ಬರ, ಬೇಟೆಗಾರರಿಂದ ನಲುಗಿದ ಸೊರಬ ವನ್ಯಜೀವಿಗಳು

KannadaprabhaNewsNetwork | Published : Mar 10, 2024 1:30 AM

ಸಾರಾಂಶ

ಆದರೆ, ರೈತರು ತಮ್ಮ ಬೆಳೆಗಳ ರಕ್ಷಣೆಗಾಗಿ ಅಳವಡಿಸುವ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಬಹುತೇಕ ಪ್ರಾಣಿಗಳು ಬಲಿಯಾಗುತ್ತಿವೆ. ಮತ್ತೆ ಕೆಲವು ಕೃಷಿ ಹೊಂಡಗಳಿಗೆ ಬಿದ್ದು ಮೃತಪಟ್ಟಿವೆ. ಇದರ ಮಧ್ಯೆ ಕಾಡುಪ್ರಾಣಿಗಳನ್ನು ಬೇಟೆಯಾಡುವವರು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದ್ದಾರೆ. ಆದರೆ, ರೈತರು ತಮ್ಮ ಬೆಳೆಗಳ ರಕ್ಷಣೆಗಾಗಿ ಅಳವಡಿಸುವ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಬಹುತೇಕ ಪ್ರಾಣಿಗಳು ಬಲಿಯಾಗುತ್ತಿವೆ.

- ಎಚ್.ಕೆ.ಬಿ. ಸ್ವಾಮಿ ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನಲ್ಲಿ ಬರದ ಆವಸಿದ್ದು, ಕಾನನದ ಜೀವಸಂಕುಲಕ್ಕೆ ರಕ್ಷಣೆ ಇಲ್ಲವಾಗಿದೆ. ಆಹಾರ, ನೀರು ಅರಸಿ ಗದ್ದೆ ಮತ್ತು ಊರೊಳಗೆ ಧಾವಿಸುವ ಮೃಗ-ಪಕ್ಷಿಗಳು ಅಲ್ಲಲ್ಲಿ ಮನುಷ್ಯರಿಗೆ ಬಲಿಯಾಗುತ್ತಿವೆ. ರಕ್ಷಣೆ ನೀಡಬೇಕಾದ ಅರಣ್ಯ ಇಲಾಖೆ ಮೌನವಾಗಿದೆ.

ಬಿಸಿಲಿನ ತಾಪಕ್ಕೆ ಕಂಗೆಟ್ಟ ಕಾಡು ಪ್ರಾಣಿಗಳು ನೀರು, ನೆರಳು, ಆಹಾರ ಕೊರತೆ ಎದುರಿಸುತ್ತಿವೆ. ಆಹಾರ ಅರಸಿ ಬರುವ ಅವುಗಳು, ರೈತರ ಹೊಲ-ಗದ್ದೆಗಳಿಗೆ ದಾಳಿ ನಡೆಸುತ್ತಿವೆ. ಆದರೆ, ರೈತರು ತಮ್ಮ ಬೆಳೆಗಳ ರಕ್ಷಣೆಗಾಗಿ ಅಳವಡಿಸುವ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಬಹುತೇಕ ಪ್ರಾಣಿಗಳು ಬಲಿಯಾಗುತ್ತಿವೆ. ಮತ್ತೆ ಕೆಲವು ಕೃಷಿ ಹೊಂಡಗಳಿಗೆ ಬಿದ್ದು ಮೃತಪಟ್ಟಿವೆ. ಇದರ ಮಧ್ಯೆ ಕಾಡುಪ್ರಾಣಿಗಳನ್ನು ಬೇಟೆಯಾಡುವವರು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದ್ದಾರೆ.

ತಾಲೂಕಿನ ಚಂದ್ರಗುತ್ತಿ ಮತ್ತು ಕುಪ್ಪಗಡ್ಡೆ ಹೋಬಳಿ ಪ್ರದೇಶದಲ್ಲಿ ಅತ್ಯಮೂಲ್ಯ ಕಾನನವಿದೆ. ಬೆಟ್ಟ-ಗುಡ್ಡಗಳಿಂದ ಆವರಿಸಿರುವ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ೨೩೬೦ ಹೆಕ್ಟೇರ್ ವಿಸ್ತೀರ್ಣದಲ್ಲಿ ಕಾಡು ಪ್ರದೇಶವಿದೆ. ಅಮೂಲ್ಯ ಮರಗಳು ಮತ್ತು ಔಷಧೀಯ ಗುಣವುಳ್ಳ ಗಿಡ-ಬಳ್ಳಿಗಳು, ಜಿಂಕೆ, ಚಿಗರೆ, ಕಾಡುಹಂದಿ, ಕೋಣ, ಬರ್ಕ, ನವಿಲುಗಳು ಯಥೇಚ್ಛವಾಗಿವೆ.

ಮಳೆಯಿಲ್ಲದೇ ಕಾಡು-ವನ್ಯಜೀವಿ ನಾಶ:

ಸೊರಬ ತಾಲೂಕು ಒಂದು ಸಾವಿರಕ್ಕೂ ಹೆಚ್ಚು ಕೆರೆಗಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಎದುರಾಗಿ, ಅಧಿಕ ಉಷ್ಣಾಂಶ ಹೊಂದಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಕೆರೆಗಳು ಬತ್ತಿಹೋಗಿವೆ. ಪ್ರತಿವರ್ಷ ಫೆಬ್ರವರಿ- ಮಾರ್ಚ್ ಬಂದರೆ, ತಾಪಮಾನ ಏರುತ್ತದೆ. ಮೂಡುಗಾಳಿ ಬೀಸುತ್ತದೆ. ಸಾಗುವಳಿ ರೈತರಿಂದ ಕಾಡಿನ ಬೆಂಕಿ ಪ್ರಕರಣಗಳು ಹೆಚ್ಚಾಗಿ, ಗಿಡ-ಮರಗಳು, ಧರೆಗುರುಳಿ, ಬೂದಿಯಾಗುತ್ತವೆ. ಕಾನನವನ್ನೇ ಆಶ್ರಯಿಸುವ ಪ್ರಾಣಿ-ಪಕ್ಷಿ ಸಂಕುಲಕ್ಕೆ ಸಂಚಕಾರ ಎದುರಾಗಿದೆ.

ಬಂದೂಕಿನಿಂದ ಗುಂಡು ಹಾರಿಸುವುದು, ಬಾಂಬ್ ಸಿಡಿಸುವುದು ಅಲ್ಲದೇ ತಂತಿಬೇಲಿಗೆ ವಿದ್ಯುತ್ ಹಾಯಿಸಿ ಕೊಲ್ಲುವ ಕೃತ್ಯಗಳು ಕೆಲವು ಕಿಡಿಗೇಡಿಗಳಿಂದ ನಡೆಯುತ್ತಿವೆ. ಅಪರಾಧಿಗಳ ಬಂಧನ, ಶಿಕ್ಷೆಯಂಥ ಕ್ರಮಗಳು ಕಾಣದೇ, ಸಹಜ ಸಾವು ಎಂದು ಪ್ರಕರಣಕ್ಕೆ ತೆರೆಎಳೆಯಲಾಗುತ್ತಿದೆ ಎಂಬುದು ಪರಿಸರಪ್ರಿಯರ ಆರೋಪ. ಈ ಎಲ್ಲ ಅವ್ಯವಸ್ಥೆಗಳಿಗೆ ಅರಣ್ಯ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುವ ಕರ್ತವ್ಯಪ್ರಜ್ಞೆ ತೋರಬೇಕಿದೆ.

- - -

ಬಾಕ್ಸ್‌ ಎಲ್ಲೆಲ್ಲಿ, ಏನೇನು ಬಲಿ? ಅಕ್ಟೋಬರ್ ೨೦೨೩ರಿಂದ ಫೆ.೨೦೨೪ರವರೆಗೆ ಸೊರಬ ತಾಲೂಕಿನಲ್ಲಿ ೮ ವನ್ಯಪ್ರಾಣಿಗಳ ಸಾವು ಸಂಭವಿಸಿದೆ. ಬಾಡದಬೈಲು ಕೃಷಿ ಹೊಂಡಕ್ಕೆ ಬಿದ್ದು ಕಾಡುಕೋಣ, ಸಾಗರ-ಸೊರಬ ಸಂಪರ್ಕ ರಸ್ತೆ ದಾಟುವಾಗ ಅಪಘಾತದಲ್ಲಿ ಚಿರತೆ ಮರಿ, ದ್ಯಾವಾಸ ಗ್ರಾಮದಲ್ಲಿ ಬರ್ಕ, ನೆರ್ಚಿ-ಕುಂದಗೋಡು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಕಾಡುಕೋಣ ಮತ್ತು ಕಾಡೆಮ್ಮೆ, ಉಳವಿಯಲ್ಲಿ ಕಾಡುಕೋಣ, ಚಂದ್ರಗುತ್ತಿಯಲ್ಲಿ ಜಿಂಕೆಮರಿ, ಪುಟ್ಟನಹಳ್ಳಿಯಲ್ಲಿ ಕಾಡುಹಂದಿ ಸಾವುಕಂಡಿವೆ.

ಸೊರಬದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಹೇಳುವಂತೆ, ಪ್ರತಿ ವರ್ಷ ಫೆಬ್ರವರಿಯಿಂದ ಮಾರ್ಚ್‌ನಲ್ಲಿ ಕಾಡಿನ ಬೆಂಕಿ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. 2023ರಲ್ಲಿ ೩೧ ಅಗ್ನಿ ಅವಘಡ ಸಂಭವಿಸಿದ್ದು, 2024ರಲ್ಲಿ ೨೯ ಅಗ್ನಿ ಪ್ರಕರಣಗಳು ದಾಖಲಾಗಿದೆ. ಇವುಗಳಲ್ಲಿ ಮನೆ ಹಾನಿ, ಬಣವೆ ಹಾನಿಯಂಥ ಪ್ರಕರಣಗಳೂ ಸೇರಿವೆ. ಗದ್ದೆಯಲ್ಲಿ ಅಳವಡಿಸುವ ವಿದ್ಯುತ್ ಟಿ.ಸಿ.ಯ ಸ್ಪರ್ಶದಿಂದ ಮತ್ತು ಅರಣ್ಯ ಇಲಾಖೆ ತರಗಲೆಗಳಿಗೆ ಹೆಚ್ಚುವ ಬೆಂಕಿಯಿಂದಲೂ ಕಾಡಿನ ಬೆಂಕಿ ಪ್ರಕರಣಗಳು ಘಟಿಸಿವೆ ಎಂದಿದ್ದಾರೆ.

- - - ಬಾಕ್ಸ್

ಬರಗಾಲದಿಂದಾಗಿ ನೀರು, ಆಹಾರ ಹುಡುಕಿ ಬರುವ ವನ್ಯಜೀವಿಗಳು ವಿದ್ಯುತ್‌ ತಂತಿ ಬೇಲಿಗೆ ಸಿಲುಕಿ ಕೆಲವು ಮೃತಪಡುತ್ತಿವೆ. ಕೆಲವರು ಆಹಾರಕ್ಕಾಗಿ ಬೇಟೆಯಾಗುತ್ತಾರೆ. ಅಂಥವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ವನ್ಯಪ್ರಾಣಿಗಳ ರಕ್ಷಣೆಗೆ ಆಯಾ ಗಡಿಯಲ್ಲಿ ಹಗಲು-ರಾತ್ರಿ ಪಾಳಿಯಲ್ಲಿ ಗಸ್ತು ತಿರುಗಲು ಸಿಬ್ಬಂದಿ ನಿಯೋಜಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಆನವಟ್ಟಿ, ಕೊಡಕಣಿ ಭಾಗಗಳಲ್ಲಿ ಚಿರತೆ ಕೂಡ ಕಂಡುಬಂದ ಮಾಹಿತಿ ಇದೆ

– ಜಾವೇದ್ ಬಾಷಾ ಅಂಗಡಿ, ವಲಯ ಅರಣ್ಯಾಧಿಕಾರಿ, ಸೊರಬ ಸೊರಬ ತಾಲೂಕಿನಲ್ಲಿ ಈಚೆಗೆ ಕಾಡು ಪ್ರಾಣಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿವೆ. ಬಾಡದಬೈಲು ಸಮೀಪ ಕೃಷಿ ಹೊಂಡದಲ್ಲಿ ಒಂದು ಕಾಡುಕೋಣ, ಮಣ್ಣತ್ತಿ, ಕುಂದುಗೋಡಿನಲ್ಲಿ ಎರಡು ಕಾಡುಕೋಣ ಸಾವನ್ನಪ್ಪಿವೆ. ಕಾಡುಹಂದಿ, ಜಿಂಕೆ, ಚಿಗರೆ ಮೊದಲಾದ ಪ್ರಾಣಿಗಳ ಹತ್ಯೆಯಾಗುತ್ತಿದೆ. ವನ್ಯಜೀವಿಗಳಿಗೆ ಸಂಬಂಧಿಸಿದ ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ಕಿಂಚಿತ್ತೂ ಗಮನಹರಿಸಿಲ್ಲ

- ಶ್ರೀಪಾದ ಬಿಚ್ಚುಗತ್ತಿ, ಜೀವವೈವಿದ್ಯ ಮಂಡಳಿ ಸದಸ್ಯ, ಸೊರಬ - - -

-೦೯ಕೆಪಿಸೊರಬ೦೧: ಕುಂದಗೋಡು ಗ್ರಾಮದ ಕಂದಾಯ ಜಮೀನಿನಲ್ಲಿ ಮೃತಪಟ್ಟಿರುವ ಕಾಡುಕೋಣ.

-೦೯ಕೆಪಿಸೊರಬ೦೨: ಚಂದ್ರಗುತ್ತಿ ಗ್ರಾಮದಲ್ಲಿ ಆಹಾರಕ್ಕಾಗಿ ಜಿಂಕೆಯನ್ನು ಕೊಂದಿರುವುದು.

Share this article