ಕನ್ನಡಪ್ರಭ ವಾರ್ತೆ ಬೆಂಗಳೂರು
ಒಂದೂವರೆ ಎರಡು ವರ್ಷ ವಿಳಂಬದ ಬಳಿಕ ಚಾಲಕ ರಹಿತ ಮೆಟ್ರೋ ರೈಲಿನ ಆರು ಬೋಗಿಗಳು ಸಿಲಿಕಾನ್ ಸಿಟಿ ತಲುಪಿವೆ. ಬುಧವಾರ ಹೆಬ್ಬಗೋಡಿ ಬಿಎಂಆರ್‌ಸಿಎಲ್ ಡಿಪೋಗೆ ಬಂದ ಇವುಗಳನ್ನು ಕಸ್ಟಮ್ಸ್‌ನಿಂದ ಅಂತಿಮ ಪರವಾನಗಿ ಸಿಕ್ಕ ಬಳಿಕ ಗುರುವಾರ ಅನ್‌ಲೋಡ್ ಮಾಡಲಾಗುತ್ತದೆ.
ರಾಷ್ಟ್ರೀಯ ವಿದ್ಯಾಲಯ ರಸ್ತೆ - ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗಕ್ಕಾಗಿ (19.15 ಕಿ.ಮೀ.) ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂಪನಿ ಲಿಮಿಟೆಡ್ ರೂಪಿಸಿರುವ ರೈಲ್ವೆ ಬೋಗಿಗಳು ಬುಧವಾರ ನಸುಕಿನ 3.30ಕ್ಕೆ ಡಿಪೋಗೆ ಬಂದು ತಲುಪಿವೆ.
ಜ.24ರಂದು ಚೀನಾದ ಬಂದರಿನಿಂದ ಹೊರಟಿದ್ದ ಇವು ಫೆ.6ರಂದು ಚೆನ್ನೈ ಕೃಷ್ಣಗಿರಿ ಬಂದರಿಗೆ ಆಗಮಿಸಿದ್ದವು. ಕಸ್ಟಮ್ಸ್ ಪ್ರಕ್ರಿಯೆ ಪೂರ್ಣಗೊಂಡು ಮೂರು ಲಾರಿಗಳ ಮೂಲಕ ಅವುಗಳನ್ನು ಬೆಂಗಳೂರಿಗೆ ತರಲಾಗಿದೆ. ಇವುಗಳನ್ನು ಮುಂದಿನ ನಾಲ್ಕು ತಿಂಗಳು ವಿವಿಧ ಬಗೆಯ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗುತ್ತದೆ.
ಎರಡು ವರ್ಷ ವಿಳಂಬ: 2019ರ ಡಿಸೆಂಬರ್‌ನಲ್ಲಿ ಸಿಆರ್‌ಆರ್‌ಸಿ ಜೊತೆಗೆ ಬೆಂಗಳೂರು ಮೆಟ್ರೋ ನಿಗಮ ಒಟ್ಟಾರೆ 216 ಬೋಗಿಗಳನ್ನು (36 ರೈಲು) ಪೂರೈಸುವಂತೆ ಮಾಡಿಕೊಂಡ ಒಪ್ಪಂದದ ಪ್ರಕಾರ 2022ರೊಳಗೆ ಎಲ್ಲ ಬೋಗಿಗಳು ತಲುಬೇಕಿತ್ತು.
ಆದರೆ, ಸಿಆರ್‌ಆರ್‌ಸಿ ಕಂಪನಿಗೆ ಮೇಕ್ ಇನ್ ಇಂಡಿಯಾ ಅಡಿ ಭಾರತೀಯ ಕಂಪನಿಯ ಸಹಯೋಗದಲ್ಲಿ ಶೇ.75ರಷ್ಟು ಬೋಗಿಗಳನ್ನು ದೇಶದಲ್ಲಿಯೇ ನಿರ್ಮಿಸುವ ನಿಬಂಧನೆ ಇತ್ತು. ಭಾರತದಲ್ಲಿ ಸಹ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಳಂಬವಾಯಿತು.
ಇದಾದ ಬಳಿಕ ಕೋವಿಡ್, ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹಾಗೂ ಚೀನಾ ಜೊತೆಗಿನ ವಾಣಿಜ್ಯ ಸಂಬಂಧದಲ್ಲಿ ಉಂಟಾದ ವೈಮನಸ್ಸು ಸೇರಿ ಬೋಗಿಗಳ ನಿರ್ಮಾಣ ವಿಳಂಬವಾಯಿತು.
ಸಿಆರ್‌ಆರ್‌ಸಿ ಕೊಲ್ಕತ್ತಾ ಮೂಲದ ತಿತಾಘರ್ ರೈಲ್ ಮ್ಯಾನುಫ್ಯಾಕ್ಚರ್ ಕಂಪನಿಯ ಜೊತೆ ನಮ್ಮ ಮೆಟ್ರೋಗೆ ಬೋಗಿ ಒದಗಿಸುವ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಎರಡು ಸೆಟ್ ರೈಲನ್ನು ಸಿಆರ್‌ಆರ್‌ಸಿ, ತೀತಾಘರ್ ಕಂಪನಿ 204 ಬೋಗಿಗಳನ್ನು (34 ರೈಲು) ನಿರ್ಮಿಸಿಕೊಡಲಿದೆ.
ವಿವಿಧ ಪರೀಕ್ಷೆ
ಲಕ್ನೋದ ಆರ್‌ಡಿಎಸ್‌ಒ (ರಿಸರ್ಚ್, ಡಿಸೈನ್, ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್) ಸಂಸ್ಥೆ ಈ ಬೋಗಿಗಳನ್ನು ವಿವಿಧ ಬಗೆಯ ಪರೀಕ್ಷೆಗೆ ಒಳಪಡಿಸಲಿದೆ.
ಬಳಿಕ ತಾಂತ್ರಿಕ ಪರವಾನಗಿಗಾಗಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತಾಲಯ (ಸಿಎಂಆರ್‌ಎಸ್) ಹಾಗೂ ರೈಲ್ವೆ ಸುರಕ್ಷತಾ ಪ್ರಧಾನ ಆಯುಕ್ತರ (ಸಿಸಿಆರ್‌ಎಸ್) ಮೂಲಕ ರೈಲ್ವೆ ಟೆಕ್ನಿಕಲ್ ಬೋರ್ಡ್‌ಗೆ ವರದಿ ಸಲ್ಲಿಸಲಾಗುವುದು.
ಅಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಪುನಃ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮಾರ್ಗದ ತಪಾಸಣೆ ನಡೆಸಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಿದ್ದಾರೆ. ಇದಕ್ಕೆ ಕನಿಷ್ಠ ನಾಲ್ಕು ತಿಂಗಳು ತಗುಲಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ತಿಳಿಸಿದರು.
ಯಾಕಿಷ್ಟು ತಪಾಸಣೆ?
ಈಗಿನ ನೇರಳೆ, ಹಸಿರು ಮಾರ್ಗದಲ್ಲಿ ಓಡುವ ರೈಲುಗಳು ಡಿಟಿಜಿ (ಡಿಸ್ಟೆನ್ಸ್ ಟು ಗೋ) ಸಿಗ್ನಲ್ ಸಿಸ್ಟ್ಂ ಮೂಲಕ ಸಂಚರಿಸುತ್ತಿವೆ. ಆದರೆ, ಹೊಸ ಬೋಗಿಗಳು ಸಿಬಿಟಿಸಿ (ಕಮ್ಯೂನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ಸಿಗ್ನಲ್ ಸಿಸ್ಟಮ್ ಅಂದರೆ ಚಾಲಕ ರಹಿತವಾಗಿ ಸಂಚರಿಸಲಿವೆ. ಹಾಗಾಗಿ ಈ ಬೋಗಿಗಳು ತೀವ್ರವಾಗಿ ತಪಾಸಣೆಗೆ ಒಳಗಾಗಬೇಕಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಯಾರಿಗೆ ಪ್ರಯೋಜನ: ಈ ವರ್ಷಾಂತ್ಯದಲ್ಲಿ ಹಳದಿ ಮಾರ್ಗ ಜನ ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡಬಲ್ ಡೆಕ್ಕರ್ (ರಸ್ತೆ-ಮೆಟ್ರೋ ಮಾರ್ಗ) ಹೊಂದಿರುವ ಈ ಮಾರ್ಗದಲ್ಲಿ ದೇಶದ ಅತ್ಯಂತ ಎತ್ತರದ ಜಯದೇವ ಮೆಟ್ರೋ ನಿಲ್ದಾಣ ಸೇರಿ 16 ನಿಲ್ದಾಣಗಳಿವೆ.
ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿ ಹಾಗೂ ಜಯನಗರ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಜನರಿಗೆ ಅನುಕೂಲವಾಗಲಿದೆ.
ಬೋಗಿಗಳು ನಾಲ್ಕು ತಿಂಗಳು ಆರ್‌ಡಿಎಸ್‌ಒ, ಸಿಎಂಆರ್‌ಎಸ್ ಹಾಗೂ ಸಿಸಿಆರ್‌ಎಸ್‌ನಿಂದ ತಾಂತ್ರಿಕ ತಪಾಸಣೆಗೆ ಒಳಗಾಗಲಿದೆ. ಸಿಎಂಆರ್‌ಎಸ್ ಒಪ್ಪಿಗೆ ಬಳಿಕ ಹಳದಿ ಮಾರ್ಗದ ರೈಲು ಸಂಚಾರ ಆರಂಭವಾಗಲಿದೆ. - ಯಶವಂತ ಚೌಹಾಣ್, ಬಿಎಂಆರ್‌ಸಿಎಲ್ ಸಿಪಿಆರ್‌ಒ