ಕುಡಿವ ನೀರಿನ ಸಮಸ್ಯೆ, ಕೊಳವೆಬಾವಿ ಕೊರೆಸುವ ಭರವಸೆ

KannadaprabhaNewsNetwork |  
Published : Jun 04, 2024, 12:30 AM IST
ಫೋಟೋ : ೩ಎಚ್‌ಎನ್‌ಎಲ್೧, ೧ಎ | Kannada Prabha

ಸಾರಾಂಶ

ತಳ್ಳು ಗಾಡಿಯಲ್ಲಿ ದೂರದಿಂದ ಕುಡಿಯುವ ನೀರು ತರುವ ಸಮಸ್ಯೆಯಿಂದ ಬೇಸತ್ತು ದೂರು ನೀಡಿದ ಬಾಳಂಬೀಡ ಗ್ರಾಮಕ್ಕೆ ತಾಲೂಕು ತಹಸೀಲ್ದಾರ ಎಸ್. ರೇಣುಕಮ್ಮ ಭೇಟಿ ನೀಡಿ, ತಕ್ಷಣ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಪರಿಹಾರದ ಭರವಸೆ ನೀಡಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಹಾನಗಲ್ಲ: ತಳ್ಳು ಗಾಡಿಯಲ್ಲಿ ದೂರದಿಂದ ಕುಡಿಯುವ ನೀರು ತರುವ ಸಮಸ್ಯೆಯಿಂದ ಬೇಸತ್ತು ದೂರು ನೀಡಿದ ಬಾಳಂಬೀಡ ಗ್ರಾಮಕ್ಕೆ ತಾಲೂಕು ತಹಸೀಲ್ದಾರ ಎಸ್. ರೇಣುಕಮ್ಮ ಭೇಟಿ ನೀಡಿ, ತಕ್ಷಣ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಪರಿಹಾರದ ಭರವಸೆ ನೀಡಿ ಕಾರ್ಯ ಪ್ರವೃತ್ತರಾಗಿದ್ದಾರೆ.ಸೋಮವಾರ ಬೆಳಗ್ಗೆ ಬಾಳಂಬೀಡದ ಎರಡನೇ ವಾರ್ಡಗೆ ಸರಬರಾಜಾಗುತ್ತಿರುವ ಕೊಳವೆ ಬಾವಿಯ ನೀರು ಮಳೆ ಲೋಪದಿಂದ ತೀರ ಕಡಿಮೆಯಾಗಿದೆ. ನೀರು ಕೇವಲ ಒಂದೇ ವಾರ್ಡಿಗೂ ಸಾಲುತ್ತಿಲ್ಲ. ಮಳೆ ಬಂದು ಕೊಳವೆ ಬಾವಿಗೆ ನೀರು ಮರು ಪೂರಣ ಆದೀತು ಎಂಬ ನಿರೀಕ್ಷೆಯೂ ಸುಳ್ಳಾಯಿತು. ಗೃಹ ಬಳಕೆ, ಕುಡಿಯಲು ಮತ್ತು ಜಾನುವಾರ, ಇನ್ನಿತರ ಸಾಕು ಪ್ರಾಣಿಗಳ ನೀರಿನ ದಾಹ ತೀರಿಸಲು ಗ್ರಾಮದ ಹೊರಭಾಗದ ಕೊಳವೆಬಾವಿಯಿಂದ ನಿತ್ಯ ನೀರು ಹೊತ್ತು ತರುವ, ತಳ್ಳುವ ಗಾಡಿಗಳಿಂದ ಕೊಡ ತುಂಬಿ ತರಬೇಕಾದ ಅನಿವಾರ್ಯತೆ ಇಲ್ಲಿದೆ. ಆದಾಗ್ಯೂ ಇಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದು ಕೂಡ ಫಲ ನೀಡಲಿಲ್ಲ. ಇಲ್ಲಿನ ೭೦೦ರಷ್ಟು ನಿವಾಸಿಗಳು ನೀರಿನ ತಾಪತ್ರಯ ತಪ್ಪಿಸಲು ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.ಗ್ರಾಪಂ ಸದಸ್ಯ ಸತೀಶ ದುಂಡಣ್ಣನವರ ಇಲ್ಲಿ ಕಿರು ನೀರು ಸರಬರಾಜು ಘಟಕ ಸ್ಥಾಪಿಸಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲು ಮನವಿ ಮಾಡಿದ್ದರು. ಗ್ರಾಮಸ್ಥ ರಮೇಶ ಕಳಸೂರ ಹಲವು ಬಾರಿ ತಾಪಂ, ಜಿಪಂ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಿದ ಮನವಿಗಳಿಗೂ ಯಾವುದೇ ಪ್ರತಿಫಲ ದೊರೆತಿರಲಿಲ್ಲ. ನೀರು ಪೂರೈಕೆಯಲ್ಲಿ ವಿಳಂಬವಾದರೆ ಎರಡನೆ ವಾರ್ಡಿನ ಗ್ರಾಮಸ್ಥರು ಗ್ರಾಪಂಗೆ ಬೀಗ ಹಾಕಿ, ಹಾನಗಲ್ಲ ಹಾವೇರಿ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.ಸೋಮವಾರ ಬೆಳಗ್ಗೆ ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ಅವರನ್ನೊಳಗೊಂಡು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಾಬು, ಜಿಪಂ ಕುಡಿಯುವ ನೀರು ವಿಭಾಗದ ಚಂದ್ರಶೇಖರ ನೆಗಳೂರ, ಗ್ರಾಪಂ ಅಧ್ಯಕ್ಷ ನಾಗರಾಜ ಪಾಟೀಲ, ಅಭಿವೃದ್ಧಿ ಅಧಿಕಾರಿ ಕನ್ನಕ್ಕನವರ ಈ ಸಂದರ್ಭದಲ್ಲಿದ್ದು ಒಂದೇ ದಿನದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಪಂಚಾಯತಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ತೆಗೆಸಿದಾಗ ನೀರು ಬಾರದಿದ್ದರೆ ಖಾಸಗಿ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡುವ ಭರವಸೆ ನೀಡಿದರು.ಇಲ್ಲಿ ಎರಡು ಕೊಳವೆ ಬಾವಿ ಕೊರೆಸಲಾಗಿತ್ತು. ಮಳೆ ಕೊರತೆಯಿಂದ ನೀರು ಕಡಿಮೆಯಾಗಿ, ಎರಡನೇ ವಾರ್ಡಿಗೆ ನೀರು ಏರುತ್ತಿಲ್ಲ. ಸಮಸ್ಯೆಯ ವಾಸ್ತವವನ್ನು ತಿಳಿದಿದೆ. ಇಂದೇ ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡುತ್ತೇವೆ. ಒಂದು ವೇಳೆ ಗ್ರಾಪಂ ವ್ಯಾಪ್ತಿಯಲ್ಲಿ ಕೊಳವೆ ಬಾವಿಯಿಂದ ನೀರು ಸಿಗದಿದ್ದರೆ ಖಾಸಗಿ ಕೊಳವೆ ಬಾವಿಗಳಿಂದ ನೀರು ವ್ಯವಸ್ಥೆ ಮಾಡಲಾಗುತ್ತದೆ. ಅಂತರ್ಜಲದಲ್ಲಿನ ನೀರಿನ ಕೊರತೆ ಬಹಳಷ್ಟು ಸಮಸ್ಯೆಯಾಗಿದೆ. ಗ್ರಾಮಸ್ಥರ ಸಹಕಾರದಿಂದ ನೀರಿನ ಸಮಸ್ಯೆಗೆ ಪರಿಹಾರ ಮಾಡಿ ಕೊಡುತ್ತೇವೆ ಎಂದು ತಹಸೀಲ್ದಾರ್‌ ಎಸ್‌. ರೇಣುಕಮ್ಮ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌