ನೀರಿಗಾಗಿ ಕೊಳವೆ ಬಾವಿ ಕೊರೆಯುವುದು ಶಾಶ್ವತ ಪರಿಹಾರವಲ್ಲ

KannadaprabhaNewsNetwork | Published : Sep 20, 2024 1:39 AM

ಸಾರಾಂಶ

ಜಲ ಜೀವನ್ ಮಿಷನ್ ಯೋಜನೆಗೆ ಕೊಳವೆ ಬಾವಿಗಳನ್ನು ನೀರಿನ ಮೂಲಗಳನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಬೇಡೆವೆಂದು ಸಂಸದ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಜಲ ಜೀವನ್ ಮಿಷನ್ ಯೋಜನೆಗೆ ಕೊಳವೆ ಬಾವಿಗಳನ್ನು ನೀರಿನ ಮೂಲಗಳನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಬೇಡೆವೆಂದು ಸಂಸದ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಲ ಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು, ಬೇಸಗೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ. ನೀರಿನ ಮೂಲಕ್ಕಾಗಿ ಕೊಳವೆ ಬಾವಿ ಕೊರೆಯುವುದು ಶಾಶ್ವತ ಪರಿಹಾರವಾಗುವುದಿಲ್ಲ. ಬದಲಾಗಿ ನದಿ ಮೂಲಗಳ ಹುಡುಕಿ ಯೋಜನೆಯ ಸಮರ್ಪಕ ಅನುಷ್ಠಾನ ಮಾಡಬೇಕು. ಇನ್ನೊಂದು ವರ್ಷದೊಳಗೆ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಶುದ್ದ ಕುಡಿವ ನೀರು ಪೂರೈಕೆ ಮಾಡುವಂತೆ ಸೂಚಿಸಿದರು.

ಪಾವಗಡ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತುಂಗ ಭದ್ರಾ ಜಲಾಶಯದ ಹಿನ್ನೀರಿನಿಂದ ನೀರು ಸರಬರಾಜು ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೇ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ 560 ಹಳ್ಳಿಗಳಿಗೆ ಈ ನೀರು ಸರಬರಾಜಾಗಲಿದೆ ಎಂದು ತಿಳಿಸಿದರು.

ಹೊಳಲ್ಕೆರೆ ತಾಲೂಕಿನ 215 ಹಳ್ಳಿಗಳಿಗೆ ವಾಣಿವಿಲಾಸ ಸಾಗರ ನೀರಿನ ಮೂಲದಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಸಿರಿಗೆರೆ, ಭರಮಸಾಗರ ಹಾಗೂ 45 ಹಳ್ಳಿಗಳಿಗೆ ಶಾಂತಿಸಾಗರದಿಂದ ನೀರು ಸರಬರಾಜಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಭರಮಸಾಗರದ ಜಲಮಿಷನ್ ಕಾಮಗಾರಿಯನ್ನು ಕಳೆದ ಮೂರು ತಿಂಗಳಿನಿಂದ ನಿಲ್ಲಿಸಲಾಗಿದೆ. ಪೈಪ್ ಅಳವಡಿಸಲಿಕ್ಕೆ ಗುಂಡಿಗಳನ್ನು ತೆಗೆದು ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಉತ್ತರ ನೀಡುವಂತೆ ಸಂಸದರು ಪ್ರಶ್ನಿಸಿದರು. ಕಾರ್ಯಪಾಲಕ ಅಭಿಯಂತರರು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಈ ರೀತಿ ಆಗಿದೆ. ಕೂಡಲೇ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಜಿಲ್ಲೆಯಲ್ಲಿ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ವಹಿಸಿ ಎರಡು ವರ್ಷವಾದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ನಡೆಯುತ್ತಿಲ್ಲ. ಗುಣಮಟ್ಟವೂ ಸರಿಯಾಗಿಲ್ಲ. ಕ್ವಾಲಿಟಿ ಪೈಪು ಹಾಗೂ ನಲ್ಲಿಗಳನ್ನ ಅಳವಡಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಸರಬರಾಜಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ನಿಟ್ಟಿನಲ್ಲಿ ಯಾವುದೇ ರಾಜಿ ಇಲ್ಲ. ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಿದರೆ ಅನೇಕ ಖಾಯಿಲೆಗಳಿಂದ ಅವರನ್ನು ದೂರವಿಡಬಹುದು. ಬಹುತೇಕ ಖಾಯಿಲೆಗಳು ನೀರಿನಿಂದಲೇ ಬರುತ್ತವೆ ಎನ್ನುವ ವಿಷಯ ತಿಳಿದಿರಲಿ ಎಂದು ಗೋವಿಂದ ಕಾರಜೋಳ ಹೇಳಿದರು. ಜಲ್ ಜೀವನ್ ಮಿಷನ್ ಯೋಜನೆ ಘೋಷಣೆಯಾದಾಗ ಈ ದೇಶದಲ್ಲಿ ಸುಮಾರು 19.33ಕೋಟಿ ಕುಟುಂಬಗಳ ಪೈಕಿ ಕೇವಲ 3.23 ಕೋಟಿ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕ ಹೊಂದಿದ್ದವು. ಹೀಗಾಗಿ ಉಳಿದ 16.09 ಕೋಟಿ ಕುಟುಂಬಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿತ್ತು. ಈಗಾಗಲೇ 15.16 ಕೋಟಿ ಕುಟುಂಬಗಳಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಚಿತ್ರದುರ್ಗದ ಸುಮಾರು 950 ಗ್ರಾಮಗಳು, 1685 ಜನವಸತಿಗಳಿರುವ ಜಿಲ್ಲೆ. ಅಂದಾಜು 19 ಲಕ್ಷ ಜನಸಂಖ್ಯೆ ಹೊಂದಿದೆ. ಈ ಎಲ್ಲಾ ಜನವಸತಿಗಳಿಗೆ ಇನ್ನೊಂದು ವರ್ಷದೊಳಗಾಗಿ ಪ್ರಧಾನಮಂತ್ರಿಯವರ ಬಹು ಮಹಾತ್ವಾಕಾಂಕ್ಷೆಯ ಯೋಜನೆ ಜಲ್ ಜೀವನ್ ಮಿಷನ್ ಅಡಿ ಶುದ್ದ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಕಾರಜೋಳ ಸೂಚಿಸಿದರು.

ಜಿಲ್ಲೆಯಲ್ಲಿ ₹2800 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ₹941 ಕೋಟಿ ವೆಚ್ಚದ ಜಲ್ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಖ್ಯ ಲೆಕ್ಕಾಧಿಕಾರಿ ಮಧು ಡಿ.ಆರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವನಗೌಡ, ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ಎಸ್. ನಾಡರ್, ಎಲ್ಲಾ ತಾಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು.

Share this article