ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಶಾಶ್ವತ ಬರಪೀಡಿತ ಜಿಲ್ಲೆಯಾಗಿರುವ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬರಗಾಲ ತೀವ್ರ ಕಂಟಕ ಪ್ರಾಯವಾಗುವ ಸಾಧ್ಯತೆ ಇದೆ.
ಫೆಬ್ರವರಿ ಕೊನೆಯ ವಾರದಲ್ಲಿಯೇ ಜಿಲ್ಲೆಯ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿನ ಜನರಿಗೆ 15ರಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಮುಂದಿನ 4 ತಿಂಗಳ ಬೇಸಿಗೆ ಕಳೆಯುವುದು ಇನ್ನು ಕಷ್ಟವಾಗಲಿದೆ.ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ಗದಗ ಬೆಟಗೇರಿ ನಗರಸಭೆ ಗಜೇಂದ್ರಗಡ, ರೋಣ, ನರಗುಂದ, ಲಕ್ಷ್ಮೇಶ್ವರ, ಮುಂಡರಗಿ ಪುರಸಭೆಗಳು, ಶಿರಹಟ್ಟಿ, ಮುಳಗುಂದ ಹಾಗೂ ನರೇಗಲ್ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜನರಿಗೆ ನಿತ್ಯವೂ ನೀರು ಕೊಡಲು 83.47 ಎಂಎಲ್‌ಡಿ (ಪ್ರತಿದಿನ ಮಿಲಿಯನ್ ಲೀಟರ್) ಅಗತ್ಯವಿದೆ. ಇದಕ್ಕಾಗಿ ಜಿಲ್ಲಾಡಳಿತ ಪ್ರತಿ ವರ್ಷವೂ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳುತ್ತದೆ. ಆದರೆ ಪ್ರತಿ ವರ್ಷದ ಬೇಸಿಗೆಯಲ್ಲಿ ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಜನರು ಮಾತ್ರ ತೀವ್ರ ಸಮಸ್ಯೆಯನ್ನು ಎದುರಿಸುವಂತಾಗಿದೆ. 33 ಎಂಎಲ್‌ಡಿ ನೀರು ಮಾತ್ರ ಪೂರೈಕೆ: ಎಲ್ಲ 9 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಜನರಿಗೆ ನಿತ್ಯವೂ ನೀರು ಕೊಡಲು 83 ಎಂಎಲ್‌ಡಿ ನೀರು ಬೇಕು. ಆದರೆ ಪ್ರಸ್ತುತ ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾಯಿಗಳಲ್ಲೂ ನೀರಿನ ಸಾಮರ್ಥ್ಯ ಕಡಿಮೆಯಾಗಿದೆ. ಜಿಲ್ಲೆಯ ಎರಡು ಪ್ರಮುಖ ನೀರಿನ ಮೂಲಗಳಾದ ತುಂಗಭದ್ರಾ, ಮಲಪ್ರಭ ನದಿಗಳಲ್ಲಿ ನೀರಿನ ಸಾಮರ್ಥ್ಯ ಕುಸಿದಿದ್ದು, ಸದ್ಯ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸೇರಿ ಒಟ್ಟು ಲಭ್ಯವಾಗುತ್ತಿರುವುದು ಕೇವಲ 33 ಎಂಎಲ್‌ಡಿ ನೀರು ಮಾತ್ರ. ಹಾಗಾಗಿ ಒಟ್ಟು 50 ಎಂಎಲ್‌ಡಿ ನೀರಿನ ಕೊರತೆಯನ್ನು ಎದುರಿಸಲಾಗುತ್ತಿದೆ.ಜಿಲ್ಲಾ ಕೇಂದ್ರದಲ್ಲಿ ತೀವ್ರ ತೊಂದರೆ: ಗದಗ ಬೆಟಗೇರಿ ಅವಳಿ ನಗರಕ್ಕೂ ನೀರಿನ ಅಭಾವದ ದೊಡ್ಡ ಇತಿಹಾಸವೇ ಇದೆ. ಗದಗ ಜಿಲ್ಲಾ ಕೇಂದ್ರವಾದ ಬಳಿಕ ಬೆಳವಣಿಗೆ ಹೊಂದದೇ ಇರಲು ನೀರಿನ ಕೊರತೆಯೂ ಪ್ರಮುಖ ಕಾರಣವಾಗಿದೆ. ಜಿಲ್ಲಾ ಕೇಂದ್ರವಾದ ಅವಳಿ ನಗರದಲ್ಲಿ 2.43 ಲಕ್ಷ ಜನಸಂಖ್ಯೆ ಇದೆ. ಮುಂಡರಗಿ ತಾಲೂಕಿನ ಹಮ್ಮಿಗಿಯಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾಗಿರುವ ಬ್ಯಾರೇಜ್‌ನಿಂದ ಪ್ರತಿನಿತ್ಯ ನೀರು ನಗರಕ್ಕೆ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಅದಕ್ಕೆ 24x7 ಕುಡಿಯುವ ನೀರಿನ ಯೋಜನೆ ಎಂದು ಹೆಸರಿಡಲಾಗಿದೆ. ರೂಪಿತವಾಗಿರುವ ಯೋಜನೆ ಮತ್ತು ಅವಳಿ ನಗರದ ಜನಸಂಖ್ಯೆಗೆ ಅನುಗುಣವಾಗಿ 32 ಎಂಎಲ್‌ಡಿ ನೀರು ಬೇಕು. ಆದರೆ ಸದ್ಯಕ್ಕೆ 16 ಎಂಎಲ್‌ಡಿ ಮಾತ್ರ ನೀರು ಪೂರೈಕೆ ಸಾಧ್ಯ ಆಗುತ್ತಿದೆ. 60 ಕಿಮೀ ದೂರದ ಹಮ್ಮಿಗಿಯಿಂದ ನೀರು ಪೂರೈಕೆಯಾಗುತ್ತಿದ್ದು, ಪದೇ ಪದೇ ರಿಪೇರಿ, ನದಿ ಪಾತ್ರದಲ್ಲಿ ನೀರಿನ ಕೊರತೆಯಿಂದಾಗಿ 15ರಿಂದ 20 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.
718 ಕೊಳೆಬಾವಿಗಳಿದ್ದರೂ ಸಾಕಾಗುತ್ತಿಲ್ಲ: ಗದಗ ಬೆಟಗೇರಿ ಅವಳಿ ನಗರ ವ್ಯಾಪ್ತಿಯಲ್ಲಿ ಒಟ್ಟು 718 ಕೊಳವೆಬಾವಿಗಳಿದ್ದು, ಅವುಗಳ ಮೂಲಕ ಕೂಡಾ ಅವಳಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ ಸಾರ್ವಜನಿಕರ ನೀರಿನ ದಾಹವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಅವಶ್ಯವಿದ್ದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸುವಂತೆ ಅಧಿಕಾರಿಗಳಿಗೆ ಸೂಚನೆ ದೊರೆತಿದೆ. ಆದರೆ ಅಂತರ್ಜಲ ಕುಸಿತದಿಂದಾಗಿ ನೀರೇ ಲಭ್ಯವಾಗುತ್ತಿಲ್ಲ. ಇದು ಕೂಡಾ ಆತಂಕಕ್ಕೆ ಕಾರಣವಾಗಿದೆ. ಇದೆಲ್ಲರ ಮಧ್ಯೆ ಹಲವಾರು ಕೊಳವೆಬಾವಿಗಳು ದುರಸ್ತಿಗಾಗಿ ಕಾಯುತ್ತಿವೆ.ತಾಲೂಕಾವಾರು ತಹಸೀಲ್ದಾರರು ಪ್ರತಿ ವಾರಕ್ಕೊಮ್ಮೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯಬಿದ್ದಲ್ಲಿ ಖಾಸಗಿ ಕೊಳುವೆ ಬಾವಿ ಬಳಸುವಂತೆ ತಿಳಿಸಲಾಗಿದೆ. ತುಂಗಭದ್ರಾ ನದಿಗೆ ನೀರು ಬಿಡುಗಡೆಯಾಗುತ್ತಿದೆ. ಪ್ರಸ್ತುತ ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಕುಸಿತವಾಗಿದೆ. ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳುತ್ತಾರೆ.