ರೈತರ ಹನಿ ನೀರಾವರಿ ಸಹಾಯಧನಕ್ಕೂ ಬಿತ್ತು ಕತ್ತರಿ!

KannadaprabhaNewsNetwork |  
Published : Jul 04, 2024, 01:02 AM ISTUpdated : Jul 04, 2024, 10:10 AM IST
Vidhan soudha

ಸಾರಾಂಶ

ಹನಿ ನೀರಾವರಿ ಯೋಜನೆಗೆ ನೀಡುತ್ತಿದ್ದ ಶೇ.75ರ ಸಹಾಯಧನವನ್ನು ದಿಢೀರನೇ ರಾಜ್ಯ ಸರ್ಕಾರ ಶೇ.45ಕ್ಕೆ ಇಳಿಸಿದ್ದು, ಇದು ರೈತರ ಆಕ್ರೋಶಕ್ಕೆ ತುತ್ತಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ :  ಹನಿ ನೀರಾವರಿ ಯೋಜನೆಗೆ ನೀಡುತ್ತಿದ್ದ ಶೇ.75ರ ಸಹಾಯಧನವನ್ನು ದಿಢೀರನೇ ರಾಜ್ಯ ಸರ್ಕಾರ ಶೇ.45ಕ್ಕೆ ಇಳಿಸಿದ್ದು, ಇದು ರೈತರ ಆಕ್ರೋಶಕ್ಕೆ ತುತ್ತಾಗಿದೆ.

ಗ್ಯಾರಂಟಿ ಯೋಜನೆಯ ಪರಿಣಾಮದಿಂದ ಎದುರಾದ ಹಣಕಾಸು ಕೊರತೆ ತೂಗಿಸಲು ರಾಜ್ಯ ಸರ್ಕಾರ ಹನಿ ನೀರಾವರಿಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಪ್ರಸಕ್ತ ಸಾಲಿಗೆ ಇಳಿಕೆ ಮಾಡಿ ಆದೇಶ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.ಏನಿದು ಯೋಜನೆ:ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ಸಾಮಾನ್ಯ ರೈತರಿಗೆ ಶೇ.75ರಷ್ಟು ಸಬ್ಸಿಡಿ ದೊರೆಯುತ್ತಿತ್ತು. ಈ ಪೈಕಿ, ರಾಜ್ಯ ಸರ್ಕಾರ ಶೇ.48 ಹಾಗೂ ಕೇಂದ್ರ ಸರ್ಕಾರ ಶೇ.27ರಷ್ಟು ಸಬ್ಸಿಡಿ ನೀಡುತ್ತಿತ್ತು. ಕೇಂದ್ರ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಶೇ.27ರಷ್ಟು ಸಹಾಯಧನವನ್ನು ಘೋಷಣೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಸಹಾಯಧನವನ್ನು ಶೇ.48ರ ಬದಲಿಗೆ ಶೇ.18ಕ್ಕೆ ಇಳಿಕೆ ಮಾಡಿದ್ದರಿಂದ ರೈತರಿಗೆ ಶೇ.75 ಬದಲಿಗೆ ಶೇ.45ರಷ್ಟು ಮಾತ್ರ ಸಬ್ಸಿಡಿ ದೊರೆಯುತ್ತದೆ. ಉಳಿದ ಶೇ.55ನ್ನು ಈಗ ರೈತರೇ ಭರಿಸಬೇಕಾಗಿದೆ. ಈ ಹಿಂದೆ ರೈತರು ಕೇವಲ ಶೇ.25ರಷ್ಟನ್ನು ಮಾತ್ರ ಭರಿಸುತ್ತಿದ್ದರು. ಈಗ ರೈತರಿಗೆ ದುಪ್ಪಟ್ಟು ಹೊರೆಯಾಗಿದೆ.

ಆದರೆ, ಎಸ್‌ಸಿ ಮತ್ತು ಎಸ್‌ಟಿ ರೈತರಿಗೆ ಮಾತ್ರ ಶೇ.90ರಷ್ಟು ಸಬ್ಸಿಡಿಯನ್ನು ಮುಂದುವರಿಸಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ಸೇರಿ ಸಾಮಾನ್ಯ ರೈತರ ಸಬ್ಸಿಡಿ ಹಣಕ್ಕೆ ಮಾತ್ರ ಕತ್ತರಿ ಹಾಕಲಾಗಿದೆ.ರೈತರಿಗೆ ಹೊರೆ:ಮಳೆಯ ಅಭಾವ ಮತ್ತು ವಿದ್ಯುತ್ ಲೋಡ್‌ ಶೆಡ್ಡಿಂಗ್ ಸಮಸ್ಯೆಯಿಂದಾಗಿ ರಾಜ್ಯದ ಶೇ.50-60ರಷ್ಟು ರೈತರು (ಪಂಪ್‌ಸೆಟ್ ಆಧಾರಿತ ರೈತರು) ಹನಿ ನೀರಾವರಿ ಮೂಲಕ ಬೆಳೆ ಬೆಳೆಯುತ್ತಿದ್ದಾರೆ. ಸಾಮಾನ್ಯ ರೈತರಿಗೆ ಶೇ.75 ರಷ್ಟು ಮತ್ತು ಎಸ್ಸಿ-ಎಸ್ಟಿ ರೈತರಿಗೆ ಶೇ.90ರಷ್ಟು ಸಬ್ಸಿಡಿ ನೀಡುತ್ತಿದ್ದುದರಿಂದಲೇ ಅವರು ಹನಿ ನೀರಾವರಿ ಅಳವಡಿಸಿಕೊಳ್ಳಲು ಶಕ್ತರಾಗಿದ್ದಾರೆ. ಆದರೆ, ಈಗ ರಾಜ್ಯ ಸರ್ಕಾರ ತನ್ನ ಪಾಲಿನ ಸಬ್ಸಿಡಿಯಲ್ಲಿ ಕಡಿತ ಮಾಡಿದ್ದರಿಂದ ರೈತರ ಸಮುದಾಯಕ್ಕೆ ಬರೆ ಎಳೆದಂತೆ ಆಗಿದ್ದು, ಹನಿ ನೀರಾವರಿಯಿಂದ ವಿಮುಖರಾಗುವ ಸಾಧ್ಯತೆ ಇದೆ.

ಅಂದರೆ, ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತರು ₹1 ಲಕ್ಷ ವೆಚ್ಚ ಮಾಡಿದರೆ, ಅದರಲ್ಲಿ ಸಾಮಾನ್ಯ ರೈತರಿಗೆ ₹25,000 ಹಾಗೂ ಎಸ್ಸಿ-ಎಸ್ಟಿ ರೈತರಿಗೆ ₹10 ಸಾವಿರ ಖರ್ಚು ಬರುತ್ತಿತ್ತು, ಉಳಿದದ್ದು ಸರ್ಕಾರದ ಸಹಾಯಧನದಲ್ಲೇ ಸರಿ ಹೊಂದುತ್ತಿತ್ತು. ಆದರೆ, ಈಗ ಸಾಮಾನ್ಯ ರೈತರು ₹55,000 ವೆಚ್ಚದ ಹೊರೆ ಹೊರಬೇಕಾಗುತ್ತದೆ. ಇಷ್ಟೊಂದು ವೆಚ್ಚ ಮಾಡಿ, ಹನಿ ನೀರಾವರಿ ಅಳವಡಿಸಿಕೊಳ್ಳುವುದು ಅಸಾಧ್ಯ ಎನ್ನುತ್ತಾರೆ ರೈತರು.ತೀವ್ರ ವಿರೋಧ:

ರಾಜ್ಯ ಸರ್ಕಾರದ ನಡೆಗೆ ಸಚಿವರಿಂದಲೇ ವಿರೋಧ ವ್ಯಕ್ತವಾಗಿದೆ. ಸಾಮಾನ್ಯ ರೈತರ ಸಬ್ಸಿಡಿ ಮೊತ್ತವನ್ನು ಶೇ.75 ರಿಂದ 45ಕ್ಕೆ ಇಳಿಸಿದ್ದಕ್ಕೆ ಅನೇಕ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಹಾಯಧನ ಕಡಿತಗೊಳಿಸುವ ನಿರ್ಧಾರದಿಂದ ರೈತ ಸಮುದಾಯದ ಆಕ್ರೋಶಕ್ಕೆ ಸರ್ಕಾರ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಹಿಂದಿನಂತೆ ರೈತರ ಸಬ್ಸಿಡಿ ಮುಂದುವರಿಸಬೇಕೆಂದು ಹಲವು ಸಚಿವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸಬ್ಸಿಡಿ ಮೊತ್ತವನ್ನು ಕಡಿತ ಮಾಡಿದ್ದು, ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ. ಇದನ್ನು ಕೂಡಲೇ ಪರಿಷ್ಕರಣೆ ಮಾಡಿ, ಹಿಂದಿನಂತೆ ಶೇ.75ರಷ್ಟು ನೀಡದಿದ್ದರೆ ರೈತ ಸಮುದಾಯ ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತದೆ.- ಈಶಪ್ಪ ಮಾದಿನೂರು ಪ್ರಗತಿಪರ ರೈತ, ಕೊಪ್ಪಳ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ