ಮಂಡ್ಯ ಜಿಲ್ಲಾದ್ಯಂತ ಒಣಗಿದ ಕಬ್ಬು: ‘ರೈತರ ರಕ್ತ ಕಣ್ಣೀರು’..!

KannadaprabhaNewsNetwork |  
Published : Jul 15, 2025, 11:45 PM IST
೧೫ಕೆಎಂಎನ್‌ಡಿ-೧ನೀರಿಲ್ಲದೆ ಕಬ್ಬು ಬೆಳೆ ಒಣಗುತ್ತಿರುವ ದೃಶ್ಯ. | Kannada Prabha

ಸಾರಾಂಶ

ಸರ್ಕಾರಕ್ಕೆ ಜೂನ್‌ನಲ್ಲಿ ಕೆಆರ್‌ಎಸ್ ಅಣೆಕಟ್ಟು ತುಂಬಿದ ದಾಖಲೆ ಬೇಕು. ಆದರೆ, ರೈತರ ಬೆಳೆಗಳಿಗೆ ಬೇಗ ನೀರು ಹರಿಸಿ ರಕ್ಷಣೆ ಮಾಡಿದ ದಾಖಲೆ ಮಾತ್ರ ಯಾರಿಗೂ ಬೇಡ. ಕೆಆರ್‌ಎಸ್ ಅಣೆಕಟ್ಟು ತುಂಬಿ ತುಳುಕುತ್ತಿದ್ದರೂ ಅಚ್ಚುಕಟ್ಟು ವ್ಯಾಪ್ತಿಯ ಕಬ್ಬು ಬೆಳೆಗೆ ಮಾತ್ರ ನೀರಿಲ್ಲದಂತಾಗಿದೆ. ಬೆಳೆ ಒಣಗುತ್ತಿರುವುದು ಕಂಡು ರೈತರು ರಕ್ತ ಕಣ್ಣೀರು ಸುರಿಸುವಂತಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಕ್ಕೆ ಜೂನ್‌ನಲ್ಲಿ ಕೆಆರ್‌ಎಸ್ ಅಣೆಕಟ್ಟು ತುಂಬಿದ ದಾಖಲೆ ಬೇಕು. ಆದರೆ, ರೈತರ ಬೆಳೆಗಳಿಗೆ ಬೇಗ ನೀರು ಹರಿಸಿ ರಕ್ಷಣೆ ಮಾಡಿದ ದಾಖಲೆ ಮಾತ್ರ ಯಾರಿಗೂ ಬೇಡ. ಕೆಆರ್‌ಎಸ್ ಅಣೆಕಟ್ಟು ತುಂಬಿ ತುಳುಕುತ್ತಿದ್ದರೂ ಅಚ್ಚುಕಟ್ಟು ವ್ಯಾಪ್ತಿಯ ಕಬ್ಬು ಬೆಳೆಗೆ ಮಾತ್ರ ನೀರಿಲ್ಲದಂತಾಗಿದೆ. ಬೆಳೆ ಒಣಗುತ್ತಿರುವುದು ಕಂಡು ರೈತರು ರಕ್ತ ಕಣ್ಣೀರು ಸುರಿಸುವಂತಾಗಿದೆ.

ಜೂನ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಬಂದ ನೀರನ್ನೆಲ್ಲಾ ತಮಿಳುನಾಡಿನತ್ತ ಹರಿಸುವುದಕ್ಕೆ ಪ್ರಾಮುಖ್ಯತೆ ನೀಡಿದರೇ ಹೊರತು ಒಣಗುತ್ತಿರುವ ಕಬ್ಬು ಬೆಳೆಗಳಿಗೆ ನೀರು ಹರಿಸುವುದಕ್ಕೆ ಆಸಕ್ತಿಯನ್ನೇ ತೋರಲಿಲ್ಲ. ನಾಲೆಗಳಿಗೆ ಅತಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಕಾರಣ ಕಬ್ಬು ಬೆಳೆಗಳಿಗೆ ನೀರು ಸಿಗದೆ ರೈತರು ಮಮ್ಮಲ ಮರುಗುತ್ತಿದ್ದಾರೆ.

1500 ಕ್ಯುಸೆಕ್‌ ನೀರು ಸಾಲುವುದೇ?

ಕಾವೇರಿ ಮಾತೆಗೆ ಬಾಗಿನ ಸಲ್ಲಿಸಲು ಬಂದ ಸಮಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಣೆಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೂ ತಕ್ಷಣದಿಂದಲೇ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೂ ನಾಲಾ ಆಧುನೀಕರಣ ಕೆಲಸದ ಕಾರಣ ಮುಂದಿಟ್ಟು ಎಂಟು ದಿನಗಳು ವಿಳಂಬವಾಗಿ ನೀರು ಹರಿಸಿದರು. ಆರಂಭದಿಂದಲೂ ನಾಲೆಗಳಿಗೆ ೧೩೦೦ ರಿಂದ ೧೫೦೦ ಕ್ಯುಸೆಕ್‌ವರೆಗೆ ಮಾತ್ರ ನೀರನ್ನು ಹರಿಸುತ್ತಿದ್ದಾರೆ ಎನ್ನುವುದು ರೈತರ ಆರೋಪವಾಗಿದೆ.

ಈ ವಿಷಯವಾಗಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಕೆರೆ-ಕಟ್ಟೆಗಳನ್ನು ತುಂಬಿಸುವ ಸಲುವಾಗಿ ಸದ್ಯ ಅಣೆಕಟ್ಟೆಯಿಂದ ನೀರನ್ನು ಬಿಡುಗಡೆ ಮಾಡಲಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೆಳೆಗಳಿಗೆ ನೀರು ಹರಿಸುವ ಸಂಬಂಧ ವೇಳಾಪಟ್ಟಿ ಬಿಡುಗಡೆ ಮಾಡಿದ ಬಳಿಕ ಪೂರ್ಣ ಪ್ರಮಾಣದಲ್ಲಿ ನೀರನ್ನು ನಾಲೆಗಳಿಗೆ ಹರಿಸಲಾಗುವುದು. ಜೊತೆಗೆ ಜುಲೈ ಮಧ್ಯಭಾಗದಿಂದ ನೀರು ಹರಿಸಿದ ದಾಖಲೆ ಇಲ್ಲ ಎನ್ನುತ್ತಿದ್ದಾರೆ.

ಐಸಿಸಿ ಸಭೆ ಕರೆಯಲು ವಿಳಂಬ:

ಅಣೆಕಟ್ಟು ಭರ್ತಿಯಾಗಿ, ರೈತರು ಬೆಳೆದ ಕಬ್ಬು ಒಣಗುತ್ತಿದ್ದರೂ ನಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಬೇಕೆಂಬ ಚಿಂತೆ ಜನಪ್ರತಿನಿಧಿಗಳಿಗೂ ಇದ್ದಂತಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಯನ್ನೇ ಕರೆಯದೆ ಬೇಕೆಂತಲೇ ವಿಳಂಬ ಮಾಡುತ್ತಿದ್ದಾರೆ. ಒಮ್ಮೆ ನಾಲೆಗಳಿಗೆ ಬೇಗ ನೀರು ಹರಿಸಿದರೆ ಮುಂದಿನ ವರ್ಷದಿಂದಲೂ ಅದೇ ಸಮಯಕ್ಕೆ ನೀರನ್ನು ಕೇಳುತ್ತಾರೆ. ಅದಕ್ಕಾಗಿ ಜುಲೈ ಕೊನೆಯ ವಾರದವರೆಗೂ ನೀರು ಹರಿಸುವುದನ್ನು ಮುಂದೂಡುವುದಕ್ಕೆ ನಿರ್ಧರಿಸಿರುವಂತೆ ಕಂಡುಬರುತ್ತಿದ್ದಾರೆ.

ಕೈಕೊಟ್ಟ ಮಳೆ; ರೈತರ ದುರದೃಷ್ಟ:

ಮಳೆ ಕೂಡ ರೈತರೊಂದಿಗೆ ಜೂಜಾಟವಾಡುತ್ತಿದೆ. ಆಗಸದಲ್ಲಿ ಮೋಡಗಳು ಆವರಿಸುತ್ತಿದ್ದರೂ ಮಳೆಯನ್ನು ಮಾತ್ರ ಸುರಿಸುತ್ತಿಲ್ಲ. ಬಟ್ಟೆ ತೇವವಾಗುಷ್ಟು ಮಳೆಯ ಹನಿಗಳನ್ನು ಹಾಕಿ ಕರಗಿಹೋಗುತ್ತಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗದಿರುವುದು ಹಾಗೂ ನಾಲೆ ನೀರು ಕಬ್ಬು ಬೆಳೆಗೆ ಸಮರ್ಪಕವಾಗಿ ಸಿಗದಿರುವುದರಿಂದ ದಿನೇ ದಿನೇ ಇಳುವರಿಯನ್ನು ಕಳೆದುಕೊಳ್ಳುತ್ತಿದೆ.

ಜುಲೈ ತಿಂಗಳು ಕೃಷಿ ಚಟುವಟಿಕೆ ಜಿಲ್ಲೆಯಲ್ಲಿ ಚುರುಕುಗೊಳ್ಳುವ ಸಮಯ. ಭೂಮಿಯನ್ನು ಹದಗೊಳಿಸಿ ಭತ್ತದ ಸಸಿ ಮಡಿ ಮಾಡಿಕೊಳ್ಳುವ ಕಾರ್ಯದಲ್ಲಿ ರೈತರು ನಿರತರಾಗುತ್ತಾರೆ. ಇದುವರೆಗೂ ನೀರಾವರಿ ಸಲಹಾ ಸಮಿತಿ ಸಭೆ ನಡೆಯದಿರುವುದರಿಂದ ಹಾಗೂ ಮಳೆಯೂ ಉತ್ತಮವಾಗಿ ಬೀಳದಿರುವುದರಿಂದ ರೈತರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ನಾಲೆ ತುಂಬಾ ನೀರು ಹರಿಯುವ ದಿನಗಳಿಗಾಗಿ ಎದುರುನೋಡುತ್ತಿದ್ದಾರೆ.

ನಾಟಿ ಮಾಡದಿದ್ದರೆ ಇಳುವರಿ ಸಿಗದು:

ಜುಲೈ ತಿಂಗಳಲ್ಲಿ ಭತ್ತವನ್ನು ಸಸಿ ಮಡಿ ಮಾಡಿಟ್ಟುಕೊಂಡು ನಾಟಿ ಮಾಡಿದರೆ ಒಳ್ಳೆಯ ಇಳುವರಿ ಕಾಣಬಹುದು. ಒಮ್ಮೆ ಆಗಸ್ಟ್ ತಿಂಗಳಿನಲ್ಲಿ ನಾಟಿ ಮಾಡಿದರೆ ನಿರೀಕ್ಷಿತ ಪ್ರಮಾಣದ ಇಳುವರಿ ಸಿಗುವುದಿಲ್ಲ ಎನ್ನುವುದು ಕೃಷಿಕರ ಮಾತಾಗಿದೆ. ಇದು ಸರ್ಕಾರ, ಜನಪ್ರತಿನಿಧಿಗಳು, ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅರ್ಥವೇ ಆಗುತ್ತಿಲ್ಲ. ಇದರಿಂದ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ.

ಮಳೆಗಾಲ ಬಂದರೂ ಮುಗಿಯದ ಕೆಲಸ:

ಮಂಡ್ಯ ತಾಲೂಕು ಹುಲಿಕೆರೆ ಸಮೀಪ ತಿಬ್ಬನಹಳ್ಳಿ ಬಳಿ ಮದ್ದೂರು ಮತ್ತು ಮಳವಳ್ಳಿ ವಿಭಾಗಗೊಳ್ಳುವ ನಾಲೆಯ ಬಳಿ ಸೇತುವೆಯನ್ನು ಕಿತ್ತುಹಾಕಿ ಕೆಲಸ ನಡೆಸುತ್ತಿರುವುದರಿಂದ ಹೆಬ್ಬಕವಾಡಿ ಸುತ್ತು ನಾಲೆಗೆ ಕೇವಲ ೨೫೦ ಕ್ಯುಸೆಕ್ ನೀರು ಹರಿದುಬರುತ್ತಿದೆ. ಈ ಭಾಗಕ್ಕೆಕ ೧೧೫೦ ಕ್ಯುಸೆಕ್ ಮತ್ತು ಮಳವಳ್ಳಿ ಭಾಗಕ್ಕೆ ೧೨೦೦ ಕ್ಯುಸೆಕ್‌ವರೆಗೂ ನೀರನ್ನು ಹರಿಸಬೇಕಿತ್ತು. ೨೫೦ ಕ್ಯುಸೆಕ್ ನೀರು ಇದುವರೆಗೂ ಹೆಬ್ಬಕವಾಡಿ ಸುತ್ತು ನಾಲೆಯನ್ನೇ ತಲುಪಿಲ್ಲ. ಇದರಿಂದ ಕಬ್ಬು ಬೆಳೆಗಳಿಗೆ ನೀರು ಸಿಗದೆ ಒಣಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರೊಬ್ಬರು ನೀರಾವರಿ ಇಲಾಖೆ ಅಧಿಕಾರಿಯೊಬ್ಬರಿಗೆ ಕಬ್ಬು ಬೆಳೆಗೆ ನೀರು ಹರಿಸದಿರುವ ಬಗ್ಗೆ ಕೇಳಿದಾಗ, ನೀವು ಕೇಳಿದ ತಕ್ಷಣವೇ ನೀರು ಹರಿಸಲು ಸಾಧ್ಯವಿಲ್ಲ. ಕೆರೆ-ಕಟ್ಟೆಗಳಿಗೆ ನೀರು ಹರಿಸುತ್ತಿದ್ದು, ಅವು ತುಂಬಿದ ಬಳಿಕ ನೀರು ಕೊಡುತ್ತೇವೆ. ಅಲ್ಲಿಯವರೆಗೂ ಸಮಾಧಾನದಿಂದ ಇರಬೇಕು ಎಂದಿದ್ದಾರೆ. ಬೆಳೆಗಳೆಲ್ಲಾ ಒಣಗಿಹೋದ ಮೇಲೆ ನೀರು ಕೊಟ್ಟರೆ ಏನು ಪ್ರಯೋಜನ ಎನ್ನುವುದು ರೈತರ ಪ್ರಶ್ನೆಯಾಗಿದೆ.ಈ ಸರ್ಕಾರಕ್ಕೆ ಮಾನ-ಮರ್ಯಾದೆಯೇ ಇಲ್ಲ. ಅಣೆಕಟ್ಟು ತುಂಬಿದ್ದರೂ ನಾಲೆಗಳಿಗೆ ಪೂರ್ಣ ಪ್ರಮಾಣದ ನೀರನ್ನು ಹರಿಸದೆ ಬೆಳೆಗಳನ್ನು ಒಣಗಿಸುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ರೈತರ ಸಂಕಷ್ಟ ಬೇಕಿಲ್ಲ. ಇತ್ತ ಮಳೆಯೂ ಉತ್ತಮವಾಗಿ ಬೀಳುತ್ತಿಲ್ಲ. ಅತ್ತ ನಾಲೆ ನೀರು ಕೂಡ ಬೆಳೆಗಳಿರುವ ಕಡೆಗೆ ಹರಿದುಬರುತ್ತಿಲ್ಲ. ಐಸಿಸಿ ಮೀಟಿಂಗ್ ಕೂಡ ನಡೆದಿಲ್ಲ. ಒಟ್ಟಾರೆ ರೈತರ ಕಷ್ಟ ಕೇಳೋರಿಲ್ಲ.

- ರಮೇಶ್, ರೈತ, ಕೀಲಾರಕೃಷಿ ಮತ್ತು ನೀರಾವರಿ ಇಲಾಖೆ ರೈತರ ಪಾಲಿಗೆ ಸತ್ತುಹೋಗಿವೆ. ಜೂನ್‌ನಲ್ಲೇ ಅಣೆಕಟ್ಟು ತುಂಬಿದ್ದರೂ ರೈತರಿಗೆ ಯಾವ ಪ್ರಯೋಜನವಿಲ್ಲ. ಯಥೇಚ್ಛ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ನಮ್ಮ ಕಾವೇರಿ ನೀರು ನಮ್ಮ ಬೆಳೆಗಳನ್ನು ತಣಿಸದೆ ನೂರಾರು ಕಿ.ಮೀ. ದೂರದ ನೆರೆರಾಜ್ಯದ ಬೆಳೆಗಳನ್ನು ತಣಿಸುತ್ತಿದ್ದಾಳೆ. ನಮ್ಮ ಕಬ್ಬು ಉರುವಲಾಗುವ ಸ್ಥಿತಿಯನ್ನು ತಲುಪುತ್ತಿದೆ.

- ನಾಗರಾಜು, ರೈತ, ಸಂತೆಕಸಲಗೆರೆಜೂನ್‌ನಲ್ಲಿ ಅಣೆಕಟ್ಟು ತುಂಬಿದರೆ ಸ್ಮಾರಕ ನಿರ್ಮಿಸಬೇಕು. ಅಣೆಕಟ್ಟು ತುಂಬಿ ಬೆಳೆಗಳಿಗೆ ನೀರು ಸಿಗದಿದ್ದರೆ ರೈತರ ಸಮಾಧಿ ಕಟ್ಟಬೇಕಲ್ಲವೇ. ಅದನ್ನೇ ಈಗ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಜಲಾಶಯ ತುಂಬಿದ್ದರೂ ಐಸಿಸಿ ಸಭೆ ನಡೆಸುತ್ತಿಲ್ಲವೇಕೆ. ರೈತರ ಬಗ್ಗೆ ಕರುಣೆಯಿಲ್ಲ. ಬೆಳೆಗಳನ್ನು ಉಳಿಸುವ ಕಾಳಜಿ ಇಲ್ಲ. ಎಂಥಾ ಕಠಿಣ ಹೃದಯಿಗಳನ್ನು ಜನಪ್ರತಿನಿಧಿಗಳನ್ನಾಗಿ ಆರಿಸಿಕೊಂಡಿದ್ದೇವೆ. ಇದು ನಾಚಿಕೆಗೇಡು.

- ನಂಜುಂಡೇಗೌಡ, ರೈತ ಮುಖಂಡರುಹಿಂದೆ ಜುಲೈ ಮೊದಲ ವಾರದಲ್ಲಿ ನೀರು ಹರಿಸಿರುವುದಕ್ಕೆ ದಾಖಲೆಗಳಿವೆ. ದಾಖಲೆಗಳನ್ನು ಮುಚ್ಚಿಟ್ಟು ಜನಪ್ರತಿನಿಧಿಗಳು-ಅಧಿಕಾರಿಗಳು ನಾಟಕವಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆ ಉತ್ತಮವಾಗಿ ಬೀಳುತ್ತಿಲ್ಲ. ಕಬ್ಬು ಬೆಳೆ ಒಣಗಿ ಉರುವಲಾಗುತ್ತಿದೆ. ವಾತಾವರಣದಲ್ಲಿ ಗಾಳಿ ಹೆಚ್ಚಿರುವುದರಿಂದ ತೇವಾಂಶವನ್ನು ಬೇಗ ಹೀರಿಕೊಳ್ಳುತ್ತಿದೆ. ಈಗ ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯವಿದೆ. ಈ ಸಾಮಾನ್ಯ ಜ್ಞಾನ ತಿಳಿಯುತ್ತಿಲ್ಲವೇ.

- ವೇಣುಗೋಪಾಲ್, ಅಧ್ಯಕ್ಷರು, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟನಾಲೆಗಳಿಗೆ ನೀರು ಬಿಡುಗಡೆ ಮಾಡಿದ್ದರೂ ಕೆಳಭಾಗಕ್ಕೆ ನೀರು ಸರಿಯಾಗಿ ತಲುಪುತ್ತಿಲ್ಲವೆಂದರೆ ನೀರಾವರಿ ಅಧಿಕಾರಿಗಳು ನೀರುಗಂಟಿಗಳೊಂದಿಗೆ ಸ್ಥಳಗಳಿಗೆ ತೆರಳಿ ಎಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕು. ನೀರು ಬಿಟ್ಟು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ. ನಾಲೆಗಳಲ್ಲಿ ಕಸ, ಕಡ್ಡಿ, ಜೊಂಡು ಬೆಳೆದಿದ್ದರೆ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಿದೆ.

- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘಸದ್ಯ ನಾಲೆಗಳಿಗೆ ೧೫೦೦ ಕ್ಯುಸೆಕ್ ನೀರು ಬಿಟ್ಟಿದ್ದೇವೆ. ಈ ನೀರು ಕೆರೆ-ಕಟ್ಟೆ ತುಂಬಿಸುವುದಕ್ಕೆ ಮಾತ್ರ. ಕಬ್ಬು ಬೆಳೆ ಎಲ್ಲಿ ಹೆಚ್ಚಿದೆಯೋ ಆ ಭಾಗಕ್ಕೆ ಮಾತ್ರ ನೀರು ಹರಿಸುತ್ತಿದ್ದೇವೆ. ಹೆಬ್ಬಕವಾಡಿ ಭಾಗಕ್ಕೆ ನೀರು ಹರಿಸುವುದಕ್ಕೆ ನಾಲಾ ಕೆಲಸ ನಡೆಯುತ್ತಿದೆ. ಮುಂದಿನ ವಾರ ಐಸಿಸಿ ಸಭೆ ನಡೆಯಲಿದೆ. ನಂತರ ಬೆಳೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುವುದು.

- ರಘುರಾಮ್, ಅಧೀಕ್ಷಕ ಅಭಿಯಂತರ, ಕೆಆರ್‌ಎಸ್

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ