ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾದಕ ವಸ್ತುಗಳ ಸೇವನೆ ಎಂಬುದು ಸಾಮಾಜಿಕ ಪಿಡುಗಿಗೆ ಕಾರಣವಾಗಿದ್ದು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದವರು ಮನುಷ್ಯತ್ವ ಮರೆತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಸಾಲದೆಂಬಂತೆ ಆತ್ಮಹತ್ಯೆಯಂತಹ ಕೃತ್ಯ ಮಾಡಿಕೊಳ್ಳಲು ಹೇಸುವುದಿಲ್ಲ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ.ನಾಗರಾಜ್ ಹೇಳಿದರು.ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾದಕ ವ್ಯಸನಿಗಳ ಮನಸು ಸದಾ ಅಪರಾಧ ಕೃತ್ಯಗಳಿಗೆ ಪ್ರೇರೇಪಣೆ ನೀಡುತ್ತಿರುತ್ತದೆ. ಒಮ್ಮೆ ವ್ಯಸನಿಗಳಾದಲ್ಲಿ ಹೊರ ಬರುವುದು ಕಷ್ಠದಾಯಕ ಎಂದರು.
ಗಾಂಜಾ, ಅಫೀಮು, ಮಾತ್ರೆ, ಫೌಡರ್, ಇಂಜೆಕ್ಷನ್ ಹಲವಾರು ರೂಪಗಳಲ್ಲಿ ಯುವಕರು ಮಾದಕ ವಸ್ತುಗಳನ್ನು ಸೇವಿಸುತ್ತಾರೆ. ಕೋಟ್ಯಾಂತರ ಯುವಕರು ವ್ಯಸನಕ್ಕೆ ಒಳಗಾಗಿ ಹಲವಾರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ವಿವಿಧ ಇಲಾಖೆಗಳ ಸಹಕಾರದೊಂದಿಗೆ ವ್ಯಸನದಿಂದ ಮುಕ್ತವಾಗಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು. ವ್ಯಸನದಿಂದ ಮುಕ್ತರಾಗಲು ಮನೋ ಚೈತನ್ಯ ಶಿಬಿರಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಮನೋ ವೈದ್ಯರು, ಕ್ಲಿನಿಕಲ್ ಸೈಕಾಲಜಿಸ್ಟ್ ಅವರನ್ನು ಸಂಪರ್ಕಿಸಿ ಚಿಕಿತ್ಸೆ, ಸಲಹೆ ಮತ್ತು ಸಮಲೋಚನೆ ಪಡೆಯಬಹುದು ಎಂದು ತಿಳಿಸಿದರು.ಮನೋವೈದ್ಯ ಡಾ.ಆರ್.ಮಂಜುನಾಥ್ ಉಪನ್ಯಾಸ ನೀಡಿ, ಬೀಡಿ, ಸಿಗರೇಟ್ ಮತ್ತು ಮಾದಕ ವಸ್ತುಗಳ ಮೇಲೆ ಎಚ್ಚರಿಕೆ ಸಂದೇಶ ಇದ್ದರೂ ಸಹಿತ ನಾವು ಅದನ್ನು ಸೇವಿಸುತ್ತೇವೆ. ಆಹ್ಲಾದ ಅಥವಾ ಕಿಕ್‍ಗಾಗಿ ಸ್ವಲ್ಪ- ಸ್ವಲ್ಪ ಶುರು ಮಾಡಿ ಜಾಸ್ತಿ ಮಾದಕ ವಸ್ತು ಸೇವನೆ ಮಾಡುವುದರಿಂದ ದಿನದಿನಕ್ಕೆ ನರಗಳ ಸವೆತದಿಂದ, ಪ್ರಜ್ಞಾಹೀನ ಸ್ಥಿತಿ ತಲುಪಿ ಸರಿ ತಪ್ಪುಗಳ ಅರಿವು ಇಲ್ಲದಂತಾಗುತ್ತೇವೆ.
ಬೀಡಿ, ಸಿಗರೇಟ್ ಸೇವನೆಯನ್ನು ಗೇಟ್ ವೇ ಡ್ರಗ್ಸ್ ಅಂತ ಕರೆಯುತ್ತೇವೆ. ವ್ಯಸನದಿಂದ ದೂರವಿದ್ದರೆ ಅಪರಾಧ ಕೃತ್ಯಗಳಿಂದ ದೂರವಿರಬಹುದು. ಚಿಕಿತ್ಸೆಗಾಗಿ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗವನ್ನು ಸಂಪರ್ಕಿಸಿ ಸಲಹೆ ಸಮಾಲೋಚನೆ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಮಾತನಾಡಿ, ನಮ್ಮ ಕುಟುಂಬಗಳು ಸುಖವಾಗಿ ಇರಲು ಜೀವನದಲ್ಲಿ ನೀತಿ ನಿಯಮ ಅಳವಡಿಸಿಕೊಂಡು ಬಾಳಬೇಕು. ನಮ್ಮ ಮಟ್ಟಕ್ಕೆ ತಕ್ಕಂತೆ ಸತ್ಪ್ರಜೆಗಳಾಗಿ ಜೀವಿಸಬೇಕು ಎಂದರು.
ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹದೇವಿ ಎಂ. ಮರಕಟ್ಟಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಒಳಗಾಗಿ ಅದರ ದುಷ್ಪರಿಣಾಮದಿಂದ ತಪ್ಪುಗಳು ನಡೆದು ಹೋಗುತ್ತವೆ. ನೀವು ಮಾದಕ ವಸ್ತುಗಳನ್ನು ತಿಂದರೆ ಮಾದಕ ವಸ್ತುಗಳು ನಿಮ್ಮನ್ನು ತಿನ್ನುತ್ತವೆ. ಯೋಗ ಮತ್ತು ಪ್ರಾಣಾಯಾಮದ ಮೂಲಕ ವ್ಯಸನ ಮುಕ್ತರಾಗಬಹುದು. ಅಪರಾಧ ಕೃತ್ಯಗಳಿಂದ ದೂರ ಉಳಿಯಬಹುದು. ಸಮಾಜದಲ್ಲಿ ಸತ್ಪ್ರಜೆಯಾಗಿ ಕುಟುಂಬಕ್ಕೆ ಆದರ್ಶ ವ್ಯಕ್ತಿಯಾಗಿ ದುರಾಭ್ಯಾಸ ಚಟಗಳಿಂದ ದೂರ ಉಳಿಯಬೇಕು ಎಂದು ಕಾರಾಗೃಹ ನಿವಾಸಿಗಳಿಗೆ ತಿಳಿ ಹೇಳಿದರು.ಈ ವೇಳೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿದರು. ಕಾರಾಗೃಹ ಶಿಕ್ಷಕ ಆರ್.ಎ.ಶ್ರೀರಾಮರೆಡ್ಡಿ, ಸಹಾಯಕ ಜೈಲರ್ ರಾಮಣ್ ಕೆ.ಹೆರ್ಕಲ್, ಎಚ್‍ಐಒ ವೈ.ತಿಪ್ಪೇಶ್, ಕ್ಲಿನಿಕಲ್ ಸೈಕಲಾಜಿಸ್ಟ್ ಟಿ.ಶ್ರೀಧರ, ಎನ್.ಸುನೀತಾ, ಶುಶ್ರೂಷಕಾಧಿಕಾರಿ ಕೆ.ಎಂ.ರಶ್ಮಿ, ಕಾರಾಗೃಹ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಕಾರಾಗೃಹ ನಿವಾಸಿಗಳು ಭಾಗವಹಿಸಿದ್ದರು.