ರಕ್ಷಣಾ ಕ್ರಮ ಅನುಸರಿಸದ ಔಷಧಿ ಸಿಂಪಡಣೆ ಕಂಟಕ!

KannadaprabhaNewsNetwork |  
Published : Oct 10, 2024, 02:22 AM IST
ಫೋಟೋ- ಡಾ. ವಿಶ್ವನಾಥ ರೆಡ್ಡಿ | Kannada Prabha

ಸಾರಾಂಶ

ಹೊಲದಲ್ಲಿನ ಬೆಳೆ, ಮಾರುಕಟ್ಟೆ ಬೆಲೆ ಎಂದು ಚಿಂತೆಗೊಳಗಾಗುವ ಮುನ್ನವೇ ತೊಗರಿ ಕಣಜದ ಮಣ್ಣಿನ ಮಕ್ಕಳ ಮುಂದೆ ಅವರ ಕಣ್ಣಿನ ದೃಷ್ಟಿಗೇ ಕಂಟಕ ತಂದೊಡ್ಡುವಂತಹ ಸವಾಲೊಂದು ಧುತ್ತನೆ ಎದುರಾಗಿದೆ

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಹೊಲದಲ್ಲಿನ ಬೆಳೆ, ಮಾರುಕಟ್ಟೆ ಬೆಲೆ ಎಂದು ಚಿಂತೆಗೊಳಗಾಗುವ ಮುನ್ನವೇ ತೊಗರಿ ಕಣಜದ ಮಣ್ಣಿನ ಮಕ್ಕಳ ಮುಂದೆ ಅವರ ಕಣ್ಣಿನ ದೃಷ್ಟಿಗೇ ಕಂಟಕ ತಂದೊಡ್ಡುವಂತಹ ಸವಾಲೊಂದು ಧುತ್ತನೆ ಎದುರಾಗಿದೆ! ಮಳೆ ತುಂಬಾ ಸುರಿದು ತೊಗರಿ ಹಾಳಾಯ್ತೆಂದು ಕೊರಗಲ್ಲಿರೋ ರೈತರು ಅಳಿದುಳಿದ ತೊಗರಿ ಫಸಲನ್ನು ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಿಸುತ್ತಿದ್ದಾರೆ. ಹೀಗೆ ವಿಷಕಾರಿ ಕೀಟನಾಶಕ ಸಿಂಪಡಣೆ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆ ಹಾಗೂ ರಕ್ಷಣಾ ಕ್ರಮ ಕೈಗೊಳ್ಳದೆ ತಮ್ಮ ಕಣ್ಣುಗಳಿಗೆ ಕಂಟಕ ಆಹ್ವಾನಿಸುತ್ತಿದ್ದಾರೆ.

ನಿತ್ಯ ನೂರಾರು ರೈತರು ಆಸ್ಪತ್ರೆಗೆ ದೌಡು:

ಜಿಲ್ಲಾದ್ಯಂತ ಈ ಬಾರಿ 5.45ಲಕ್ಷ ಹೆಕ್ಟರ್‌ ತೊಗರಿ ಬಿತ್ತನೆಯಾಗಿದೆ ಈ ಪೈಕಿ ಹತ್ತಿಪ್ಪತ್ತು ಸಾವಿರ ಹೆಕ್ಟರ್‌ನಷ್ಟು ತೊಗರಿ ಹಾಳಾಗಿದೆ ಎಂದು ಅಂದಾಜಿಸಿದರೂ ಉಳಿದ ಫಸಲಿಗೆ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ.

ತೊಗರಿ ಈ ಬಾರಿ 5-6 ಅಡಿ ಎತ್ತರ ಬೆಳೆದಿದೆ. ಕೀಟನಾಶಕ ಸಿಂಪಡಣೆ ಮಾಡುವಾಗ ವಿಷಕಾರಿ ದ್ರಾವಣ ಇವರ ಮುಖ ಕಣ್ಣಿಗೇ ರಾಚುತ್ತಿದೆ. ನಿತ್ಯ 15ಕ್ಕೂ ಹೆಚ್ಚು ರೈತರು ಆಸ್ಪತ್ರೆಗೆ ಬರುತ್ತಿದ್ದಾರೆಂದು ನೇತ್ರತಜ್ಞ ಡಾ.ವಿಶ್ವನಾಥ ರೆಡ್ಡಿ ಹೇಳುತ್ತಾರೆ.

ಕೀಟನಾಶಕ ಕಣ್ಣು ಹೊಕ್ಕರೆ ಕಾರ್ನಿಯಾಕ್ಕೇ ತೊಂದರೆ ತಂದೊಡ್ಡುತ್ತದೆ. ಕಣ್ಣುರಿಯೊಂದಿಗೆ ಶುರುವಾಗುವ ಸಮಸ್ಯೆ ಮುಂದೆ ಹಾಗೇ ಬೆಳೆದು ಕಾಯಂ ದೃಷ್ಟಿ ದೋಷ ತೊಂದೊಡ್ಡುವ ಅಪಾಯಗಳಿವೆ ಎನ್ನುತ್ತಾರೆ.

ಜಾಗೃತಿ ಅಭಿಯಾನ?

ರೈತರಿಗೆ ಬಿತ್ತನೆ ಬೀಜ, ಕೀಟ ನಾಶಕ ಪೂರೈಸುವ ಕೃಷಿ ಇಲಾಖೆ ಸಿಂಪಡಣೆ ವಿಧಾನ, ರಕ್ಷಣೆ ಕ್ರಮಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸೋದು ಅಗತ್ಯವಾಗಿದೆ. ಚಸ್ಮಾ ಧರಿಸಿ, ಕೈಗೆ ಗ್ಲೌಸ್‌ ಹಾಕೊಕೊಂಡು, ಮುಖ, ಮೂಗಿಗೆ ಮಾಸ್ಕ್‌ ಹಾಕಿ ಕೀಟನಾಶಕ ಸಿಂಪಡಿಸುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ.

ಕೀಟನಾಶಕ ಸಿಂಪಡಣೆ ಮಾಡುವಾಗ ಕಣ್ಣೊಳಗೆ ಔಷಧಿ ಸೇರಿದೆ ಎಂದು ನಿತ್ಯ 10 ಕ್ಕಿಂತ ಹೆಚ್ಚು ರೈತರು, ಕಾರ್ಮಿಕರು ಆಸ್ಪತ್ರೆಗೆ ಬರುತ್ತಿದ್ದಾರೆ. ರಕ್ಷಣಾ ಕ್ರಮಗಳ ಬಗ್ಗೆ ಜಾಗೃತಿ ಅಗತ್ಯ. ಸಿಂಪಡಣೆ ಮಾಡೋವಾಗ ಕಣ್ಣಿಗೆ ಚಸ್ಮಾ, ಮುಖಕ್ಕೆ ಮಾಸ್ಕ್‌, ಕೈಗೆ ಗ್ಲೌಸ್‌ ಹಾಕಿದರೆ ಸಮಸ್ಯೆ ಇರದು. ಕೀಟನಾಶಕ ಕಣ್ಣು ಹೊಕ್ಕರೆ ದೃಷ್ಟಿಗೆ ಅಪಾಯ ನಿಶ್ಚಿತ.

ಡಾ.ವಿಶ್ವನಾಥ ರೆಡ್ಡಿ, ಖ್ಯಾತ ನೇತ್ರ ತಜ್ಞರು, ಕಲಬುರಗಿ

ತೊಗರಿ, ಹತ್ತಿಗೆ ಔಷಧಿ ಹೊಡೆಯುವಾಗ ಗಾಳಿಗೆ ಹಾರಿ ಕಣ್ಣ ಸೇರಿದೆ ಅಂತ ನಿತ್ಯ ಹತ್ತಾರು ರೈತರು ಬರುತ್ತಿರೋದು ಆತಂಕ ಮೂಡಿಸುತ್ತಿದೆ. ಈ ಬಗ್ಗೆ ಜಾಗೃತಿ ನೀಡುವ ಕೆಲಸವಾಗಬೇಕಿದೆ.

ಡಾ.ರಾಜಶ್ರೀ ರೆಡ್ಡಿ, ನೇತ್ರ ತಜ್ಞರು., ಕಲಬುರಗಿ

ಸಿಂಪಡಣೆಗೆ ಅಷ್ಚಸೂತ್ರಗಳು

1) ಕೀಟನಾಶಕ ಸಿಂಪಡಣೆ ಮಾಡುವಾಗ ಕಣ್ಣಿಗೆ ಚಶ್ಮಾ ಧರಿಸಬೇಕು.

2) ಸಿಂಪರಣಾ ಯಂತ್ರದ ನಾಝಲ್ ರಂಧ್ರ ಕಟ್ಟಿದಾಗ ಬಾಯಿಯಿಂದ ಊದಬೇಡಿ.

3) ಕೀಟನಾಶಕ ಡಬ್ಬಿಯನ್ನು ಜಾಗರೂಕರಾಗಿ, ಅಲುಗಾಡಿಸದೇ ಔಷಧಿ ಚೆಲ್ಲದಂತೆ ತೆಗೆಯಿರಿ

4) ಗಾಳಿಯಾಡುವ ಪ್ರದೇಶದಲ್ಲಿ ರಾಸಾಯನಿಕಗಳನ್ನು ಮಿಶ್ರಣ ಮಾಡಿ.

5) ಜೋರಾದ ಗಾಳಿ ಇರುವಾಗ ಮಿಶ್ರಣ ಮಾಡುವ, ಯಂತ್ರದಲ್ಲಿ ತುಂಬುವುದು ಬೇಡ

6) ನೇರವಾಗಿ ಕೈಯಿಂದ ಕೀಟ ನಾಶಕಗಳನ್ನು ಮಿಶ್ರಣ ಮಾಡದೇ ಕೋಲು ಬಳಸಿ.

7) ಸಿಂಪಡಣೆ ಸಮಯದಲ್ಲಿ ಆಹಾರ ತಿನ್ನುವುದಾಗಲಿ, ಕುಡಿಯುವುದಾಗಲಿ ಮಾಡಬೇಡಿ.

8) ಕಡ್ಡಾಯವಾಗಿ ಮಾಸ್ಕ್ ಹಾಗು ಕೈಗವಸು ಹಾಕಿಕೊಂಡು ಸಿಂಪಡಣೆ ಮಾಡಬೇಕು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ