ಗೋವಾ ಮದ್ಯ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಡ್ರೋಣ್

KannadaprabhaNewsNetwork | Published : Jan 20, 2024 2:06 AM

ಸಾರಾಂಶ

ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿದ್ದು, ಇದನ್ನು ತಡೆಯಲು ಅಬಕಾರಿ ಇಲಾಖೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ. ಆದರೂ ಸಹ ಅಕ್ರಮವಾಗಿ ಮದ್ಯ ಸಾಗಾಟ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಡ್ರೋಣ್ ಬಳಕೆಗೆ ಮುಂದಾಗಿದೆ.

ಜಿ.ಡಿ. ಹೆಗಡೆ

ಕಾರವಾರ:

ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿದ್ದು, ಇದನ್ನು ತಡೆಯಲು ಅಬಕಾರಿ ಇಲಾಖೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ. ಆದರೂ ಸಹ ಅಕ್ರಮವಾಗಿ ಮದ್ಯ ಸಾಗಾಟ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಡ್ರೋಣ್ ಬಳಕೆಗೆ ಮುಂದಾಗಿದೆ.

ಗೋವಾದಲ್ಲಿ ಅಬಕಾರಿ ಸುಂಕ ಕಡಿಮೆ ಇರುವುದರಿಂದ ಅಲ್ಲಿ ಮದ್ಯದ ವಿವಿಧ ಬ್ರ್ಯಾಂಡ್‌ಗಳು ಕರ್ನಾಟಕಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತವೆ. ಹೀಗಾಗಿ ಕರ್ನಾಟಕದ ಗಡಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಜೋಯಿಡಾ ಭಾಗದಲ್ಲಿ ಗೋವಾ ಮದ್ಯ ಅಕ್ರಮ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಅಬಕಾರಿ, ಪೊಲೀಸ್ ಇಲಾಖೆ ತಪಾಸಣೆ, ದಾಳಿ ನಡೆಸುತ್ತಿದ್ದರೂ ಕಡಿಮೆಯಾಗಿಲ್ಲ. ಹೀಗಾಗಿ ಅಕ್ರಮ ಮದ್ಯ ಸಾಗಾಟ, ಕಾಡುಗಳಲ್ಲಿ ದಾಸ್ತಾನಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆಯಿಂದ ಡ್ರೋಣ್ ಖರೀದಿಸಲಾಗಿದ್ದು, ಇದನ್ನು ಬಳಸಿ ಅರಣ್ಯ ಹಾಗೂ ಜಲಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇದರಿಂದಾಗಿ ಅಬಕಾರಿ ಅಧಿಕಾರಿಗಳಿಗೆ ತೆರಳಲಾಗದ ಗೊಂಡಾರಣ್ಯ ಸ್ಥಳಗಳನ್ನು ಕೂಡ ನೋಡಬಹುದಾಗಿದ್ದು, ಎಲ್ಲಿ ಏನಿದೆ ಎಂಬುದು ಕ್ಯಾಮೆರಾ ಮೂಲಕ ತಿಳಿಯುತ್ತಿದೆ. ಕಾರಣ ಅರಣ್ಯದಲ್ಲಿ ನದಿ, ಸಮುದ್ರದಲ್ಲಿ ಸಹ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದರೆ ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ೪ ತಿಂಗಳಲ್ಲಿ ೪೫ ಪ್ರಕರಣ ದಾಖಲಾಗಿದ್ದು, ೩ ಸಾವಿರ ಲೀಟರ್‌ ಗೋವಾ ಮದ್ಯ, ೬೦೦ ಲೀಟರ್‌ ಗೋವಾ ಫೆನ್ನಿ, ೧೬ ವಾಹನ ಜಪ್ತು ಮಾಡಲಾಗಿದೆ. ಕರ್ನಾಟಕದಲ್ಲಿ ಈಚೆಗೆ ಕೆಲವು ಬ್ರ್ಯಾಂಡ್‌ ಮದ್ಯದ ದರ ಏರಿಕೆ ಮಾಡಲಾಗಿದ್ದು, ಗೋವಾ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದೆ. ಅಕ್ರಮ ಮದ್ಯ ಸಾಗಾಟದಾರರು ಜಲ ಹಾಗೂ ಅರಣ್ಯ ಮಾರ್ಗದ ಮೂಲಕ ಗೋವಾದಲ್ಲಿ ತಯಾರಾಗುವ ಮದ್ಯವನ್ನು ಕರ್ನಾಟಕಕ್ಕೆ ತರುತ್ತಿದ್ದಾರೆ. ಕಾರಣ ಮತ್ತಷ್ಟು ಅಕ್ರಮ ಸಾಗಾಟ ಹೆಚ್ಚಾಗುತ್ತಿದ್ದು, ಅಬಕಾರಿ ಅಧಿಕಾರಿಗಳು ದಾನಿಗಳ ಸಹಾಯದಿಂದ ದ್ರೋಣ್ ಖರೀದಿಸಿದ್ದಾರೆ. ಗೋವಾ ಮದ್ಯದ ಅಕ್ರಮವಾಗಿ ತರುವವರಿಗೆ ಕಡಿವಾಣ ಹಾಕಲು ಹೊರಟಿದ್ದಾರೆ.

ನಿರಂತರವಾಗಿ ಅನಮೋಡ, ಮಾಜಾಳಿಯಲ್ಲಿ ಇರುವ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ, ವಿವಿಧ ತಂಡ ರಚಿಸುವ ಮೂಲಕ ಅಕ್ರಮ ಗೋವಾ ಮದ್ಯ ಸಾಗಾಟ ತಡೆಯಲು ಈಗಾಗಲೇ ಹಲವು ಕ್ರಮ ವಹಿಸಲಾಗಿದೆ. ಆದರೂ ಜಲ, ಅರಣ್ಯ ಮಾರ್ಗದಲ್ಲಿ ಕೂಡಾ ಮದ್ಯ ಸಾಗಾಟ ಆಗುತ್ತಿದೆ. ಅದರಲ್ಲೂ ಗೊಂಡಾರಣ್ಯದಲ್ಲಿ ಕಾಲುದಾರಿ ಮೂಲಕ ತಲೆಯ ಮೇಲೆ ಹೊತ್ತು ಗೋವಾ ಮದ್ಯ ಸಾಗಾಟ ಮಾಡಲಾಗುತ್ತದೆ. ಇದನ್ನು ಕೂಡಾ ತಡೆಯುವ ನಿಟ್ಟಿನಲ್ಲಿ ಡ್ರೋಣ್ ಬಳಕೆ ಮಾಡಿ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉತ್ತರ ಕನ್ನಡ ಅಬಕಾರಿ ಡಿಸಿ ರೂಪಾ ತಿಳಿಸಿದ್ದಾರೆ.

Share this article