ಚಳ್ಳಕೆರೆ ತಾಲೂಕು ಬುಡ್ನಹಟ್ಟಿಯಲ್ಲಿ ಬರ ಪರಿಶೀಲನೆ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ ಪರಿಸ್ಥಿತಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬರಗಾಲ ಹಿನ್ನೆಲೆಯಲ್ಲಿ ಜನರಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಾಗದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕೇವಲ ಕೇಂದ್ರ ಸರ್ಕಾರ ಮೇಲೆ ಗೂಬೆ ಕೂರಿಸುವ ಕಾರ್ಯವನ್ನು ಮಾಡುತ್ತಿದೆ. ಒಟ್ಟಿನಲ್ಲಿ ಸರ್ಕಾರ ರೈತರಿಗೆ ಬರಗಾಲವನ್ನು ಉಡುಗೊರೆಯಾಗಿ ಕೊಟ್ಟು, ರಾಜ್ಯಸುಭಿಕ್ಷವಾಗಿದೆ ಎಂಬ ಸುಳ್ಳು ಜಾಹೀರಾತು ಮೂಲಕ ಜನತೆಗೆ ಅನ್ಯಾಯವೆಸಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.ಅವರು, ಬರ ಅಧ್ಯಯನ ಹಿನ್ನೆಲೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುಡ್ನಹಟ್ಟಿ ಗ್ರಾಮದ ಪುಟ್ಟಮ್ಮ ಎಂಬುವವರಿಗೆ ಸೇರಿದ ಶೇಂಗಾ ಬೆಳೆ ಹಾಗೂ ಬಿ.ತಿಪ್ಪೇಸ್ವಾಮಿಯವರಿಗೆ ಸೇರಿದ ತೊಗರಿ ಬೆಳೆ ವೀಕ್ಷಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಬರಗಾಲ ಹಿನ್ನೆಲೆಯಲ್ಲಿ ೧೭೫೦೦ ಕೋಟಿ ಇದುವರೆಗೂ ಮಂಜೂರು ಮಾಡಿಲ್ಲವೆಂದು ಆರೋಪಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಈಗಾಗಲೇ ವರದಿ ತರಿಸಿಕೊಂಡು ಪರಿಶೀಲನೆ ನಡೆಸುತ್ತಿದೆ. ಎನ್‌ಡಿಆರ್‌ಎಫ್ ನಿಯಮದಡಿ ಪರಿಹಾರ ನೀಡಬೇಕಿದೆ. ನಾನು ಸಹ ಕಂದಾಯ ಇಲಾಖೆ ಸಚಿವನಾಗಿ ಬರಗಾಲ ಸ್ಥಿತಿ ನಿಬಾಯಿಸಿರುವೆ. ನನ್ನ ಅವಧಿಯಲ್ಲಿ ಕೇಂದ್ರ ಸರ್ಕಾರದ ಹಣ ಕಾಯದೆ ಎನ್‌ಡಿಆರ್‌ಎಫ್ ನಿಧಿಯಲ್ಲೇ ಹೆಚ್ಚಿನ ಪರಿಹಾರ ಹಣ ನೀಡಿ ರೈತರಿಗೆ ನೆರವಾಗಿದ್ದೇನೆ. ಆದರೆ, ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್‌ನಲ್ಲಿ ಸಾಕಷ್ಟು ಹಣಕಾಸಿನ ವ್ಯವಸ್ಥೆ ಇದ್ದರೂ ಅದನ್ನು ರೈತರಿಗೆ ನೀಡದೆ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ ಎಂದರು.
ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ, ರೈತರ ಕಣೀರು ಒರೆಸುವ ಕಾರ್ಯ ನಡೆಯುತ್ತಿಲ್ಲ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ನೀಡಿದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದಾರೆ. ವರದಿಯಲ್ಲಿ ಸಾಕಷ್ಟು ಲೋಪದೋಷಗಳಿವೆ, ರೈತರ ಬೆಳೆ ಆ್ಯಪ್‌ನಲ್ಲಿ ನಮೂದಾಗಿಲ್ಲ, ಇನ್ನೂ ಕೆಲವು ಕಡೆ ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಸಂಪರ್ಕಿಸಿ ಎಂದಿದ್ದಾರೆ. ಅದಲ್ಲೂ ಮಾಹಿತಿ ಅಪೂರ್ಣ, ಬರ ಅಧ್ಯಯನ ವಾಸ್ತವ ಸ್ಥಿತಿ ವರದಿ ನೀಡಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ರೈತ ಆತ್ಮವಿಶ್ವಾಸದಿಂದ ಎಲ್ಲರಿಗೂ ಆಹಾರ ಒದಗಿಸುವ ದೃಷ್ಟಿಯಿಂದ ಬೆಳೆ ಬೆಳೆಯು ತ್ತಾನೆ. ರೈತರ ಸಂಕಷ್ಟಕ್ಕೆ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ರೈತ ಬರ ನಿರ್ವಹಣೆ, ಕಾಂತರಾಜು ವರದಿ ಜಾರಿ ಮುಂತಾದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುವುದು ಎಂದರು.ರಾಜ್ಯ ಸರ್ಕಾರ ರೈತರ ಬೆಳೆನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ, ರಾಜ್ಯದ ಯಾವುದೇ ಭಾಗದಲ್ಲೂ ಬರನಿರ್ವಹಣೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ, ರಾಜ್ಯ ಸರ್ಕಾರ ಎಲ್ಲೆಡೆ ಉತ್ಸಾಹದಿಂದ ಕಾರ್ಯನಿರ್ವಹಿಸಿ ಬರ ಪರಿಸ್ಥಿತಿಯನ್ನು ನಿಬಾಯಿಸಬಹುದಿತ್ತು. ಆದರೆ, ಎಲ್ಲರೂ ಸರ್ಕಾರ ಆಸಕ್ತಿಯಿಂದ ಬರನಿರ್ವಹಣೆ ವಿಚಾರದಲ್ಲಿ ಕಾರ್ಯನಿರ್ವಹಿಸಿಲ್ಲ. ಸರ್ಕಾರ ಆಮೆಗತಿ ವೇಗದ ಕೆಲಸ ರೈತರ ಪ್ರಗತಿಗೆ ಮಾರಕವಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಫಾರೆಡ್ಡಿ, ಬಿಜೆಪಿ ಮುಖಂಡರಾದ ಸೂರನಹಳ್ಳಿ ಶ್ರೀನಿವಾಸ್, ಬಿ.ಎಸ್.ಶಿವಪುತ್ರಪ್ಪ, ಬಾಳೆಮಂಡಿರಾಮದಾಸ್, ಜಯಪಾಲಯ್ಯ, ಬಸವರಾಜು, ಟಿ.ಮಂಜುನಾಥ, ಸೂರನಾಯಕ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ರೇಹಾನ್ ಪಾಷ, ಕೃಷಿ ಅಧಿಕಾರಿ ಅಶೋಕ್, ಪಶುವೈದ್ಯಾಧಿಕಾರಿ ರೇವಣ್ಣ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಕಂದಾಯಾಧಿಕಾರಿ ಲಿಂಗೇಗೌಡ, ಕುಡಿಯುವ ನೀರಿ ಇಲಾಖೆ ದಯಾನಂದ ಮುಂತಾದವರು ಉಪಸ್ಥಿತರಿದ್ದರು.ರಾಜ್ಯದ ಯಾವುದೇ ಸಚಿವ ಬರ ಅಧ್ಯಯನದ ಬಗ್ಗೆ ಚಕಾರವೆತ್ತುತ್ತಿಲ್ಲ, ಕೇವಲ ಮುಖ್ಯಮಂತ್ರಿ ಸ್ಥಾನ ಉಳಿಸುವತ್ತ ಕೆಲವರು ಪ್ರಯತ್ನಿಸುತ್ತಿದ್ದಾರೆ ಇನ್ನೂ ಕೆಲವರು ಉಪಮುಖ್ಯಮಂತ್ರಿಯವರನ್ನು ಮುಖ್ಯಮಂತ್ರಿ ಮಾಡಲು ಹೋರಾಟ ನಡೆಸುತ್ತಿದ್ದಾರೆ ಇನ್ನೂ ಕೆಲ ಸಚಿವರು ಗೃಹ ಸಚಿವ ಪರಮೇಶ್ವರ ನಿವಾಸದಲ್ಲಿ ಸಭೆ ಸೇರಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ನಡೆಸುತ್ತಾರೆ. ಆಳುವ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅಭದ್ರತೆ ಕಾಡುತ್ತಿದೆ.
ಆರ್.ಅಶೋಕ್ ವಿರೋಧ ಪಕ್ಷದ ನಾಯಕ