ಮಳೆಗಾಲದಲ್ಲೂ ಸರ್ಕಾರಿ ಶಾಲೆಯಲ್ಲಿ ಕುಡಿವ ನೀರಿಗೆ ಬರ

KannadaprabhaNewsNetwork | Published : Aug 5, 2024 12:40 AM

ಸಾರಾಂಶ

ಸರ್ಕಾರಿ ಶಾಲೆಗಳೆಂದರೆ ಸಾಮಾನ್ಯವಾಗಿ ಸಮಸ್ಯೆಗಳ ಗೂಡಾಗುತ್ತಿವೆ. ಕನಿಷ್ಟ ಮೂಲ ಸೌಕರ್ಯಗಳು ಕೂಡ ಸಿಗದಂತಾಗಿದ್ದು, ಗ್ರಾಮೀಣ ಭಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ಷರಾಹುಲ್ ಜೀ ದೊಡ್ಮನಿ

ಕನ್ನಡಪ್ರಭ ವಾರ್ತೆ ಚವಡಾಪುರಸರ್ಕಾರಿ ಶಾಲೆಗಳೆಂದರೆ ಸಾಮಾನ್ಯವಾಗಿ ಸಮಸ್ಯೆಗಳ ಗೂಡಾಗುತ್ತಿವೆ. ಕನಿಷ್ಟ ಮೂಲ ಸೌಕರ್ಯಗಳು ಕೂಡ ಸಿಗದಂತಾಗಿದ್ದು, ಗ್ರಾಮೀಣ ಭಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಇಲ್ಲೊಂದು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಡಿವ ನೀರಿನ ವ್ಯವಸ್ಥೆ ಇಲ್ಲದ್ದಕ್ಕೆ ಶಾಲಾ ಮಕ್ಕಳು, ಮಕ್ಕಳ ಪಾಲಕರು ಕೂಡಿಕೊಂಡು ತಮಟೆ ಬಾರಿಸಿಕೊಂಡು ಊರಿನ ಎಲ್ಲಾ ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಅಫಜಲ್ಪುರ ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಜಿ.ಪಂ ಮತಕ್ಷೇತ್ರವು ಆಗಿರುವ ಗೊಬ್ಬೂರ(ಬಿ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. 7ನೇ ತರಗತಿಯಿಂದ 10ನೇ ತರಗತಿ ವರೆಗಿನ ಈ ಪ್ರೌಢ ಶಾಲೆಯಲ್ಲಿ 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟು ಸಂಖ್ಯೆಯ ಮಕ್ಕಳಿಗೆ ಕುಡಿವ ನೀರಿನ ವ್ಯವಸ್ಥೆ ಇಲ್ಲವಾಗಿದ್ದು ಈಗ ಮಕ್ಕಳಿಗೂ ಮತ್ತು ಪಾಲಕರಿಗೂ ಚಿಂತೆಗೆ ಕಾರಣವಾಗಿದೆ.

ಕುಡಿವ ನೀರಿಗೆ ಬರ: ಸಾಮಾನ್ಯವಾಗಿ ಬೆಸಿಗೆ ಸಮಯದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುವುದರಿಂದ ಟ್ಯಾಂಕರ್ ನೀರು, ಖರೀದಿಸಿ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಈಗ ಮಳೆಗಾಳವಿದ್ದರೂ ಕೂಡ ಶಾಲೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಮದ್ಯಾಹ್ನ ಬಿಸಿಯೂಟದ ಬಳಿಕ ಮಕ್ಕಳು ನೀರು ಕುಡಿಯಲು ಮನೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರೌಢ ಶಾಲೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ನೀರು ಕುಡಿಯಲು ಒಮ್ಮೆಲೆ ತಮ್ಮ ಮನೆಗಳಿಗೆ ಓಡೋಡಿ ಹೋಗುವ ಮಕ್ಕಳು ಹೆದ್ದಾರಿ ದಾಟಬೇಕಾದ ಭಯಾನಕ ಸನ್ನಿವೇಶ ನಿರ್ಮಾಣವಾಗುತ್ತಿದೆ. ಈ ವೇಳೆ ವೇಗವಾಗಿ ಬರುವ ವಾಹನಗಳು ಮಕ್ಕಳ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ.

ಎಲ್ಲರ ನಿಷ್ಕಾಳಜಿ ಎಂದ ಪಾಲಕರು: ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಇದೆ. ಆದರೆ ಈ ಸಮಸ್ಯೆಯ ಕುರಿತು ಬಾರಿ ಬಾರಿ ಪಂಚಾಯಿತಿಯವರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಶಿಕ್ಷಣ ಇಲಾಖೆಯವರು ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸರ್ಕಾರ ಶಾಲೆಗಳ ಏಳಿಗೆಗಾಗಿ ಎಷ್ಟು ಖರ್ಚು ಮಾಡುತ್ತದೋ ಅಷ್ಟೇ ಮೂಲಭೂತ ಸೌಕರ್ಯಗಳಿಗಾಗಿಯೂ ಖರ್ಚು ಮಾಡುತ್ತದೆ. ಆದರೆ 400ಕ್ಕಿಂತ ಹೆಚ್ಚು ಮಕ್ಕಳು ಓದುವ ಶಾಲೆಯಲ್ಲಿ ಕನೀಷ್ಟ ಪಕ್ಷ ಕುಡಿವ ನೀರಿನ ವ್ಯವಸ್ಥೆ ಇಲ್ಲವೆಂದರೆ ನಾವು ಏಕೆ ಮಕ್ಕಳನ್ನು ಈ ಶಾಲೆಗೆ ಕಳಿಸಬೇಕೆಂಬ ಚಿಂತೆ ಕಾಡುತ್ತಿದೆ ಎಂದು ಪಾಲಕರು ಎಲ್ಲರ ನಿಷ್ಕಾಳಜಿಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

------

ಗೊಬ್ಬೂರ(ಬಿ) ಪ್ರೌಢಶಾಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಇರುವುದರಿಂದ ಮಕ್ಕಳು ಊರಲ್ಲಿ ದೇಣಿಗೆ ಸಂಗ್ರಹಿಸಿ ನೀರಿನ ವ್ಯವಸ್ಥೆ ಮಾಡಿಸಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ನಾನು ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಕೆಲಸ ಮಾಡುತ್ತಿದ್ದೇನೆ. ಕೂಡಲೇ ಈ ಸಮಸ್ಯೆ ನಿವಾರಣೆಗಾಗಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಶಾಲೆಗೆ ಕಳಿಸಿ ವರದಿ ಪಡೆದು ಕುಡಿವ ನೀರಿನ ವ್ಯವಸ್ಥೆ ಮಾಡಿಸುತ್ತೇನೆ.

- ಎಂ.ವೈ. ಪಾಟೀಲ್, ಶಾಸಕರು ಅಫಜಲ್ಪುರ

---

ಶಾಲೆಯಲ್ಲಿ ಕುಡಿವ ನೀರಿನ ಸೌಲಭ್ಯವಿಲ್ಲದ್ದಕ್ಕೆ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತಿದೆ. ಗ್ರಾ.ಪಂನವರು ಹಾಗೂ ಸಂಬಂಧ ಪಟ್ಟವರಿಗೆ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಗ್ರಾಮದ ಮನೆ ಮನೆಗಳಿಗೆ ಮಕ್ಕಳೊಂದಿಗೆ ತೆರಳಿ ದೇಣಿಗೆ ಸಂಗ್ರಹಿಸುತ್ತಿದ್ದು ದೇಣಿಗೆ ಹಣದಲ್ಲಿ ನೀರಿನ ವ್ಯವಸ್ಥೆ ಮಾಡಿಸಲು ಮುಂದಾಗಿದ್ದೇವೆ.

- ಮಕ್ಕಳ ಪಾಲಕರು

Share this article