ಯಾದಗಿರಿ ಜಿಲ್ಲೆಗೆ ಬರ ಆಯ್ತು, ಈಗ ನೆರೆ ಭೀತಿ!

KannadaprabhaNewsNetwork | Published : Jul 28, 2024 2:01 AM

ಸಾರಾಂಶ

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್‌ ನೀರು । ಕೊಳ್ಳೂರು (ಎಂ) ಸೇತುವೆ ಸಂಪೂರ್ಣ ಮುಳುಗಡೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಬರದ ಬವಣೆಯಿಂದ ನಲುಗಿದ್ದ ಜಿಲ್ಲೆಯ ಹಲವೆಡೆ ಇದೀಗ ನೆರೆ ಭೀತಿ ಎದುರಾಗಿದೆ. ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3ಲಕ್ಷ ಕ್ಯುಸೆಕ್‌ ಪ್ರಮಾಣದಷ್ಟು ನೀರನ್ನು ಹೊರಬಿಟ್ಟಿದ್ದರಿಂದ ಕೃಷ್ಣಾ ನದಿಪಾತ್ರದ ಸುಮಾರು 45 ಹಳ್ಳಿಗಳಲ್ಲಿ ಪ್ರವಾಹ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನದಿಪಾತ್ರದ ಜನರಿಗೆ ಸುರಕ್ಷತೆ ಕುರಿತು ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ಭಾರಿ ಪ್ರಮಾಣದ ನೀರನ್ನು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಬಿಡಲಾಗುತ್ತಿದೆ. ಹೀಗಾಗಿ, ಬಸವ ಸಾಗರ ಜಲಾಶಯ ತನ್ನ ನೀರಿನ ಮಟ್ಟ ಕಾಯ್ದಿಟ್ಟುಕೊಂಡು, ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹೊರಬಿಡಲಾಗುತ್ತಿದೆ.

ಶುಕ್ರವಾರ ಸಂಜೆವೇಳೆಗೆ 30ಗೇಟುಗಳ ಮುಖಾಂತರ 3ಲಕ್ಷ ಕ್ಯುಸೆಕ್‌ಗೂ ಮೀರಿ ನೀರು ಬಿಡಲಾಗಿದೆ. ಕಳೆದ 10-15ದಿನಗಳ ಅಂತರದಲ್ಲಿ ಪ್ರತಿದಿನ 1 ರಿಂದ 3 ಲಕ್ಷ ಕ್ಯುಸೆಕ್‌ನಂತೆ, ಈವರೆಗೆ ಸುಮಾರು 13 ಟಿಎಂಸಿ ನೀರು ಜಲಾಶಯದಿಂದ ಕೃಷ್ಣಾ ನದಿಗೆ ಹೊರಬಿಡಲಾಗಿದೆ.

ಇತ್ತ, ಆಲಮಟ್ಟಿಯಿಂದ ಹೆಚ್ಚಿನ ನೀರನ್ನು ಹೊರಬಿಡುವಂತೆ ಮಹಾರಾಷ್ಟ್ರ ಸರ್ಕಾರದ ಉಪ ಮುಖ್ಯಮಂತ್ರಿ ಅಜೀತ್‌ ಪವಾರ್‌ ಕಾರ್ನಟಕ ಸರ್ಕಾರಕ್ಕೆ ಕೋರಿದ್ದಾರೆ. ಆಲಮಟ್ಟಿಯಿಂದ ಹೆಚ್ಚಿನ ನೀರನ್ನು ಹೊರಬಿಡದಿದ್ದರೆ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಕೋಲ್ಹಾಪುರಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಲಿದೆ ಎಂದು ಅಲ್ಲಿನ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಹಾಗೊಂದು ವೇಳೆ, ಅಲ್ಲಿನ ಕೋರಿಕೆಯಂತೆ ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸಿದರೆ ಯಾದಗಿರಿ ಜಿಲ್ಲೆಯ ಕೃಷ್ಣಾ ಪಾತ್ರದ 45 ಗ್ರಾಮಗಳಿಗೆ ಪ್ರವಾಹ ಪರಿಸ್ಥಿತಿ ಆತಂಕ ಎದುರಾಗಬಹುದು. ನದಿ ಪಾತ್ರದ ಗ್ರಾಮಗಳಲ್ಲಿ ಈಗಾಗಲೇ ಮುಂಜಾಗ್ರತೆ ಘೋಷಿಸಿದ ಜಿಲ್ಲಾಡಳಿತ, ಸಂಕಷ್ಟ ಬಂದರೆ ಅದ ನಿಭಾಯಿಸಲು ನೋಡಲ್‌ ಅಧಿಕಾರಿಗಳ ನೇಮಿಸಿ, ಸಹಾಯವಾಣಿ ಆರಂಭಿಸಿದೆ. ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಅವರು ನೆರೆ ಬಾಧಿತ ಪ್ರದೇಶಗಳಿಗೆ ತೆರಳಿ ವೀಕ್ಷಿಸಿದ್ದಾರೆ.

-ಭತ್ತದ ಬೆಳೆ ಕೃಷ್ಣಾರ್ಪಣ

ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಡುಗಡೆಯಾಗಿದ್ದರಿಂದ ನದಿ ಪಾತ್ರದ ಗ್ರಾಮಗಳ ಹಲವೆಡೆ ಹೊಲಗದ್ದೆಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ಕಳೆದ ವರ್ಷ ಬರ ಕೈಕೊಟ್ಟಿದ್ದರಿಂದ, ಈ ವರ್ಷವಾದರೂ ಉತ್ತಮ ಬೆಳೆ ನಿರೀಕ್ಷಿಸಿದ್ದ ರೈತರಿಗೆ ಮತ್ತೇ ನೆರೆ ಸಂಕಷ್ಟ ಕಾಡುತ್ತಿದೆ.

ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದಲ್ಲಿ ಸುಮಾರು 500 ಎಕರೆಗೂ ಹೆಚ್ಚು ಗದ್ದೆಗಳಲ್ಲಿ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ. ಜಿಲ್ಲಾಡಳಿತದ ಸೂಚನೆಯಂತೆ ಕೆಲವರು ಪಂಪ್‌ಸೆಟ್ಟುಗಳನ್ನು ಹೊರತೆಗೆದರಾದರೂ, ಇನ್ನೂ ಹಲವು ಸಿಲುಕಿಕೊಂಡಿವೆ. ಈ ಬಾರಿ ಬೆಳೆ ಕೈಕೊಡುವ ಆತಂಕ ಎದುರಾಗಿದೆ ಎಂದು ಕೊಳ್ಳೂರು (ಎಂ) ಗ್ರಾಮದ ಶಿವಾರೆಡ್ಡಿ ನೋವು ತೋಡಿಕೊಂಡರು.

ದೇವಾಪುರದ ನದಿಯಂಚಿನ ಹೊಲಗದ್ದೆಗಳಲ್ಲಿ ನೀರು ನುಗ್ಗಿದೆ. ತಾವು 60 ಎಕರೆ ಲೀಸ್‌ ಪಡೆದು ಒಂದು ತಿಂಗಳ ಹಿಂದೆ ಭತ್ತ ನಾಟಿ ಮಾಡಲಾಗಿತ್ತು. ಈಗ ಎಲ್ಲ ಬೆಳೆ ಜಲಾವೃತಗೊಂಡು, ರೋಗದ ಭೀತಿಯಿದೆ ಎಂದ ದೇವಾಪುರದ ಬಸವರಾಜ್‌ ಸಜ್ಜನ್‌, ಈ ಎರಡು ವರ್ಷಗಳ ಹಿಂದೆ ಇದೇ ಸಂದರ್ಭ ಬಂದಿದ್ದಾಗ ಘೋಷಿಸಿದ್ದ ಪರಿಹಾರ ಈವರೆಗೂ ಬಂದಿಯೇ ಇಲ್ಲ. ಈಗಲೂ ನಮ್ಮ ಪರಿಸ್ಥಿತಿ ಗಂಭೀರವಾಗಿದೆ ಎಂದು "ಕನ್ನಡಪ್ರಭ "ದೆದುರು ಅಳಲು ತೋಡಿಕೊಂಡರು.

ಸಂಪೂರ್ಣ ಮುಳುಗಿದ ಕೊಳ್ಳೂರು (ಎಂ) ಸೇತುವೆ : ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಟ್ಟದ್ದರಿಂದ ಯಾದಗಿರಿ-ಕಲಬುರಗಿ-ರಾಯಚೂರು ಜಿಲ್ಲೆಗಳನ್ನು ಸಂಪರ್ಕಿಸುವ, ದೇವದುರ್ಗ ಸಮೀಪದ ಸೇತುವೆ ಮತ್ತೇ ಮುಳುಗಿದೆ.

ಹೀಗಾಗಿ, ಇಲ್ಲಿಂದ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿದ್ದು ಪೊಲೀಸ್‌ ಪಹರೆ ಹಾಕಲಾಗಿದೆ. ಜಲಾಶಯದಿಂದ 2ರಿಂದ 3ಲಕ್ಷ ಕ್ಯುಸೆಕ್‌ ನೀರು ಬಿಟ್ಟರೆ ಈ ಸೇತುವೆಯೂ ನೀರು ನುಗ್ಗಿ ಮುಳುಗಡೆಯಾಗುತ್ತದೆ. ಈ ಹಿಂದೆ ಅನೇಕ ಬಾರಿ ಮುಳುಗಿದ ಉದಾಹರಣೆಗಳಿವೆ. ‘ಮುಳುಗು ಸೇತುವೆ’ ಅಥವಾ ಸ್ಪ್ರಿಂಗ್‌ ಬ್ರಿಡ್ಜ್‌ ಎಂದೇ ಖ್ಯಾತಿಗೊಳಗಾದ ಇದನ್ನು 1975 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಪುರಾಣ ಪ್ರಸಿದ್ಧ ಛಾಯಾ ಭಗವತೀ ಗರ್ಭಗುಡಿಗೆ ನುಗ್ಗಿದ ನೀರು: ಕೃಷ್ಣಾ ನದಿಪಾತ್ರದ, ನಾರಾಯಣಪುರ ಸಮೀಪದ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಛಾಯಾ ಭಗವತಿ ದೇವಸ್ಥಾನದ ಗರ್ಭಗುಡಿಯತ್ತ ನೀರು ನುಗ್ಗಿದ್ದು, ದೇವಸ್ಥಾನದ ಮೆಟ್ಟಿಲ ಮೇಲೆ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನದತ್ತ ಪ್ರವಾಸಿಗರು ಹೋಗದಂತೆ ಅಲ್ಲಿ ಕಾವಲು ಹಾಕಲಾಗಿದೆ.

ನೀಲಕಂಠರಾಯನ ಗಡ್ಡೆ ಜನರು ಸುರಕ್ಷಿತ: ಸುರಪುರದ ಕಕ್ಕೇರಾ ಸಮೀಪದ, ಕೃಷ್ಣಾ ನದಿಯ ನಡುಗಡ್ಡೆ ನೀಲಕಂಠರಾಯನ ಗಡ್ಡೆಯ ಜನರ ಕಾಳಜಿಗೆ ಆಡಳಿತ ಮುಂದಾಗಿದೆ. ಪ್ರವಾಹ ಪರಿಸ್ಥಿತಿಯಲ್ಲಿ ಈ ಹಿಂದೆ ಗಂಭೀರವಾಗಿರುತ್ತಿದ್ದ ಅಲ್ಲಿನವರು ಸೇತುವೆ ನಿರ್ಮಾಣವಾದಾಗಿನಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ತಂಡ ಅಲ್ಲಿಗೆ ತೆರಳಿ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಗರ್ಭಿಣಿಯರು ಹಾಗೂ ವಯೋವೃದ್ಧರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವೊಲೈಸಿದ್ದಾರೆ.

Share this article