ಗಡಿಜಿಲ್ಲೆ ಎಪಿಎಂಸಿಯಲ್ಲಿ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ

KannadaprabhaNewsNetwork | Published : Mar 7, 2024 1:56 AM

ಸಾರಾಂಶ

ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಖರೀದಿಸಲು ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭವಾಗಿರುವ ಖರೀದಿ ಕೇಂದ್ರವನ್ನು ಎಪಿಎಂಸಿ ಅಧ್ಯಕ್ಷ ಎಚ್.ಎನ್. ಮಹದೇವಸ್ವಾಮಿ (ಸೋಮೇಶ್) ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಖರೀದಿಸಲು ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭವಾಗಿರುವ ಖರೀದಿ ಕೇಂದ್ರವನ್ನು ಎಪಿಎಂಸಿ ಅಧ್ಯಕ್ಷ ಎಚ್.ಎನ್. ಮಹದೇವಸ್ವಾಮಿ (ಸೋಮೇಶ್) ಉದ್ಘಾಟಿಸಿದರು.

ನಗರದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಅನ್‌ಲೈನ್ ಮೂಲಕ ಕೊಬ್ಬರಿ ಖರೀದಿಸಲು ಮಾ. 6ರಿಂದ ರೈತರಿಗೆ ನೋಂದಾಣಿ ಮಾಡಲು ಅವಕಾಶ ನೀಡಿದೆ. ಇದರನ್ವಯ ಚಾಮರಾಜನಗರ ಎಪಿಎಂಸಿ ಪ್ರಾಂಗಣದಲ್ಲಿ ರೈತರ ಕೊಬ್ಬರಿಯನ್ನು ಖರೀದಿಸುವ ಕೇಂದ್ರಕ್ಕೆ ಚಾಲನೆ ನೀಡಿದರು.ಖರೀದಿ ಕೇಂದ್ರವನ್ನು ಎಪಿಎಂಸಿ ಅಧ್ಯಕ್ಷ ಎಚ್.ಎನ್. ಮಹದೇವಸ್ವಾಮಿ (ಸೋಮೇಶ್) ಉದ್ಘಾಟಿಸಿ ಮಾತನಾಡಿ, 2024ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 12 ಸಾವಿರ ರು. ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ. ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 1500 ರು. ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ. ಒಟ್ಟಾರೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 13,500 ರು. ರಂತೆ ಖರೀದಿಸಲಾಗುವುದು ಎಂದರು.

ಉಂಡೆ ಕೊಬ್ಬರಿ ಖರೀದಿಸಲು ನಾಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಮತ್ತು ರಾಜ್ಯದ ವತಿಯಿಂದ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿದೆ. ಇಂದಿನಿಂದಲೇ ಆರಂಭಗೊಂಡು ಮೇ ಕೊನೆಯ ವಾರದವರೆಗೆ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ರೈತ ಬಾಂಧವರು ಖರೀದಿ ಕೇಂದ್ರಗಳಲ್ಲಿ ಫ್ರೂಟ್ಸ್ ಎಫ್‌ಐಡಿ ನೀಡಿ ನೋಂದಾಯಿಸಿಕೊಂಡು ಯೋಜನೆಯ ಸದುಉಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರತಿ ಎಕರೆಗೆ 6 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಮಾತ್ರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ಪ್ರಮಾಣ ನಿಗದಿ ಪಡಿಸಲಾಗಿದೆ. ಖರೀದಿ ಕೇಂದ್ರಕ್ಕೆ ಎಫ್ಎಕ್ಯೂ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ತರಬೇಕು. ರೈತರಿಂದ ಖರೀದಿಸಲಾದ ಉಂಡೆ ಕೊಬ್ಬರಿಯ ಮೌಲ್ಯವನ್ನು ಡಿ.ಬಿ.ಟಿ ಮೂಲಕ ನೇರವಾಗಿ ಆಧಾರ್ ಜೋಡಣೆಯಾದ ಹಾಗೂ ಎನ್.ಪಿ.ಸಿ.ಐ ಸೀಡಿಂಗ್ ಆದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಚಾಮರಾಜನಗರ ಎಪಿಎಂಸಿಯಲ್ಲಿ ಖರೀದಿ ಅಧಿಕಾರಿಯನ್ನಾಗಿ ಶಶಿಧರ್ ಅವರನ್ನು ನೇಮಕ ಮಾಡಿದ್ದು, ಈ ಭಾಗದ ರೈತರು ಕೊಬ್ಬರಿಯನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಲು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ, ಮಾಜಿ ಅಧ್ಯಕ್ಷ ಮನೋಜ್ ಪಟೇಲ್, ನಿರ್ದೇಶಕರಾದ ವೆಂಕಟರಾವ್ ಸಾಠೆ, ವಿಜಯಲಕ್ಷ್ಮಮ್ಮ ಸಹಾಯಕ ಕಾರ್ಯದರ್ಶಿ ಮಧುಕುಮಾರ್, ಮಾರುಕಟ್ಟೆ ಅಧಿಕಾರಿ ಶಶಿಧರ್ ಮತ್ತಿತರರಿದ್ದರು.

Share this article