ಸೋಮರಡ್ಡಿ ಅಳವಂಡಿ
ಕೊಪ್ಪಳ: ಈ ಬಾರಿ ಬರ ಭೀಕರವಾಗುತ್ತಿದೆ. ರೈತರು ಹೇಗಾದರೂ ಮಾಡಿ ತಮ್ಮ ಫಸಲನ್ನು ಉಳಿಸಿಕೊಳ್ಳಲು, ತೋಟಗಾರಿಕಾ ಬೆಳೆಯನ್ನು ಬೆಳೆಯಲು ಹರಸಾಹಸ ಮಾಡುತ್ತಿದ್ದಾರೆ. ರೈತರು ನೀರು ಖರೀದಿಸಿ ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀಡಿ ಕಾಪಾಡಲು ಶತಪ್ರಯತ್ನ ಮುಂದುವರಿಸಿದ್ದಾರೆ.ಬೋರ್‌ವೆಲ್‌ಗಳು ಫೇಲಾಗಿದ್ದರಿಂದ ರೈತರು ವಿಧಿಯಿಲ್ಲದೇ ಬೆಳೆ ಕಾಪಾಡಿಕೊಳ್ಳಳು ಸಾಲ-ಸೋಲ ಮಾಡಿ ಟ್ಯಾಂಕರ್ ನೀರು ಕೊಂಡು ಹಾಕುತ್ತಿದ್ದಾರೆ.ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಬಳಿ ಐದು ಎಕರೆ ಮಾವಿನ ತೋಟವಿದೆ. ಇದು ಇನ್ನೇನು ಫಸಲು ಕೊಡುವ ಕಾಲ. ಆದರೆ, ಇದ್ದ ಮೂರು ಬೋರ್‌ವೆಲ್‌ಗಳು ಫೇಲ್ ಆಗಿದ್ದರಿಂದ ಮಾವು ಬೆಳೆ ಉಳಿಸಿಕೊಳ್ಳಲು ರಾಮಕೃಷ್ಣ ಎಂಬ ರೈತ ಟ್ಯಾಂಕರ್ ನೀರು ಕೊಂಡು ಹಾಕುತ್ತಿದ್ದಾರೆ.ಇವರದೇ ಟ್ಯಾಂಕರ್ ತೆಗೆದುಕೊಂಡು ಹೋದರೆ ₹100-150 ದರವಿದೆ. ಆದರೆ, ಬಾಡಿಗೆ ಟ್ಯಾಂಕರ್ ಆದರೆ ₹500 ಆಗುತ್ತದೆ. ಕಳೆದ ನಾಲ್ಕಾರು ದಿನಗಳಿಂದ ಟ್ಯಾಂಕರ್ ನೀರು ಖರೀದಿಸಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.ನಾಲ್ಕಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ಮಾವು ಬೆಳೆ, ಈಗ ನೀರಿಲ್ಲ ಎಂದು ಒಣಗಿ ಹೋದರೆ ಮತ್ತೆ ಬೆಳೆಯಲು ನಾಲ್ಕಾರು ವರ್ಷ ಶ್ರಮ ಪಡಬೇಕಾಗುತ್ತದೆ. ಮಾವು ಬೆಳೆಯನ್ನಾದರೂ ಉಳಿಸಿಕೊಳ್ಳೊಣ ಎಂದು ನೀರು ಖರೀದಿಸಿ ಟ್ಯಾಂಕರ್ ಮೂಲಕ ಹಾಕುತ್ತಿದ್ದೇವೆ ಎನ್ನುತ್ತಾರೆ ರೈತ ರಾಮಕೃಷ್ಣ.ಈ ರೀತಿ ಅನೇಕ ರೈತರು ತಮ್ಮ ಬೆಳೆ ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಕೃಷಿ ಬೆಳೆಯಾದರೆ ಒಣಗಿ ಹೋದರೂ ಹೋಗಲಿ ಬಿಡಿ, ಮಳೆ ಬಂದ ಮೇಲೆ ಮತ್ತೊಂದು ಬೆಳೆ ಬೆಳೆದರಾಯಿತು ಎನ್ನುತ್ತಾರೆ. ಆದರೆ, ತೋಟಗಾರಿಕಾ ಬೆಳೆಯನ್ನು ಒಮ್ಮೆ ಕಳೆದುಕೊಂಡರೆ ಬೆಳೆಯಲು ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕಾಗುತ್ತದೆ ಮತ್ತು ನಾಲ್ಕಾರು ವರ್ಷಗಳವರೆಗೆ ಕಾಯಬೇಕಾಗುತ್ತದೆ. ಹೀಗಾಗಿ, ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೋರೆ ಹೋಗಿದ್ದಾರೆ.ಬಸಾಪಟ್ಟಣ ವ್ಯಾಪ್ತಿಯಲ್ಲಿ ಕೇವಲ ತುಂಗಭದ್ರಾ ಜಲಾಶಯದ ಕಾಲುವೆಗಳಿಂದ ಅಷ್ಟೇ ಅಲ್ಲ, ಬೋರ್‌ವೆಲ್ ನಿಂದಲೂ ನೀರಾವರಿ ಮಾಡಲಾಗುತ್ತದೆ. ಆದರೆ, ಕಾಲುವೆಯಲ್ಲಿ ನೀರು ಹರಿದರೆ ಮಾತ್ರ ಕೊಳವೆ ಬಾವಿಗಳಲ್ಲಿ ನೀರು ಇರುತ್ತದೆ. ಈ ವರ್ಷ ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಡದೆ ಇರುವುದರಿಂದ ಸಮಸ್ಯೆಯಾಗಿದೆ ಹೀಗಾಗಿಯೇ ಕೊಳವೆ ಬಾವಿಗಳು ಫೇಲ್ ಆಗಿವೆ. ಹೀಗಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದು ದುಡ್ಡು ಕೊಟ್ಟು. ನೀರು ಖರೀದಿಸಿ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಕೇವಲ ಬೆಳೆಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಅಲ್ಲ, ಬಸಾಪಟ್ಟಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಟ್ಯಾಂಕರ್ ನೀರು ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ರೈತರು ಖರೀದಿ ಮಾಡಿ ಬೆಳೆಗಳಿಗೆ ಹಾಕುತ್ತಿದ್ದಾರೆ ಎನ್ನುತ್ತಾರೆ ರೈತ ರವಿ ಬಸಾಪಟ್ಟಣ.