ಕನ್ನಡಪ್ರಭ ವಾರ್ತೆ ರಾಮನಗರ
ಹೊಗೆ ರಹಿತ ಹಾಗೂ ಹೊಗೆ ಸಹಿತ ತಂಬಾಕು ಉತ್ಪನ್ನಗಳು ಮಾದಕ ವಸ್ತುಗಳ ಪಟ್ಟಿಗೆ ಸೇರಿವೆ, ಅವುಗಳಲ್ಲಿ ಹೊಗೆ ಬಿಡುವ ಸಿಗರೇಟ್‌ನಲ್ಲಿಯೇ 4000 ಕ್ಕೂ ಹೆಚ್ಚಿನ ರಸಾಯನಿಕ ಅಂಶಗಳಿದ್ದು, ಅವುಗಳಲ್ಲಿ 200 ವಿಷಕಾರಿ ಹಾಗೂ 60 ಕ್ಯಾನ್ಸರ್ ಉಂಟುಮಾಡುವ ರಸಾಯನಿಕಗಳಾಗಿವೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಜೆ. ಅರ್ಪಿತಾ ಹೇಳಿದರು.ತಾಲೂಕಿನ ಬಿ. ಬನ್ನಿಕುಪ್ಪೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಂಗಳೂರಿನ ಮದ್ಯಪಾನ ಸಂಯಮ ಮಂಡಳಿ, ರಾಮನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಬಿಡದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ರಸಾಯನಿಕ ಪದಾರ್ಥವಾಗಿರುವ ನಿಕೋಟಿನ್ ಜಗಿಯುವ ಹಾಗೂ ಸೇವಿಸುವ ತಂಬಾಕು ಪದಾರ್ಥಗಳಲ್ಲಿ ಬಳಕೆಯಾಗುತ್ತವೆ. ವಿಶ್ವದಾದ್ಯಂತ ಪ್ರತೀ ವರ್ಷ 6.6 ಲಕ್ಷ ಜನ ತಂಬಾಕು ಬಳಕೆಯಿಂದ ಸಾವಿಗೀಡಾಗುತ್ತಿದ್ದಾರೆ. ಶೇ. 25 ರಷ್ಟು ಜನರಿಗೆ ಕ್ಯಾನ್ಸರ್ ಆವರಿಸಿಕೊಳ್ಳುತ್ತಿದೆ, ರಾಜ್ಯದಲ್ಲಿ ಶೇ. 22.8 ಜನರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಶಾಸ್ವಕೋಶ ಹಾಗೂ ಜಠರದ ಹುಣ್ಣುಗಳು ಕಂಡುಬರುತ್ತವೆ. ಇವುಗಳ ಸೇವೆನೆ ಮಾಡುವವರು ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಾರೆ ಎಂದು ಹೇಳಿದರು.ತಂಬಾಕು ಚಟವನ್ನು ಬಿಡಿಸಲು ಜಿಲ್ಲಾಸ್ಪತ್ರೆಯಲ್ಲಿ ವ್ಯಸನ ಮುಕ್ತ ಕೇಂದ್ರವಿದೆ. ಅಲ್ಲಿ ನಿಕೋಟಿನ್ ರಿಪ್ಲೆಸ್ಮೆಂಟ್ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ನಿಕೋಟಿನ್ ಪ್ಯಾಚಸ್, ನಿಕೋಟಿನ್ ಗಮ್ಸ್ ಗಳನ್ನು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಲ್ಲಿ ಒಬ್ಬ ಆಪ್ತ ಸಮಾಲೋಚಕರಿದ್ದಾರೆ, ಅವರು ತಂಬಾಕು ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ಬಿಡಿಸುವ ಕೆಲಸ ಮಾಡುತ್ತಾರೆ. ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಯನ್ನು ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬನ್ನಿಕುಪ್ಪೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಂಬಾಕು ಮುಕ್ತ ಶಾಲೆಯೆಂದು ಘೋಷಿಸಿ ಬೋರ್ಡ್ ವಿತರಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ , ಮನಃಶಾಸ್ತ್ರಜ್ಞರಾದ ಚಂದ್ರಶೇಖರ್ , ಫಯಾಜ್ ಅಹಮ್ಮದ್ ಮಾತನಾಡಿದರು.ಬಿಡದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಮೇಲ್ವಿಚಾರಕರಾದ ನಳಿನಾ, ಶಾಲಾ ಮುಖ್ಯೋಪಾಧ್ಯಾಯರಾದ ಮಂಜುಳಾ, ಎಪಿಡಾ ಮಾಲಾಜಿಸ್ಟ್ ಗಳಾದ ಸೌಮ್ಯ, ಹಿಮಾ, ಆರೋಗ್ಯ ಸಹಾಯಕರಾದ ಸೌಮ್ಯ, ರೇಷ್ಮಾ ಉಪಸ್ಥಿತರಿದ್ದರು.