಬರಲಿದೆ ಎನ್ನುವ ಉದ್ದೇಶದಿಂದ ಮಹಾತ್ಮರ ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ ಎಂದರು.
ಯುವ ಮುಖಂಡ ತಾಯಪ್ಪ ಬದ್ದೇಪಲ್ಲಿ ಮಾತನಾಡಿ, ಏಳು ದಶಕಗಳಿಂದ ಇಲ್ಲಿ ಯಾವುದೇ ನಾಯಕರು ಅಧಿಕಾರ ನಡೆಸಿದರೂ ಕೂಡ ನಮ್ಮ ಮಹಾತ್ಮರ ಪುತ್ಥಳಿಗಳ ನಿರ್ಮಾಣ ಮಾಡಲು ಆಸಕ್ತಿ ತೋರಿರಲಿಲ್ಲ. ಆದರೆ, ಹಿಂದುಳಿದವರ, ಶೋಷಿತರ ಆಶಾಕಿರಣವಾಗಿದ್ದ ಮಾಜಿ ಶಾಸಕ ದಿ. ನಾಗನಗೌಡರ ದಿಟ್ಟಿನ ಕ್ರಮದಿಂದ ಗುರುಮಠಕಲ್ ತಾಲೂಕು ಕೇಂದ್ರದಲ್ಲಿ ಪುತ್ಥಳಿಗಳು ಅನಾವರಣಗೊಂಡಿವೆ. ಅಂದು ಅವರು ಶಂಕುಸ್ಥಾಪನೆ ನೆರವೇರಿಸಿದ್ದರು, ಇಂದು ಅವರ ಪುತ್ರ, ಹಾಲಿ ಶಾಸಕ ಶರಣಗೌಡ ಕಂದಕೂರ ಅವರು ಪುತ್ಥಳಿಗಳ ಅನಾವರಣ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಮರೆಪ್ಪ ಚಟ್ಟೇರಕರ್ ಮಾತನಾಡಿ, ಶೋಷಿತ ವರ್ಗದ ಕನಸು ನನಸು ಮಾಡಿದ ಶಾಸಕ ಶರಣಗೌಡ ಕಂದಕೂರ ಅವರ ಶ್ರಮ ಅತ್ಯಂತ ಪ್ರಮುಖವಾಗಿದೆ ಎಂದರು. ಡಾ. ಭೀಮರಾಯ ಲಿಂಗೇರಿ ಮಾತನಾಡಿದರು.
ತಹಸೀಲ್ದಾರ್ ನೀಲಪ್ರಭಾ, ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ, ಡಿಯುಡಿಸಿ ಮಹೇಶ, ರಾಜಶ್ರೀ ಸಿಂಧೆ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ತಾಪಂ ಅಧಿಕಾರಿ ಸಂತೋಷ, ಸಿಡಿಪಿಓ ಶರಣಬಸವ, ಮುಖಂಡರಾದ ಜಿ. ತಮ್ಮಣ್ಣ, ಭೀಮಶಪ್ಪ ಗುಡಸೆ, ಅನೀಲ ಹೆಡಗಿಮದ್ರಾ, ಭೀಮಮ್ಮ ಮುರಡಿ, ಪ್ರಕಾಶ ನಿರೆಟಿ, ಭೀಮಶಪ್ಪ ಶನಿವಾರಂ, ಹಣಮಂತು ಶನಿವಾರಂ, ಅಶೋಕ ಶನಿವಾರಂ, ಲಾಲಪ್ಪ ತಲಾರಿ, ಗುರುನಾಥ ತಲಾರಿ, ಡಿಎಸ್‌ಎಸ್ ಸಂಚಾಲಕ, ಚಂದಪ್ಪ ಯಾದಗಿರಿ, ಶರಣಪ್ಪ ಲಿಕ್ಕೆ, ಪರಮಾರಡ್ಡಿ ಕಂದಕೂರ, ಈಶ್ವರ ರಾಠೋಡ ಚಿಂತನಳ್ಳಿ ಸೇರಿದಂತೆ ಇತರರಿದ್ದರು.ತಂದೆಯ ನೆನೆದು ಭಾವುಕರಾದ ಶಾಸಕ ಕಂದಕೂರು: ಗುರುಮಠಕಲ್ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ರವರ ಪುತ್ಥಳಿಗಳ ಸ್ಥಾಪನೆ ಕಾರ್ಯಕ್ರಮದಲ್ಲಿ ತಮ್ಮ ತಂದೆ, ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ತಂದೆಯ ನೆನೆದು ಕಂಡು ಕೆಲಕ್ಷಣ ಶಾಸಕ ಶರಣಗೌಡ ಭಾವುಕರಾದರು.
ಎಡಬಲ ಒಗ್ಗಟ್ಟು: ಗುರುಮಠಕಲ್ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ರವರ ಮೂರ್ತಿಗಳ ಸ್ಥಾಪನೆ ಕಾರ್ಯಕ್ರಮಕ್ಕೆ ದಲಿತ ಪಂಥದ ಎಡ ಮತ್ತು ಬಲ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸಿ, ತಮ್ಮ ಸಮುದಾಯದ ಮಹಾನ್ ನಾಯಕರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.