ಚಾಲಕರಿಂದಲೇ ಡ್ರೈವರ್‌ಲೆಸ್‌ ಮೆಟ್ರೋ ಚಾಲನೆ

KannadaprabhaNewsNetwork | Updated : Mar 07 2024, 04:16 PM IST

ಸಾರಾಂಶ

ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಪರೀಕ್ಷೆ ಆರಂಭವಾಗಿದೆ. ಸದ್ಯಕ್ಕೆ ಚಾಲಕರಿಂದಲೇ ಮೆಟ್ರೋವನ್ನು ಓಡಿಸಲಾಗುತ್ತದೆ. ಬಳಿಕ ಚಾಲಕರಹಿತವಾಗಿ ಸಂಚಾರ ಆರಂಭಿಸಲು ಚಿಂತನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ನಮ್ಮ ಮೆಟ್ರೋದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಣ 18.82 ಕಿ.ಮೀ. ಅಂತರದ ಹಳದಿ ಮಾರ್ಗದಲ್ಲಿ ವರ್ಷಾಂತ್ಯಕ್ಕೆ ಪ್ರಯಾಣಿಕ ರೈಲು ಸಂಚರಿಸಲಿದ್ದು, ಚಾಲಕ ರಹಿತ ರೈಲು ಇದಾಗಿದ್ದರೂ ಆರಂಭದಲ್ಲಿ ಚಾಲಕರಿಂದಲೇ ರೈಲು ಓಡಿಸಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಬುಧವಾರ ಹೆಬ್ಬಗೋಡಿ ಡಿಪೋ ಯೋಜನಾ ವ್ಯವಸ್ಥಾಪಕ ಜಿತೇಂದ್ರಝಾ ಅವರು ಚಾಲಕ ರಹಿತ ಮೆಟ್ರೋ ರೈಲಿನ ವಿಶೇಷತೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಈ ವಿಷಯ ತಿಳಿಸಿದರು.

ವಾಣಿಜ್ಯ ಸಂಚಾರಕ್ಕೆ ಕನಿಷ್ಠ ಏಳು ರೈಲುಗಳು ಬೇಕಾಗುತ್ತವೆ. ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಇಷ್ಟು ರೈಲುಗಳು ಸೇರುವ ನಿರೀಕ್ಷೆಯಿದೆ. ಏಳು ರೈಲುಗಳು ಬಂದಲ್ಲಿ 15 ನಿಮಿಷಕ್ಕೊಮ್ಮೆ ಒಂದು ರೈಲು ಓಡಿಸಬಹುದು. ರೈಲುಗಳು ಹೆಚ್ಚಾದಷ್ಟು, ಸಂಚಾರ ಅವಧಿಯ ಅಂತರ ತಗ್ಗಲಿದೆ ಎಂದು ತಿಳಿಸಿದರು.

ಹಳದಿ ಮಾರ್ಗದ ರೈಲು ಸಂಚಾರದ ಸಿಗ್ನಲಿಂಗ್‌ ಪರೀಕ್ಷೆಗಾಗಿ ಕನಿಷ್ಠ ಎರಡು ರೈಲುಗಳ ಅಗತ್ಯವಿದೆ. ಸದ್ಯ ಚೀನಾದ ಸಿಆರ್‌ಆರ್‌ಸಿ ನಿರ್ಮಿಸಿ ಕಳುಹಿಸಿರುವ ಒಂದು ರೈಲು ಮಾತ್ರ ನಮ್ಮ ಬಳಿಯಿದೆ. ಮುಂದಿನ ಜೂನ್‌-ಜುಲೈ ವೇಳೆಗೆ ಪಶ್ಚಿಮ ಬಂಗಾಳದ ತಿತಾಘರ್‌ ಕಂಪನಿಯಿಂದ ಎರಡು ರೈಲುಗಳು ಬರಲಿವೆ. ಚೀನಾದಿಂದಲೂ ಇನ್ನೊಂದು ಸೆಟ್‌ ರೈಲು ಬರಬೇಕಿದೆ. ತಿತಾಘರ್‌ ಸಂಸ್ಥೆ ಎಷ್ಟು ಬೇಗ ರೈಲು ಪೂರೈಸುತ್ತದೆಯೊ ಅಷ್ಟು ಬೇಗ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ವಿವರಿಸಿದರು.

ಈಗ ಬಂದಿರುವ ರೈಲು ನಾಲ್ಕು ತಿಂಗಳಲ್ಲಿ 37ಕ್ಕೂ ಹೆಚ್ಚಿನ ಬಗೆಯ ಪರೀಕ್ಷೆಗೆ ಒಳಪಡಲಿದೆ. ಬಳಿಕ 45 ದಿನಗಳವರೆಗೆ ಸಿಗ್ನಲಿಂಗ್ ವ್ಯವಸ್ಥೆ, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಇತ್ಯಾದಿ ಪರೀಕ್ಷೆ ಮಾಡಲಾಗುತ್ತದೆ ಎಂದರು.

ಟ್ರ್ಯಾಕ್‌ ಮಾನಿಟರಿಂಗ್‌: ದೇಶದ ಮೊದಲ ರೈಲು

ರೈಲಿನ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಟ್ರ್ಯಾಕ್ ಮಾನಿಟರಿಂಗ್ ವ್ಯವಸ್ಥೆಯಿದೆ. ಅಂದರೆ ರೈಲು ಸಂಚರಿಸುವ ಪ್ರತಿ ಹಂತದಲ್ಲೂ ಟ್ರ್ಯಾಕ್‌ನ ಪ್ರತಿ ಅಂಶವೂ ದಾಖಲಾಗುತ್ತದೆ. ಈ ವ್ಯವಸ್ಥೆ ಹೊಂದಿದ ಭಾರತ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಟ್ರ್ಯಾಕ್‌ನಲ್ಲಿನ ಸಣ್ಣ, ಸೂಕ್ಷ್ಮ ವ್ಯತ್ಯಯಗಳು ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ (ಒಸಿಸಿ) ಸಂದೇಶ ರವಾನೆಯಾಗಲಿದೆ. ರೈಲಿನೊಳಗೆ ಬೆಂಕಿ, ಹೊಗೆ ಕಾಣಿಸಿದಲ್ಲಿ ಕ್ಷಣದಲ್ಲಿ ಕೇಂದ್ರಕ್ಕೆ ಮಾಹಿತಿ ಸಿಗುತ್ತದೆ. ಇದರಿಂದ ಮೆಟ್ರೊ ನಿಲ್ದಾಣದಲ್ಲಿ ರೈಲು ನಿಲ್ಲಿಸಲು ಅನುಕೂಲವಾಗಲಿದೆ.

ಎರಡು ಬೋಗಿ ಸೇರುವ ಸ್ಥಳ (ಗ್ಯಾಂಗ್‌ವೇ) ವಿನ್ಯಾಸವನ್ನು ಡ್ರಮ್ ಮಾದರಿಯಲ್ಲಿ ರೂಪಿಸಲಾಗಿದೆ. ಇದರಿಂದ ರೈಲು ತಿರುವುಗಳಲ್ಲಿ ಸರಾಗವಾಗಿ ಸಂಚರಿಸಲು ಸಾಧ್ಯವಾಗಲಿದೆ.

ಲಾಲ್‌ಬಾಗ್‌ ಗಾಜಿನ ಮನೆ ಕಮಾನು, ಗಂಡಭೇರುಂಡದ ಕಾಲ ಕೆಳ ಭಾಗದ ರೆಕ್ಕೆ ಮಾದರಿಯಲ್ಲಿ ಚಾಲಕ ರಹಿತ ಹೊಸ ರೈಲಿನ ಮುಂಭಾಗ ವಿನ್ಯಾಸ ಮಾಡಲಾಗಿದೆ. ಎಲ್‌ಸಿಡಿ ಪರದೆ ಮೂಲಕ ನಿಲ್ದಾಣಗಳ ಮಾರ್ಗಸೂಚಿ ನೀಡಲಾಗುವುದು. ಜಾಹೀರಾತು ಪ್ರಸಾರಕ್ಕೆ ವಿಶೇಷ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಮ್ಯಾನುವಲ್ ಜಾಹೀರಾತಿಗೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜೀತೇಂದ್ರಝಾ ತಿಳಿಸಿದರು.

ಒಸಿಸಿ ಮೂಲಕವೇ ಏಕಕಾಲದಲ್ಲಿ ಎಲ್ಲ ಬೋಗಿಗಳ ಜಾಹಿರಾತು ಬದಲಿಸಬಹುದು. ಹಾಗೆಯೇ ಅಗತ್ಯ ಸೂಚನೆ ನೀಡಬಹುದು. ಈಗಿರುವ ರೈಲುಗಳಲ್ಲಿ ಪ್ರತಿಯೊಂದು ಬೋಗಿಗೂ ಪ್ರತ್ಯೇಕವಾಗಿ ಸೆಟ್ ಮಾಡಬೇಕಿದೆ ಎಂದರು.

ಸುರಕ್ಷತೆ ದೃಷ್ಟಿಯಿಂದ ರೈಲಿನ ಎದುರು ಹಾಗೂ ಅಕ್ಕಪಕ್ಕದಲ್ಲಿ ಕ್ಯಾಮೆರಾ ಇದೆ. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಎಮರ್ಜೆನ್ಸಿ ಎಗ್ರೆಸ್ ಡಿವೈಸ್ (ಇಇಡಿ) ಹ್ಯಾಂಡಲನ್ನು ನವೀಕರಿಸಲಾಗಿದೆ. ಪ್ರಯಾಣಿಕ ಇದನ್ನು ಎಳೆದರೆ, ಒಸಿಸಿ ರೈಲು ನಿರ್ವಾಹಕರಿಗೆ ಸಂದೇಶ ರವಾನೆ ಆಗುತ್ತದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಸ್ಥಿತಿ ನೋಡಿ ಬಾಗಿಲು ತೆರೆಯಲಾಗುತ್ತದೆ.

ರೈಲಿನಲ್ಲಿ ಯಾವ ಬೋಗಿಯನ್ನಾದರೂ ಮಹಿಳಾ ಬೋಗಿಯಾಗಿ ಬಳಸಬಹುದು. ಮಹಿಳೆಯರಿಗೆ ಮೀಸಲಿಟ್ಟ ಬೋಗಿ ಯಾವುದೆಂದು ತಿಳಿಯಲು ರೈಲು ಹೊರಗಡೆ ಎಲ್‌ಐಟಿ ಪರದೆಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Share this article