ಪ್ರಕಾಶ್ ಎಂ.ಸುವರ್ಣ
ಕನ್ನಡಪ್ರಭ ವಾರ್ತೆ ಮೂಲ್ಕಿಕಿನ್ನಿಗೋಳಿ, ಎಳತ್ತೂರು, ತಾಳಿಪಾಡಿ, ಮೆನ್ನಬೆಟ್ಟು, ಕಟೀಲು, ಕೊಂಡೆಮೂಲ ಹಾಗೂ ಇತರ ಗ್ರಾಮಗಳನ್ನೊಳಗೊಂಡ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸುತ್ತ ಶಾಂಭವಿ ನದಿಯಿಂದ ಆವೃತವಾಗಿರುವ ಕಿನ್ನಿಗೋಳಿ ಪಟ್ಟಣ ಪಂಚಾಯತಿ ಹಾಗೂ ಆಸುಪಾಸಿನ ಗ್ರಾಮಗಳಿಗೆ ಶಾಂಭವಿ ನದಿ ನೀರೇ ಆಧಾರವಾಗಿದ್ದು ಕುಡಿಯುವ ನೀರಿನ ಜೊತೆಗೆ ಕೃಷಿ ಕಾರ್ಯಗಳಿಗೆ ಶಾಂಭವಿ ನದಿ ನೀರನ್ನು ಬಳಸಲಾಗುತ್ತಿದೆ.ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಭೂಮಿ ಇದ್ದು ನೂರಾರು ಕೊಳವೆಬಾವಿ, ಮತ್ತು ಬಾವಿಗಳಲ್ಲಿ ನೀರು ಶೇಖರಣೆಯಾಗುತ್ತಿದೆ. ಕಿನ್ನಿಗೋಳಿ ಪ್ರದೇಶಕ್ಕೆ ಹತ್ತಿರವಾಗಿರುವ ಶಾಂಭವಿ ನದಿಯಿಂದ ಕಿಲ್ಪಾಡಿ, ಬಳ್ಕುಂಜೆ ಸೇರಿದಂತೆ ಹಲವು ಗ್ರಾಮಗಳಿಗೆ ಬಳ್ಕುಂಜೆಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ೧೫ ವರ್ಷಗಳ ಹಿಂದೆ ಲಕ್ಷಾಂತರ ರು. ವೆಚ್ಚದಲ್ಲಿ ಶಾಂಭವಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಐಕಳ ಗ್ರಾಮ ಪಂಚಾಯತಿ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಹಾಗೂ ಹಲವು ಗ್ರಾಮಗಳಿಗೆ ನೀರು ಇಲ್ಲಿಂದಲೇ ಪೂರೈಸಲಾಗುತ್ತಿದೆ.
ಅಣೆಕಟ್ಟಿನಿಂದ ಸಾವಿರಾರು ಎಕ್ರೆಗೆ ನೀರು ಪೂರೈಕೆ ಆಗುತ್ತಿದೆ. ಇಲ್ಲಿ ಸುಮಾರು ೫ ಕಿ.ಮೀ ವ್ಯಾಪ್ತಿಯಲ್ಲಿರುವ ಬಾವಿಗಳಿಗೆ ಉತ್ತಮ ರೀತಿಯಲ್ಲಿ ನೀರಿನ ಒರತೆ ಇದ್ದು ನೀರಿನ ಅಭಾವ ಕಡಿಮೆಯಾಗಿದೆ.ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಶಾಂಭವಿ ನದಿಯಿಂದ ಪಕ್ಕದ ಎಲ್ಲ ಗ್ರಾಮ ಪಂಚಾಯತಿಗಳಿಗೆ ನೀರು ಪೂರೈಕೆಯಾದಲ್ಲಿ ಗ್ರಾಮಗಳಲ್ಲಿ ನೀರಿನ ಅಭಾವ ತಪ್ಪಿಸಬಹುದು ಮತ್ತು ಬೋರ್ವೆಲ್ ನೀರಿನ ಒತ್ತಡ ಕಡಿಮೆಯಾಗಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಹಾಗೂ ಆಸುಪಾಸಿನ ಗ್ರಾಮ ಪಂಚಾಯತಿಗಳಲ್ಲಿ ಜಲ್ ಜೀವನ್ ಮಿಷನ್ ಅಡಿಯಲ್ಲಿ ಎಲ್ಲ ಮನೆಗಳಿಗೆ ನೀರು ತಲುಪಿಸುವ ಕಾರ್ಯ ನಡೆಯುತ್ತಿದೆ. ಮೊದಲನೇ ಹಂತದಲ್ಲಿ ಟ್ಯಾಂಕುಗಳನ್ನು ಕಟ್ಟಲಾಗಿದೆ ಮತ್ತು ಮನೆಗಳಿಗೆ ಪೈಪ್ ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ ಆದರೆ ಇದರ ಕೆಲಸ ಇನ್ನೂ ಸಂಪೂರ್ಣಗೊಳ್ಳಲಿಲ್ಲ.ನೀರಿನ ಮೂಲಗಳು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿರುವ ಶಾಂಭವಿ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟಿನಿಂದ ಮತ್ತು ಕಟೀಲಿನಲ್ಲಿ ನಂದಿನಿ ನದಿಗೆ ಕಟ್ಟಿರುವ ಅಣೆಕಟ್ಟಿನಿಂದ ಕಿನ್ನಿಗೋಳಿ ಹಾಗೂ ಆಸುಪಾಸಿನ ಸಾವಿರಾರು ಎಕ್ರೆಗೆ ಕೃಷಿ ಭೂಮಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತಿದೆ ಈ ಆಣೆಕಟ್ಟಿನಿಂದ ಸಾವಿರಾರು ಬಾವಿಗಳಿಗೆ ನೀರಿನ ಒಸರು ಇದೆ ಮತ್ತು ನೂರಾರು ಸರ್ಕಾರಿ ಕೊಳವೆಬಾವಿಗಳಿದ್ದು ಸಾರ್ವಜನಿಕರು ಮಿತವಾಗಿ ನೀರನ್ನು ಬಳಸಿದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ.-------------
ಬಹುಗ್ರಾಮ ಯೋಜನೆಯ ಅಡಿಯಲ್ಲಿ ಏಳಿಂಜೆ, ಪಟ್ಟೆ, ಪಟ್ಟೆ ಕ್ರಾಸ್, ಉಳಿಪಾಡಿ ದಾಮಸ್ ಕಟ್ಟೆ ಶುಂಠಿಪಾಡಿ ಇತ್ಯಾದಿ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ಸುಮಾರು ೧೭ ಬೋರ್ವೆಲ್‌ಗಳಿದ್ದು ಈಗಾಗಲೇ ಹೊಸತಾಗಿ ಮೂರು ಕೊಳವೆಬಾವಿಗಳು ತೆಗೆಯಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಎರಡರಿಂದ ಮೂರು ಟ್ಯಾಂಕರ್‌ಗಳು ಲಭ್ಯ ಇವೆ.-ದಿವಾಕರ ಚೌಟ, ಐಕಳ ಗ್ರಾ.ಪಂ. ಅಧ್ಯಕ್ಷ.------ಸಾರ್ವಜನಿಕರು ಕೃಷಿ ಚಟುವಟಿಕೆಗಳಿಗೆ ತಮ್ಮ ಸ್ವಂತ ಜಾಗದಲ್ಲಿರುವ ಕೊಳವೆಬಾವಿ ಅಥವಾ ಬಾವಿಗಳ ನೀರು ಉಪಯೋಗಿಸಬೇಕು. ಸರ್ಕಾರಿ ಬಾವಿ ಅಥವಾ ಕೆರೆಯಿಂದ ಯಾವುದೇ ನೀರು ಕುಡಿಯುವ ಅಗತ್ಯಕ್ಕೆ ಬಿಟ್ಟು ಇತರ ಉದ್ದೇಶಗಳಿಗೆ ಪೂರೈಕೆಯಾಗುವುದಿಲ್ಲ. ತುರ್ತು ಸಂದರ್ಭದಲ್ಲಿ ಹೊಸತಾಗಿ ಒಂದು ಟ್ಯಾಂಕರ್ ಪಟ್ಟಣ ಪಂಚಾಯಿತಿಗೆ ಖರೀದಿಸಲಾಗಿದೆ. ಒಂದು ಟ್ಯಾಂಕರ್ ಬಾಡಿಗೆಗೆ ತರಲಾಗುತ್ತಿದೆ.-ನಾಗರಾಜ್, ಮುಖ್ಯಾಧಿಕಾರಿ, ಕಿನ್ನಿಗೋಳಿ ಪ.ಪಂ.