ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಸದಾ ಕಾಲ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ವಾಹನ ಚಾಲಕರು ಸೇರಿದಂತೆ ಶ್ರಮಿಕ ವರ್ಗದವರು ವೃತ್ತಿ ನಿರ್ವಹಣೆಯ ನಡುವೆಯೂ ತಮ್ಮ ಆರೋಗ್ಯದ ಕಡೆಗೂ ಆದ್ಯತೆ ನೀಡಬೇಕಿದೆ ಎಂದು ಲಯನ್ಸ್ ಕ್ಲಬ್‌ನ ಅಧ್ಯಕ್ಷ ನಂಬಳ ಮುರಳಿ ಅಭಿಪ್ರಾಯಪಟ್ಟರು.ಲಯನ್ಸ್ ಕ್ಲಬ್ ವತಿಯಿಂದ ಶುಕ್ರವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ತಾಲೂಕು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದ ನಿಲ್ದಾಣಕ್ಕೆ ಬರುವ ಬಸ್‍ಗಳು ಹಾಗೂ ಆಟೋರಿಕ್ಷಾ ಚಾಲಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಸಹಜವಾಗಿ ಪ್ರಮುಖ ಮಾರ್ಗಗಳು ಹಾಗೂ ದೂರದ ಊರುಗಳಿಗೆ ಸಂಚರಿಸುವ ಬಸ್‍ಗಳ ಚಾಲಕರುಗಳಿಗೆ ಹೆದ್ದಾರಿಯ ಅಡೆತಡೆಗಳು, ಕಲೆಕ್ಷನ್, ಟೈಂ ಮೈಂಟೇನೆನ್ಸ್ ಮುಂತಾದ ಕಾರಣಗಳಿಂದ ಊಟ ತಿಂಡಿ ಕೂಡ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಸದಾ ಒತ್ತಡದಲ್ಲೇ ವಾಹನ ಚಲಾಯಿಸುವ ಒತ್ತಡ ಸಹಜವಾಗಿರುತ್ತದೆ. ಕುಟುಂಬ ನಿರ್ವಹಣೆಗೆ ದಿನದ ದುಡಿಮೆ ಯನ್ನೇ ಅವಲಂಬಿಸಿ ಬದುಕು ಸಾಗಿಸುವ ಶ್ರಮಜೀವಿ ಬಂಧುಗಳು ಯಾವುದೇ ವ್ಯಸನಗಳಿಗೂ ಬಲಿಯಾಗದೇ ಆರೋಗ್ಯದ ಕಡೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ಆರೋಗ್ಯ ತಪಾಸಣೆ ನಡೆಸಿದ ತಾಲೂಕು ವೈಧ್ಯಾಧಿಕಾರಿ ಡಾ.ಅನಿಕೇತನ್ ತಪಾಸಣೆ ನಡೆಸಿದವರಲ್ಲಿ ಬಿಪಿ, ಶುಗರ್ ಅಧಿಕವಾಗಿದ್ದು, ಈ ಬಗ್ಗೆ ಅಲಕ್ಷ್ಯ ಮಾಡದೇ ಗಂಭೀರವಾಗಿ ಗಮನಹರಿಸಬೇಕಿದೆ. ಬಿಪಿ, ಶುಗರ್ ವ್ಯತ್ಯಯ ಇರುವವರು ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ತಜ್ಞ ವೈದ್ಯರಿಂದ ತುರ್ತು ಚಿಕಿತ್ಸೆಯನ್ನೂ ಪಡೆಯುವ ಅಗತ್ಯವಿದೆ ಎಂದೂ ಸಲಹೆ ನೀಡಿದರು.ಕ್ಲಬ್‌ನ ಪಧಾಧಿಕಾರಿಗಳಾದ ಎಚ್.ಪಾಂಡುರಂಗಪ್ಪ, ರಾಮರಾವ್, ನಿರ್ಮಲಾನಂದ, ಕಾರ್ತಿಕ್ ಶರ್ಮಾ, ಕಿಮ್ಮನೆ ದಿವಾಕರ್ ಹಾಗೂ ರಾಘವೇಂದ್ರ ಇದ್ದರು. ನೂರಾರು ಮಂದಿ ಬಿಪಿ, ಶುಗರ್ ಇಸಿಜಿ ತಪಾಸಣೆ ಇದ್ದ ಈ ಶಿಬಿರ ಸದುಪಯೋಗಪಡಿಸಿಕೊಂಡರು.